ADVERTISEMENT

ಸಂತೇಬೆನ್ನೂರು | ಕೆಪಿಎಸ್‌ಗೆ ಹೆಚ್ಚುವರಿ ಕೊಠಡಿ ಮಂಜೂರಾತಿಗೆ ಕ್ರಮ: ಶಿವಗಂಗಾ

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 14:24 IST
Last Updated 11 ಜೂನ್ 2024, 14:24 IST
ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಮಂಗಳವಾರ ಶಾಸಕ ಬಸವರಾಜು ವಿ.ಶಿವಗಂಗಾ ಭೇಟಿ ನೀಡಿ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು
ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಮಂಗಳವಾರ ಶಾಸಕ ಬಸವರಾಜು ವಿ.ಶಿವಗಂಗಾ ಭೇಟಿ ನೀಡಿ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು    

ಸಂತೇಬೆನ್ನೂರು: ‘ಗ್ರಾಮದಲ್ಲಿ ಪರಿಪೂರ್ಣ ಶಿಕ್ಷಣ ನೀಡಲು ಕರ್ನಾಟಕ ಪಬ್ಲಿಕ್ ಶಾಲೆಗೆ ಬೇಕಾದ ಮೂಲ ಸೌಲಭ್ಯಗಳ ಜತೆ ಶೀಘ್ರ ಹೆಚ್ಚುವರಿ ಕೊಠಡಿಗಳ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡಿದರು.

‘ಎಲ್‌ಕೆಜಿಯಿಂದ ದ್ವಿತೀಯ ಪಿಯುವರೆಗೆ ಒಂದೇ ಸೂರಿನಡಿ 1,600 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಾಥಮಿಕ, ಪ್ರೌಢ ಹಾಗೂ ಪಿಯು ಹಂತದ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ ಕೊರತೆ ಪಟ್ಟಿ ಮಾಡಲಾಗಿದೆ. ಶುದ್ಧ ನೀರಿನ ಘಟಕ, ಡಿಜಿಟಲ್ ಗ್ರಂಥಾಲಯವನ್ನು ಶೀಘ್ರ ಮಂಜೂರು ಮಾಡಲಾಗುವುದು. ಎಲ್‌ಕೆಜಿ ಇನ್ನೊಂದು ತರಗತಿ ತೆರೆಯಲು ಪ್ರಾಥಮಿಕ ಶಿಕ್ಷಣ ನಿರ್ದೇಶಕರೊಂದಿಗೆ ಮಾತನಾಡಲಾಗಿದೆ. ಒಂದೆರಡು ದಿನಗಳಲ್ಲಿ ಮಂಜೂರಾಗುವ ಭರವಸೆ ಇದೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಸಕಲ ಸೌಲಭ್ಯ ನೀಡಿದೆ. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿ ಭವಿಷ್ಯ ರೂಪಿಸುವ ಫಲಿತಾಂಶ ತರಬೇಕು’ ಎಂದರು.

ADVERTISEMENT

ಕರ್ನಾಟಕ ಪಬ್ಲಿಕ್ ಶಾಲೆಗೆ ಸೇರಿದ 42 ಎಕರೆ ಜಮೀನಿನ ಬಗ್ಗೆ ಸಾರ್ವಜನಿಕರು ಗಮನ ಸೆಳೆದ ನಂತರ ಪ್ರತಿಕ್ರಿಯಿಸಿ, ‘ಜಮೀನಿನ ಎಲ್ಲ ದಾಖಲೆಗಳನ್ನು ಸಂಗ್ರಹಿಸಲು ಕಾಲೇಜು ಅಭಿವೃದ್ಧಿ ಸಮಿತಿಗೆ ಸೂಚಿಸಲಾಗಿದೆ. ಆನಂತರ ತಹಶೀಲ್ದಾರ್‌ರೊಂದಿಗೆ ಭೇಟಿ ಮಾಡಿ ಹದ್ದುಬಸ್ತು ಮಾಡಿಸಲಾಗುವುದು. ಸರ್ಕಾರದ ಜಮೀನನ್ನು ಯಾರೂ ತಮ್ಮ ಲಾಭಕ್ಕೆ ಬಳಸಬಾರದು’ ಎಂದು ಹೇಳಿದರು.

ಪ್ರಾಂಶುಪಾಲ ಎ.ಟಿ.ರಂಗಪ್ಪ, ಉಪ ಪ್ರಾಚಾರ್ಯ ಎಂ.ಎನ್.ಜಯಪ್ಪ, ಸಿಡಿಸಿ ಉಪಾಧ್ಯಕ್ಷ ಸ್ವಾಮಿ ಗೌಡ್ರು, ಎಸ್‌ಡಿಎಂಸಿ ಅಧ್ಯಕ್ಷ ನಯಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಸಿದ್ದಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ರಹಮತ್ ಉಲ್ಲಾ, ಕೆ.ವಿ.ಬಾಲಚಂದ್ರ, ಬಿ.ಎನ್.ರಾಜು, ಸುರೇಶ್ ಗೌಡ, ಕೃಷ್ಣಮೂರ್ತಿ, ರಾಮಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.