ADVERTISEMENT

ಹೊನ್ನಾಳಿಯಲ್ಲಿ ಹಂದಿಗಳಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ಪತ್ತೆ

15 ದಿನಗಳಿಂದ ಹಂದಿಗಳ ನಿರಂತರ ಸಾವು

ಎನ್.ಕೆ.ಆಂಜನೇಯ
Published 19 ನವೆಂಬರ್ 2021, 5:13 IST
Last Updated 19 ನವೆಂಬರ್ 2021, 5:13 IST

ಹೊನ್ನಾಳಿ: ನಗರದ ದುರ್ಗಿಗುಡಿ ಬಡಾವಣೆಯಲ್ಲಿ 15 ದಿನಗಳಿಂದ ದಿನವೊಂದಕ್ಕೆ 10–15 ಹಂದಿಗಳು ಮೃತಪಡುತ್ತಿದ್ದು, ಆಫ್ರಿಕನ್ ಸ್ವೈನ್ ಫ್ಲೂ ಇರುವುದು ಪತ್ತೆಯಾಗಿದೆ.

ಹಂದಿಗಳ ಸಾವು ಹೆಚ್ಚುತ್ತಿದ್ದ ಕಾರಣ ನಿವಾಸಿಗಳು ಪುರಸಭೆಗೆ ದೂರು ನೀಡಿದ್ದರು. ಪುರಸಭೆ ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ ಹಾಗೂ ಪುರಸಭೆಯ ಆರೋಗ್ಯ ನಿರೀಕ್ಷಕ ಹರ್ಷವರ್ಧನ್ ಅವರು 2 ಹಂದಿಗಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಪಶು ಸಂಗೋಪನಾ ಇಲಾಖೆಗೆ ಕಳುಹಿಸಿ
ಕೊಟ್ಟಿದ್ದರು. ಹಂದಿಗಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ‘ಆಫ್ರಿಕನ್ ಸ್ವೈನ್ ಫ್ಲೂ’ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.

ಮತ್ತೆರಡು ಹಂದಿಗಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿಕೊಡುವಂತೆ ಕೇಳಿದ್ದರು. ಆರೋಗ್ಯ ನಿರೀಕ್ಷರು ಮತ್ತೆ 2 ಹಂದಿಗಳ ಮೃತದೇಹವನ್ನು ಕಳುಹಿಸಿಕೊಟ್ಟರು. ಅದೇ ಜ್ವರ ಇರುವ ಮಾಹಿತಿ ಖಚಿತಪಡಿಸಿಕೊಂಡರು. ಅದರ ಮಾದರಿಯನ್ನು ದಾವಣಗೆರೆಗೂಕಳುಹಿಸಿಕೊಟ್ಟರು. ಅಲ್ಲಿಯೂ ಖಚಿತ ಮಾಹಿತಿ ಸಿಗುತ್ತಿದ್ದಂತೆ, ಅದರ ಮಾದರಿಯನ್ನು ದಾವಣಗೆರೆಯಿಂದ ಬೆಂಗಳೂರಿಗೆ ಕಳುಹಿಸಿಕೊಡ
ಲಾಯಿತು. ಅಲ್ಲಿಂದಲೂ ಈ ಜ್ವರದ ಬಗ್ಗೆ ಖಚಿತ ಮಾಹಿತಿ ಪಶು ಸಂಗೋಪನಾ ಇಲಾಖೆಯಿಂದ ಬಂದಿದೆ. ಆದರೆ, ಅದರ ಅಂತಿಮ ವರದಿ ಇನ್ನೂ ನಮ್ಮ ಕೈ ಸೇರಿಲ್ಲ’ ಎಂದು ಆರೋಗ್ಯ ನಿರೀಕ್ಷಕ ಹರ್ಷವರ್ಧನ್ ತಿಳಿಸಿದರು.

ADVERTISEMENT

ಈ ಕುರಿತು ಪಶು ಸಂಗೋಪನಾ ಇಲಾಖೆಯ ವೈದ್ಯರಾದ ಯಲ್ಲಪ್ಪ ಅವರು ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮಾಹಿತಿ ನೀಡಿದ್ದಾರೆ. ಹೊನ್ನಾಳಿ ನಗರದಲ್ಲಿರುವ ಎಲ್ಲ ಹಂದಿಗಳಿಗೂ ಲಸಿಕೆ ಹಾಕಬೇಕಾದ ಅನಿವಾರ್ಯ ಇದೆ. ಲಸಿಕೆಗಳನ್ನು ಶೀಘ್ರದಲ್ಲಿಯೇ ಕಳುಹಿಸಿಕೊಡಲಾಗುವುದು ಎಂದು ಸಹಾಯಕ ನಿರ್ದೇಶಕರು ತಿಳಿಸಿರುವುದಾಗಿ ಅವರು ಮಾಹಿತಿನೀಡಿದ್ದಾರೆ.

‘ಹಂದಿಗಳ ನಿರ್ಮೂಲನೆಗೆ ನಾವು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಕೆಲವು ಪ್ರಭಾವಿಗಳು ಸ್ಪಂದಿಸುತ್ತಿಲ್ಲ. ಹಂದಿ ಮಾಲೀಕರು ಅವುಗಳ ಸ್ಥಳಾಂತರಕ್ಕೆ ಒಪ್ಪುತ್ತಿಲ್ಲ. ಕಳೆದ ವಾರದಲ್ಲಿ ಇಲ್ಲಿಯ ಕೆಲವು ಮನೆಗಳಿಗೆ ಹಂದಿಗಳು ನುಗ್ಗುತ್ತಿವೆ. ನಮ್ಮ ಮನೆಯೊಳಗೂ ಹಂದಿ ನುಗ್ಗಿತ್ತು. ಹಂದಿಗಳು ಸಾಯುತ್ತಿರುವ ಕಾರಣ ಅವುಗಳನ್ನು ತೆರವುಗೊಳಿಸುವ ಕುರಿತು ನಿವಾಸಿಗಳಿಂದ ನಿಂದನೆಯ ಮಾತುಗಳನ್ನು ಕೇಳಬೇಕಾಗಿದೆ’ ಎನ್ನುತ್ತಾರೆ ವಾರ್ಡ್‌ನ ಸದಸ್ಯರಾದ ಸವಿತಾ ಮಹೇಶ್ ಹುಡೇದ್.

‘ಎರಡು ವರ್ಷಗಳಿಂದ ಕೋವಿಡ್‌ ಕಾರಣದಿಂದ ಆತಂಕದಲ್ಲಿದ್ದ ಜನರು ಇದೀಗ ಹಂದಿಗಳಿಗೆ ಜ್ವರ ಬಂದಿರುವ ಸುದ್ದಿ ಕೇಳಿ ಮತ್ತೆ ಆತಂಕ ಪಡುವಂತಾಗಿದೆ. ದುರ್ಗಿಗುಡಿ ಬಡಾವಣೆಯಲ್ಲಿ ಮೊದಲೇ ಚರಂಡಿಯಲ್ಲಿ ನಿಂತ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರ ಜೊತೆಗೆ ಇದೀಗ ಹಂದಿಗಳಿಗೆ ಜ್ವರ ಬಂದಿರುವುದರಿಂದ ನೆಮ್ಮದಿಯಾಗಿ ನಿದ್ರಿಸಲೂ ಆಗುತ್ತಿಲ್ಲ’ ಎನ್ನುತ್ತಾರೆ ಈ ಭಾಗದ ಹಿರಿಯ ನಾಗರಿಕ ಪ್ರೇಂಕುಮಾರ್ಬಂಡಿಗಡಿ.

‘ಜ್ವರ ನಿಯಂತ್ರಣಕ್ಕೆ ಶೀಘ್ರ ಕ್ರಮ’

ಪ್ರತಿ ದಿನ 10ರಿಂದ 20 ಹಂದಿಗಳು ಮೃತಪಡುತ್ತಿದ್ದು, ಪುರಸಭೆ ಮುಖ್ಯಾಧಿಕಾರಿ ಸ್ಪಂದಿಸುತ್ತಿಲ್ಲ ಎನ್ನುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ, ‘ನಾನು 15–20 ದಿನಗಳಿಂದ ಈ ಬಗ್ಗೆ ಮಾಹಿತಿ ತರಿಸಿಕೊಂಡು ಕೈಗೊಳ್ಳಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇನೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದು ಅಲ್ಲಿಂದ ವರದಿ ಬರುವುದು ತಡವಾಗಿದೆ. ಹೀಗಾಗಿ ಈ ಸಮಸ್ಯೆ ಉಲ್ಬಣಗೊಂಡಿದೆ. ಸದ್ಯದಲ್ಲಿಯೇ ಜ್ವರದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

....

ಹಂದಿಗೆ ಬಂದಿರುವ ಜ್ವರದ ಬಗ್ಗೆ ಮತ್ತು ಅದರ ನಿಯಂತ್ರಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

–ಬಾಬು ಹೋಬಳದಾರ್, ಪುರಸಭೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.