ನ್ಯಾಮತಿ: ಇಲ್ಲಿನಪಶು ಆಸ್ಪತ್ರೆಗೆ ಮಂಜೂರಾಗಿರುವ ಪಶು ಚಿಕಿತ್ಸಾ ವಾಹನವು ವೈದ್ಯರು, ಸಹಾಯಕರು, ಚಾಲಕರು ಇಲ್ಲದೇ
ನಿಷ್ಪ್ರಯೋಜಕವಾಗಿದೆ.
ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮ (ಪಶು ಸಂಜೀವಿನಿ) ಯೋಜನೆಯಡಿ ತಾಲ್ಲೂಕಿಗೆ ಎರಡು ತಿಂಗಳ ಹಿಂದೆ ವಾಹನ ಮಂಜೂರಾಗಿತ್ತು.
ಜಾನುವಾರುಗಳಿಗೆ ತುರ್ತು ಸೇವೆಯನ್ನು ನೀಡಲು ರಾಜ್ಯದಲ್ಲಿ 290 ಸಂಚಾರ ಪಶು ಚಿಕಿತ್ಸಾ ವಾಹನಗಳನ್ನು ನೀಡಲಾಗಿದೆ. ಅದರಲ್ಲಿ ನ್ಯಾಮತಿ ಪಶು ಆಸ್ಪತ್ರೆಗೂ ಒಂದನ್ನು ನೀಡಲಾಗಿದೆ. ಆದರೆ ಮಂಜೂರಾಗಿ ಬಂದ ದಿನದಿಂದ ಆಸ್ಪತ್ರೆಯ ಎದುರು ನಿಂತಿದೆ. ಚಾಲಕರೂ ಇಲ್ಲ. ವೈದ್ಯರೂ ಇಲ್ಲ.
ಪಶು ಚಿಕಿತ್ಸಾ ವಾಹನಗಳನ್ನು ಕೇವಲ ತುರ್ತು ಸೇವೆಗಳನ್ನು ನೀಡಲು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಹಾಗೂ ಸಂಜೆ 5ರಿಂದ ಬೆಳಿಗ್ಗೆ 8ರ ತುರ್ತು ಚಿಕಿತ್ಸೆಗೆ ಸಹಾಯವಾಣಿ ಕರೆ ಆಧರಿಸಿ ಬಳಸಲಾಗುತ್ತದೆ. ಲಸಿಕಾ ಕಾರ್ಯಕ್ರಮಗಳಲ್ಲೂ ಬಳಸಲಾಗುತ್ತದೆ.
ಹಲವೆಡೆ ಚರ್ಮಗಂಟು ರೋಗಉಲ್ಬಣಿಸುತ್ತಿದೆ. ಇಂತಹ ಸಂದರ್ಭದಲ್ಲೂ ಕರೆ ಮಾಡಿದರೂ ವಾಹನ ಸೇವೆ ಲಭ್ಯ ಇಲ್ಲ ಎಂಬ ದೂರು ರೈತರದ್ದು.
‘ವೈದ್ಯರು, ಸಹಾಯಕ ಮತ್ತು ಚಾಲಕರನ್ನು ನೇಮಿಸಿಲ್ಲ. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ವಾಹನಗಳನ್ನು ಖರೀದಿಸುವ ಅಗತ್ಯ ಏನಿತ್ತು. ಆಸ್ಪತ್ರೆಯಲ್ಲಿ ವಾಹನ ನಿಲ್ಲಿಸಲು ಶೆಡ್ ಇಲ್ಲ. ಬಿಸಿಲು, ಮಳೆಯಲ್ಲಿ ವಾಹನ ನಿಂತು ಹಾಳಾಗುತ್ತಿದೆ. ಸರ್ಕಾರದ ಯೋಜನೆ ಹಳ್ಳ ಹಿಡಿಯುತ್ತಿದ್ದು, ಸಂಬಂಧಿಸಿದವರು ಗಮನಹರಿಸಬೇಕು’ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಹೊಸಮನೆ ಮಲ್ಲಿಕಾರ್ಜುನ್, ಮರುಡಪ್ಪ, ಸಹದೇವರೆಡ್ಡಿಒತ್ತಾಯಿಸಿದ್ದಾರೆ.
‘ಇಲಾಖೆಯಿಂದ ಸಂಚಾರ ಪಶು ಚಿಕಿತ್ಸಾ ವಾಹನಗಳನ್ನು ನೀಡಲಾಗಿದೆ. ಆದರೆ ವೈದ್ಯರು, ಸಹಾಯಕ ಮತ್ತು ಚಾಲಕರ ನೇಮಕ ಆಗಿಲ್ಲ. ಸಿಬ್ಬಂದಿ ನೇಮಕ ಮಾಡುವಂತೆ ಮೇಲಧಿಕಾರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ನ್ಯಾಮತಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಚಂದ್ರಶೇಖರ ಹೊಸಮನೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.