ದಾವಣಗೆರೆ: ‘ನೀವು ಇತ್ತೀಚೆಗೆ ಉಪ ನೋಂದಣಾಧಿಕಾರಿ ಕಚೇರಿಗೆ ತೆರಳಿ ಆಸ್ತಿ ಖರೀದಿ, ಮಾರಾಟ ಮತ್ತಿತರ ನೋಂದಣಿ ಕಾರಣಕ್ಕೆ ಬಯೋಮೆಟ್ರಿಕ್ (ಹೆಬ್ಬೆರಳಿನ ಗುರುತು) ನೀಡಿದ್ದರೆ ನಿಮ್ಮ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿರುವ ಹಣ ಸುರಕ್ಷಿತವಲ್ಲ’...
ಈಗಾಗಲೇ ಹಣ ಕಳೆದುಕೊಂಡವರ ಉದಾಹರಣೆ ಇಟ್ಟುಕೊಂಡು ಬ್ಯಾಂಕ್‌ಗಳ ಮುಖ್ಯಸ್ಥರೇ ಹೇಳುತ್ತಿರುವ ಮಾತಿದು.
ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ (ಎಇಪಿಎಸ್) ಮೂಲಕ ಹಣ ಲಪಟಾಯಿಸಲಾಗುತ್ತಿದ್ದು, ಆಧಾರ್‌ಗೆ ಜೋಡಣೆಯಾಗಿರುವ ಬಯೋ ಮೆಟ್ರಿಕ್ ಅನ್ನು ಸಂಬಂಧಿಸಿದ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಡಿಸೇಬಲ್ ಮಾಡಿಕೊಳ್ಳುವಂತೆಯೂ ಅವರು ಗ್ರಾಹಕರಿಗೆ ಸಲಹೆ ನೀಡುತ್ತಿದ್ದಾರೆ.
ಆಸ್ತಿ ಖರೀದಿ, ಮಾರಾಟ ಪ್ರಕ್ರಿಯೆಗಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬಯೋ ಮೆಟ್ರಿಕ್ ನೀಡಿರುವವರ ಖಾತೆಯಿಂದ ಸೈಬರ್ ಖದೀಮರು ಹಣ ಲಪಟಾಯಿಸುತ್ತಿದ್ದಾರೆ. ಈ ರೀತಿ ಅಕ್ರಮವಾಗಿ ಹಣ ವರ್ಗಾಯಿಸಿಕೊಂಡಾಗ ಬ್ಯಾಂಕ್ ಖಾತೆದಾರರು ಓಟಿಪಿ ಸಂಖ್ಯೆ ನೀಡುವ ಅಗತ್ಯವೂ ಇಲ್ಲದ್ದರಿಂದ ಹಣ ದೋಚುವುದು ಸುಲಭವಾಗುತ್ತಿದೆ.
ಅಲ್ಲದೇ, ಎಇಪಿಎಸ್ ಮೂಲಕ ಸಾರ್ವಜನಿಕರ ಬ್ಯಾಂಕ್‌ನ ಉಳಿತಾಯ ಖಾತೆಯಿಂದ ಇಂತಿಷ್ಟು ಹಣ ‘ಡೆಬಿಟ್’ ಆಗಿದೆ ಎಂಬ ಸಂದೇಶವೂ ಮೋಸಕ್ಕೊಳಗಾಗುವ ಗ್ರಾಹಕರ ಮೊಬೈಲ್‌ಗೆ ಬರುವುದಿಲ್ಲ. ಪಾಸ್‌ಬುಕ್‌ನಲ್ಲಿ ನಮೂದಾದ ವಹಿವಾಟಿನ ವಿವರ ಪರಿಶೀಲಿಸಿದಾಗ ಮೋಸಕ್ಕೊಳಗಾದ ವಿಷಯ ಬೆಳಕಿಗೆ ಬರುತ್ತಿದೆ.
ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆ ಇಂತಹ ನೂರಾರು ಪ್ರಕರಣಗಳು ನಡೆದಿವೆ. ಹೀಗೆ ಮೋಸಕ್ಕೊಳಗಾದ ಬಹುತೇಕರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬಯೋ ಮೆಟ್ರಿಕ್ ನೀಡಿದವರು. ಅಲ್ಲಿ ದಾಖಲಾಗುವ ಡೇಟಾ ಹ್ಯಾಕ್ ಮಾಡಿಯೇ ಸಾರ್ವಜನಿಕರ ಖಾತೆಗೆ ಕನ್ನ ಹಾಕಲಾಗುತ್ತಿದೆ ಎಂದು ವಿವಿಧ ಬ್ಯಾಂಕ್‌ಗಳ ಮೂಲಗಳು ತಿಳಿಸಿವೆ.
ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆಧಾರ್ ಜೊತೆ ಜೋಡಣೆಯಾಗಿರುವ ಬಯೋ ಮೆಟ್ರಿಕ್ ‘ಡಿಸೇಬಲ್’ ಮಾಡುವಂತೆ ಆಯಾ ಬ್ಯಾಂಕ್ ಮೂಲಕ ಸಲಹೆ ನೀಡಲಾಗುತ್ತಿದೆ. ಅನೇಕರಿಗೆ ಈ ಸಂಬಂಧದ ಮಾಹಿತಿಯ ಕೊರತೆ ಇರುವುದರಿಂದ ಮೋಸದ ಪ್ರಕರಣಗಳು ಹೆಚ್ಚುತ್ತಲೇ ಇವೆ.
ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ನಿವೃತ್ತ ಪ್ರಾಚಾರ್ಯ ಎ.ಬಿ. ಪಾಟೀಲ ಅವರ ಖಾತೆಯಿಂದ ₹ 35,999 ಎಗರಿಸಲಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ಎಸ್‌ಬಿಐ ಗ್ರಾಹಕ ಅರುಣ್ ಅಗಸನಕಟ್ಟೆ ಹಾಗೂ ಪ್ರತಿಭಾ ದಂಪತಿಯ ಖಾತೆಯಿಂದ ಒಟ್ಟು ₹ 39,900 ಹೋಗಿದೆ. ಇವರೂ ಈಚೆಗೆ ಆಸ್ತಿ ನೋಂದಣಿಗಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬಯೋ ಮೆಟ್ರಿಕ್ ನೀಡಿದ್ದರು.
ಯುಐಡಿಎಐ (ಆಧಾರ್ ನೋಂದಣಿ ಮತ್ತು ದೃಢೀಕರಣ) ಮೂಲಕ ನೀಡಲಾದ ಮಾರ್ಗಸೂಚಿ ಹೊರತಾಗಿಯೂ ಬ್ಯಾಂಕ್‌ಗಳು ಗ್ರಾಹಕರ ಖಾತೆ ಸಂಖ್ಯೆಯೊಂದಿಗೆ ಆಧಾರ್ ಲಿಂಕ್ ಮಾಡಲು ಒತ್ತಾಯಿಸುತ್ತಿವೆ. ಅನುಮತಿಯಿಲ್ಲದೇ ಗ್ರಾಹಕರ ಬಯೋ ಮೆಟ್ರಿಕ್ ಮಾಹಿತಿಯನ್ನು ಎಇಪಿಎಸ್‌ಗೆ ಅಳವಡಿಸಲಾಗುತ್ತಿದೆ. ಈ ಕಾರಣದಿಂದ ಗ್ರಾಹಕ ಹಣ ಕಳೆದುಕೊಂಡರೆ ಅದಕ್ಕೆ ಬ್ಯಾಂಕ್‌ಗಳೇ ಜವಾಬ್ದಾರಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಆದರೂ ಎಇಪಿಎಸ್‌ಗೆ ಗ್ರಾಹಕರ ಮಾಹಿತಿ ಬಹಿರಂಗ ಆಗುವ ಪ್ರಕ್ರಿಯೆ ನಿಂತಿಲ್ಲ.
ಮೋಸ ಹೋಗುತ್ತಿರುವವರು ಸೈಬರ್ ಅಪರಾಧ ಠಾಣೆ (ಸಿಇಎನ್)ಗೆ ಈ ಸಂಬಂಧದ ದಾಖಲೆಗಳೊಂದಿಗೆ ದೂರು ಸಲ್ಲಿಸಿ, ನಂತರ ಬ್ಯಾಂಕ್ ಮುಖ್ಯಸ್ಥರಿಗೆ ಆ ದೂರಿನ ಪ್ರತಿಯನ್ನು ಸಲ್ಲಿಸುತ್ತಿದ್ದಾರೆ. ಕೆಲವರಿಗೆ ಬ್ಯಾಂಕ್ ಮೂಲಕ ಹಣ ವಾಪಸ್ ನೀಡಲಾಗಿದೆ. ಆದರೂ, ಯಾರೊಬ್ಬರೂ ಉಪ ನೋಂದಣಾಧಿಕಾರಿ ಕಚೇರಿ ಗಮನಕ್ಕೆ ತರುತ್ತಿಲ್ಲ. ಯಾವ ಮೂಲದಿಂದ ಈ ಅಕ್ರಮಕ್ಕೆ ಅವಕಾಶ ಸಿಗುತ್ತಿದೆಯೋ ಅಲ್ಲಿಂದಲೇ ಇದರ ತಡೆಗೆ ಕ್ರಮವಾಗಬೇಕಿದೆ ಎಂದೂ ಬ್ಯಾಂಕ್‌ಗಳ ಮುಖ್ಯಸ್ಥರು ಸಲಹೆ ನೀಡಿದ್ದಾರೆ.
‘ಕಚೇರಿಯಲ್ಲಿ ಬಯೋ ಮೆಟ್ರಿಕ್ ನೀಡಿದ್ದರಿಂದ ಹಣ ಕಳೆದುಕೊಂಡಿರುವುದಾಗಿ ಈವರೆಗೆ ಯಾರೂ ನಮಗೆ ದೂರು ನೀಡಿಲ್ಲ’ ಎಂದು ದಾವಣಗೆರೆ ಜಿಲ್ಲಾ ಉಪ ನೋಂದಣಾಧಿಕಾರಿ ಇಸ್ಮಾಯಿಲ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ (ಎಇಪಿಎಸ್) ಹಣ ಪಾವತಿ ಸೇವೆಯಾಗಿದ್ದು, ಬ್ಯಾಂಕ್ ಗ್ರಾಹಕರು ಆಧಾರ್ ಅನ್ನು ಗುರುತಾಗಿ ಬಳಸಲು, ಆಧಾರ್ ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆಯನ್ನು ಪ್ರವೇಶಿಸಲು ಮತ್ತು ಬ್ಯಾಲೆನ್ಸ್ ಮಾಹಿತಿ, ನಗದೀಕರಣ, ಹಣ ವರ್ಗಾವಣೆ ಮತ್ತಿತರ ಬ್ಯಾಂಕಿಂಗ್ ವಹಿವಾಟು ನಡೆಸಲು ಅನುವು ಮಾಡಿಕೊಡುವ ವ್ಯವಸ್ಥೆಯಾಗಿದೆ. ಗ್ರಾಹಕರ ಆಧಾರ್ ಸಂಖ್ಯೆ ನೀಡಿ ಬಯೋಮೆಟ್ರಿಕ್ ಒದಗಿಸಿದರೆ ಈ ವ್ಯವಸ್ಥೆ ಮೂಲಕ ಹಣ ಪಡೆಯಬಹುದಾಗಿದೆ.
ನನ್ನ ಖಾತೆಯಿಂದ ಹಂತ ಹಂತವಾಗಿ ₹ 35,999 ಹಣ ಕಡಿತವಾಗಿದೆ. ಈ ಸಂಬಂಧ ಮೆಸೇಜ್ ಬಂದಿಲ್ಲ. ನಾನು ಯಾರಿಗೂ ಓಟಿಪಿ ನೀಡಿಲ್ಲ. ಈಗಾಗಲೇ ದೂರು ನೀಡಿದ್ದು, ಹಣ ವಾಪಸ್ ಸಿಗುವ ಭರವಸೆಯಲ್ಲಿದ್ದೇನೆ.–ಎ.ಬಿ. ಪಾಟೀಲ, ನಿವೃತ್ತ ಪ್ರಾಚಾರ್ಯ, ದಾವಣಗೆರೆ
ಈಚೆಗೆ ಪತ್ನಿಯ ಜೊತೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಗಾಗಿ ಬಯೋ ಮೆಟ್ರಿಕ್ ನೀಡಿದ್ದೆ. ಡಿಸೆಂಬರ್ 24 ರಿಂದ 29ರ ಅವಧಿಯಲ್ಲಿ ಹಂತ ಹಂತವಾಗಿ ₹ 39,900 ಎಇಪಿಎಸ್ ಹೆಸರಿನಲ್ಲಿ ಡೆಬಿಟ್ ಆಗಿದೆ. ಈ ಸಂಬಂಧ ದೂರು ನೀಡಿದ್ದೇನೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲಾದ ಮಾಹಿತಿಯನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ.–ಅರುಣ್ ಅಗಸನಕಟ್ಟೆ, ದಾವಣಗೆರೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.