ಬಸವಾಪಟ್ಟಣ: ಇಲ್ಲಿನ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ರೈತರು ಬೇಸಿಗೆ ಹಂಗಾಮಿನ ಭತ್ತದ ನಾಟಿಗೆ ಈಗಾಗಲೇ ಸಿದ್ಧತೆ ನಡೆಸಿದ್ದಾರೆ.
ಭದ್ರಾ ನಾಲಾ ಅಚ್ಚುಕಟ್ಟು ಮತ್ತು ಸೂಳೆಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 3,300 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗುತ್ತಿದ್ದು, ಈಗಾಗಲೇ ಅರ್ಧದಷ್ಟು ರೈತರು ಕೊಳವೆಬಾವಿ ಮತ್ತು ಹಳ್ಳದ ನೀರಿನ ಸಹಾಯದಿಂದ ಭತ್ತದ ಸಸಿಗಳನ್ನು ಬೆಳೆಸಿದ್ದಾರೆ.
ಜನವರಿ ಮೊದಲ ವಾರದಲ್ಲಿ ಎರಡೂ ಅಚ್ಚುಕಟ್ಟು ಪ್ರದೇಶದ ನಾಲೆಗಳಲ್ಲಿ ನೀರು ಹರಿಸಲಾಗುತ್ತಿದ್ದು, ನಾಟಿ ಆರಂಭವಾಗಲಿದೆ. ಉಳಿದ ರೈತರು ನಾಲೆಗಳಲ್ಲಿ ನೀರು ಬಂದಮೇಲೆ ಭತ್ತದ ಬೀಜಗಳನ್ನು ಚೆಲ್ಲಿ ಸಸಿಗಳನ್ನು ಬೆಳೆಸುತ್ತಾರೆ. ಈಭಾಗದಲ್ಲಿ ಈಚೆಗೆ ಆರ್.ಎನ್.ಆರ್. ತಳಿಯ ಭತ್ತದ ಉತ್ಪಾದನೆ ಹೆಚ್ಚಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿ ಡಾ.ಡಿ.ಎಂ. ರಂಗಸ್ವಾಮಿ.
ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ಸೂಳೆಕೆರೆಯ ಬಸವನ ನಾಲಾ ಮತ್ತು ಸಿದ್ಧನ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 6,000 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗುತ್ತಿದೆ. ನಾಲೆಗಳಲ್ಲಿ ಹೂಳು ತುಂಬಿದ್ದು, ಸ್ವಚ್ಛಗೊಳಿಸದೇ ಇರುವುದರಿಂದ ಗಿಡಗಳು ಬೆಳೆದು ನೀರು ಹರಿಯಲು ಅಡ್ಡಿಯಾಗಿದೆ ಎಂದು ಕಣಿವೆ ಬಿಳಚಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಪಿ.ಶೇಖರಪ್ಪ ದೂರಿದರು.
ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಯಾಂತ್ರೀಕೃತ ನಾಟಿಗಾಗಿ ಕೆಲವು ಕಡೆ ಭತ್ತದ ಸಸಿಗಳನ್ನು ಪ್ಲಾಸ್ಟಿಕ್ ಕ್ರೇಟ್‌ಗಳಲ್ಲಿ ಬೆಳೆಸಲಾಗಿದೆ.
ನಾಲೆಗಳಲ್ಲಿ ನೀರು ಬಂದ ಕೂಡಲೇ ಈ ನವೀನ ಮಾದರಿಯ ನಾಟಿ ಆರಂಭಿಸಲಾಗುತ್ತದೆ ಎನ್ನುತ್ತಾರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಹನುಮಂತಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.