ದಾವಣಗೆರೆ: ಗಾಜಿನಮನೆಯ ಇನ್ನುಳಿದ ಕೆಲಸಗಳಿಗೆ ಮತ್ತು ನಿರ್ವಹಣೆಗೆ ₹ 5.28 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಗಾಗಿ ತೋಟಗಾರಿಕೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಸಚಿವ ಸಂಪುಟದಲ್ಲಿ ಚರ್ಚಿಸಿ ಶೀಘ್ರದಲ್ಲಿ ಮಂಜೂರು ಮಾಡಲಾಗುವುದು ಎಂದು ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಭರವಸೆ ನೀಡಿದರು.
₹ 26.28 ಕೋಟಿ ವೆಚ್ಚದಲ್ಲಿ ಕೆಆರ್‌ಐಡಿಎಲ್‌ನಿಂದ ಅತ್ಯಾಕರ್ಷಕ ಗಾಜಿನ ಮನೆಯನ್ನು ನಿರ್ಮಿಸಲಾಗಿದೆ. ದೀಪಾಲಂಕಾರ, ಜನರೇಟರ್ ಖರೀದಿ ಹಾಗೂ ನಿರ್ವಹಣೆಗೆ ಹೆಚ್ಚುವರಿ ಅನುದಾನ ಅಗತ್ಯ ಇದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜಿಲ್ಲೆಯ ತೋಟಗಾರಿಕೆ ಇಲಾಖೆಗೆ ₹ 12 ಕೋಟಿ ಮಂಜೂರಾಗಿದೆ. ಅದರಲ್ಲಿ ಈಗಾಗಲೇ ₹ 7 ಕೋಟಿ ಅನುದಾನವನ್ನು ಬೆಳೆನಷ್ಟ ಪರಿಹಾರ ಹಾಗೂ ವಿವಿಧ ಯೋಜನೆಗಳಡಿ ಸಬ್ಸಿಡಿಗಾಗಿ ಬಳಕೆಯಾಗಿದೆ. ಇದಲ್ಲದೆ ಇನ್ನೂ ಹೆಚ್ಚಿನ ಅನುದಾನ ಅಗತ್ಯ ಕಂಡು ಬಂದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕೊರತೆಯಿಂದ ಬರ ಉಂಟಾಗಿದೆ. ಇಲ್ಲಿ ಕೆಲವೆಡೆ ಹೆಚ್ಚು ಮಳೆ ಬಂದು ಬೆಳೆ ನಾಶವಾಗಿದೆ. ಎರಡು ತಾಲ್ಲೂಕುಗಳಲ್ಲಿ ಮಳೆ ಕೈಕೊಟ್ಟಿದೆ. ರೈತರ ನಷ್ಟ ತುಂಬಲು ಯಾವ ರೀತಿ ಪರಿಹಾರ ನೀಡಬಹುದು? ವಿವಿಧ ಯೋಜನೆಗಳು, ಸಬ್ಸಿಡಿಗಳನ್ನು ರೈತರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಹೇಗೆ? ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
‘ಇತ್ತೀಚೆಗೆ ಇಸ್ರೇಲ್‌ಗೆ 8 ದಿನಗಳ ಪ್ರವಾಸ ಕೈಗೊಂಡು ಅಲ್ಲಿ ಕಡಿಮೆ ನೀರು ಬಳಕೆಯಿಂದ ಉತ್ತಮ ಫಸಲು ಪಡೆಯುವ ಬಗ್ಗೆ ಅಧ್ಯಯನ ನಡೆಸಲಾಗಿದೆ. ನಮ್ಮ ರಾಜ್ಯದಲ್ಲೂ ಕಡಿಮೆ ನೀರು ಮತ್ತು ಖರ್ಚು ಮಾಡಿ ಅಧಿಕ ಆದಾಯ ತರುವ ತೋಟಗಾರಿಕಾ ಪದ್ದತಿಯನ್ನು ಜಾರಿಗೆ ತರಲಾಗುವುದು. ಹನಿ ನೀರಾವರಿ, ಹಣ್ಣು ಹಂಪಲು ಸಸಿ ವಿತರಣೆಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದರು.
ಅ.2ಕ್ಕೆ ಗಾಜಿನ ಮನೆ ಹಸ್ತಾಂತರ
ಬಳಿಕ ಅಧಿಕಾರಿಗಳ ಜತೆಗೆ ಸಚಿವರು ಗಾಜಿನ ಮನೆಗೆ ಭೇಟಿ ನೀಡಿದರು. ₹ 12.5 ಕೋಟಿ ವೆಚ್ಚದಲ್ಲಿ ಸ್ಟೀಲ್ ಕಾಮಗಾರಿ, ಗಾಜಿನ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ₹ 4.5 ಕೋಟಿ ವೆಚ್ಚದಲ್ಲಿ ಗಾರ್ಡನ್, ₹ 9 ಕೋಟಿ ವೆಚ್ಚದಲ್ಲಿ, ರಸ್ತೆ, ಚರಂಡಿ, ಇತರೆ ಕೆಲಸ ಕೈಗೊಳ್ಳಲಾಗಿದೆ. ಶೇ 99 ನಿರ್ಮಾಣ ಪೂರ್ಣಗೊಂಡಿದ್ದು ಅಕ್ಟೋಬರ್ 2 ರಂದು ತೋಟಗಾರಿಕೆ ಇಲಾಖೆಗೆ ಗಾಜಿನ ಮನೆಯನ್ನು ಹಸ್ತಾಂತರಿಸಲಾಗುವುದು ತೋಟಗಾರಿಕಾ ಉಪ ನಿರ್ದೇಶಕ ವೇದಮೂರ್ತಿ, ಕೆಆರ್‌ಐಡಿಎಲ್ ಎಂಜಿನಿಯರ್ ಚಂದ್ರಶೇಖರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.