ADVERTISEMENT

ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ: ಬಸವರಾಜ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 16:15 IST
Last Updated 16 ಜೂನ್ 2024, 16:15 IST
ಚನ್ನಗಿರಿ ತಾಲ್ಲೂಕಿನ ಹಿರೇಮಳಲಿ ಗ್ರಾಮ ಪಂಚಾಯಿತಿಯಲ್ಲಿ ಭಾನುವಾರ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಲಾಯಿತು
ಚನ್ನಗಿರಿ ತಾಲ್ಲೂಕಿನ ಹಿರೇಮಳಲಿ ಗ್ರಾಮ ಪಂಚಾಯಿತಿಯಲ್ಲಿ ಭಾನುವಾರ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಲಾಯಿತು   

ಹಿರೇಮಳಲಿ (ಚನ್ನಗಿರಿ): ‘ಜಿಲ್ಲೆಯ ಎಲ್ಲ ತಾಲ್ಲೂಕುಗಳ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು ಎಂಬ ಉದ್ದೇಶದಿಂದ ನೀರಿನ ಗುಣಮಟ್ಟ ಪರೀಕ್ಷೆ ಮಾಡಿ ವರದಿಯನ್ನು ನೀಡಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಬಸವರಾಜ್ ತಿಳಿಸಿದರು.

ತಾಲ್ಲೂಕಿನ ಹಿರೇಮಳಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನೀರಿನ ಗುಣಮಟ್ಟ ಪರೀಕ್ಷಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿಯಿಂದ ಆಯಾ ಗ್ರಾಮ ಪಂಚಾಯಿತಿಗಳಿಗೆ ಹೋಗಿ ಗ್ರಾಮ ಪಂಚಾಯಿತಿಗಳಿಂದ ಪೂರೈಸುವ ಕುಡಿಯುವ ನೀರು ಪರೀಕ್ಷಿಸಲಾಗುತ್ತಿದೆ. ಹಿರೇಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಿರೇಮಳಲಿ, ಮೇಳನಾಯಕನಕಟ್ಟೆ, ಜಯಂತಿ ನಗರ, ಭೈರನಹಳ್ಳಿ, ಗಾಳಿಹಳ್ಳಿ, ಚಿಕ್ಕಮಾಡಾಳ್, ಬಿಆರ್‌ಟಿ ಕಾಲೊನಿ ಬರುತ್ತದೆ. ಈ ಗ್ರಾಮಗಳ ಕೊಳವೆಬಾವಿಗಳ  ನೀರನ್ನು ತರಿಸಿಕೊಂಡು ಗುಣಮಟ್ಟ ಪರೀಕ್ಷೆ ಮಾಡಲಾಗಿದೆ ಎಂದರು.

ADVERTISEMENT

ಈ ಕೊಳವೆಬಾವಿಗಳಲ್ಲಿ ಯಾವುದೇ ರೀತಿಯ ಫ್ಲೋರೇಡ್ ಅಂಶ ಹಾಗೂ ಇನ್ನಿತರೆ ಆರೋಗ್ಯಕ್ಕೆ ಹಾನಿ ಮಾಡುವ ಅಂಶಗಳಾಗಲಿ ಕಂಡುಬಂದಿಲ್ಲ. ಈ ಕೊಳವೆಬಾವಿಗಳ ನೀರು ಕುಡಿಯಲು ಯೋಗ್ಯವಾಗಿದೆ. ಗ್ರಾಮ ಪಂಚಾಯಿತಿಯವರು ಕೊಳವೆಬಾವಿಗಳ ಸುತ್ತ ಸ್ವಚ್ಛತೆ ಕಾಪಾಡಬೇಕು. ಕಲುಷಿತ ನೀರು ಕೊಳವೆಬಾವಿಗಳಿಗೆ ಸೇರದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಮೂಡಲ ಗಿರಿಯಪ್ಪ, ಎಂ.ವಿ. ರಮೇಶ್, ಸಾಗರ್ ಹಾಗೂ ಹೇಮಂತ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.