ದಾವಣಗೆರೆ: ಉತ್ತರ ಕರ್ನಾಟಕದಲ್ಲಿ ನೆರೆಹಾವಳಿ ಸಂತ್ರಸ್ತರಿಗೆ ನೆರವಾಗಲು ನಟಿ ಲೀಲಾವತಿ ದಾವಣಗೆರೆಗೆ ಆಗಮಿಸಿದ್ದರು. ಅಲ್ಲದೇ 1964ರಲ್ಲಿ ತೆರೆಕಂಡ 'ತುಂಬಿದ ಕೊಡ’ ಚಲನಚಿತ್ರದ ಚಿತ್ರೀಕರಣ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಅಂದಿನ ನಗರಸಭೆ (ಇಂದು ಮಹಾನಗರ ಪಾಲಿಕೆ) ಎದುರು, ರಾಜನಹಳ್ಳಿ ಹನುಮಂತಪ್ಪನವರ ಛತ್ರದ ಎದುರು, ಪಿ.ಜೆ. ಬಡಾವಣೆಯ ಖಮಿತ್ಕಲ್ ಈಶ್ವರಪ್ಪ ರಾಮ ದೇವಸ್ಥಾನ, ಹಳೆ ನಗರದ ಸರ್ಕಾರಿ ಆಸ್ಪತ್ರೆ ಎದುರು ಲೀಲಾವತಿಯವರು ನಡೆದು ಬರುವ ದೃಶ್ಯಗಳು ಇವೆ. ಚಾಮರಾಜ ವೃತದಲ್ಲಿ ಜಯಂತಿಯವರು ಚಲಾಯಿಸುತ್ತಿದ್ದ ಕಾರಿಗೆ ಲೀಲಾವತಿಯವರು ಎದುರಾಗಿ ಬೀಳುವ ದೃಶ್ಯಗಳು ಚಿತ್ರೀಕರಣವಾಗಿವೆ.
‘ನಾನು ಆಗ ಇದನ್ನೆಲ್ಲ ನೋಡಿದ್ದೆ. ಈ ಚಿತ್ರಕ್ಕಾಗಿ ಜನಪ್ರಿಯ ಹಾಡು ‘ಅಂತಿಂಥ ಹೆಣ್ಣು ನೀನಲ್ಲ, ನಿನ್ನಂತ ಹೆಣ್ಣು ಇನ್ನಿಲ್ಲ...." ಹಾಡನ್ನು ಪಿ. ಕಾಳಿಂಗರಾಯರು ಹಾಡಿರುವುದು. ಈ ಚಲನಚಿತ್ರದಲ್ಲಿ ಲೀಲಾವತಿಯವರ ಜೊತೆ ಡಾ. ರಾಜಕುಮಾರ್ ಜಯಂತಿ ಹಾಗೂ ದಾವಣಗೆರೆಯ ಚಿಂದೋಡಿ ಲೀಲಾ ನಟಿಸಿದ್ದರು’ ಎಂದು ಹಿರಿಯ ಪತ್ರಕರ್ತ ಎಚ್.ಪಿ.ಮಂಜುನಾಥ್ ಸ್ಮರಿಸಿದ್ದಾರೆ.
1962ರಲ್ಲಿ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಮುಳುಗಡೆಯಾದಾಗ ಅವರ ನೆರವಿಗೆ ದಾವಣಗೆರೆಯಲ್ಲಿ ದೇಣಿಗೆ ಸಂಗ್ರಹಿಸಿದ್ದರು.
‘ನೆರೆ ಹಾವಳಿಯಾದಾಗ ಡಾ.ರಾಜ್‌ಕುಮಾರ್, ಲೀಲಾವತಿ, ಟಿ.ಎನ್. ಬಾಲಕೃಷ್ಣ ಸೇರಿದಂತೆ ಹಲವು ನಟರು ತೆರೆದ ಜೀಪಿನಲ್ಲಿ ದೇಣಿಗೆ ಸಂಗ್ರಹಿಸಿದ್ದರೆ, ನಟಿ ರಮಾದೇವಿ ಕಾಲ್ನಡಿಗೆಯಲ್ಲೇ ಹಣ ಸಂಗ್ರಹಿಸಿದ್ದರು. ನಾನು ಆಗ ಓಲ್ಡ್ ಮಿಡ್ಲ್ ಶಾಲೆಯ ವಿದ್ಯಾರ್ಥಿಯಾಗಿದ್ದೆ’ ಎಂದು ರಂಗಕರ್ಮಿ, ಪತ್ರಕರ್ತ ಬಾ.ಮ. ಬಸವರಾಜಯ್ಯ ಹಾಗೂ ಬಂಕಾಪುರ ಬಸಪ್ಪ ಅವರು ನೆನಪಿಸಿಕೊಂಡರು.
‘ದಾವಣಗೆರೆಯ ಕಾಟನ್‌ಮಿಲ್, ಕಾಟನ್ ಮಿಲ್ ಗೆಸ್ಟ್ ಹೌಸ್‌ಗಳಲ್ಲಿ ‘ತುಂಬಿದ ಕೊಡ’ ಸಿನೆಮಾ ಶೂಟಿಂಗ್ ನಡೆದಿತ್ತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.