ADVERTISEMENT

ದಾವಣಗೆರೆ: ಮತ್ತೆ ಜೈಲಿಗೆ ಹೋಗಿ ಮರಳಿದ ಶಿವಮೂರ್ತಿ ಶರಣರು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 4:09 IST
Last Updated 21 ನವೆಂಬರ್ 2023, 4:09 IST
ಹೈಕೋರ್ಟ್‌ ಆದೇಶದ ಮೇರೆಗೆ ಸೋಮವಾರ ರಾತ್ರಿ ಬಿಡುಗಡೆಯಾದ ಮುರುಘಾ ಮಠದ ಶಿವಮೂರ್ತಿ ಶರಣರು ದಾವಣಗೆರೆಯ ವಿರಕ್ತ ಮಠಕ್ಕೆ ಮರಳಿದರು
ಹೈಕೋರ್ಟ್‌ ಆದೇಶದ ಮೇರೆಗೆ ಸೋಮವಾರ ರಾತ್ರಿ ಬಿಡುಗಡೆಯಾದ ಮುರುಘಾ ಮಠದ ಶಿವಮೂರ್ತಿ ಶರಣರು ದಾವಣಗೆರೆಯ ವಿರಕ್ತ ಮಠಕ್ಕೆ ಮರಳಿದರು   

ದಾವಣಗೆರೆ: ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಎರಡನೇ ಪ್ರಕರಣದಲ್ಲಿ ಸೋಮವಾರ ಮತ್ತೆ ಬಂಧಿತರಾಗಿ ಚಿತ್ರದುರ್ಗದ ಜೈಲಿಗೆ ತೆರಳಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು ಹೈಕೋರ್ಟ್‌ ಆದೇಶದ ಮೇರೆಗೆ ರಾತ್ರಿ ಬಿಡುಗಡೆ ಹೊಂದಿ, ಇಲ್ಲಿನ ವಿರಕ್ತ ಮಠಕ್ಕೆ ಮರಳಿದರು.

ಷರತ್ತುಬದ್ಧ ಜಾಮೀನು ಪಡೆದು ನ.16ರಂದು ಬಿಡುಗಡೆಯಾಗಿದ್ದ ಶಿವಮೂರ್ತಿ ಶರಣರು 4 ದಿನಗಳಿಂದ ದೊಡ್ಡಪೇಟೆಯಲ್ಲಿರುವ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ಬಂಧನದ ವಾರೆಂಟ್‌ನೊಂದಿಗೆ ಬಂದ ಪೊಲೀಸರು ಮಧ್ಯಾಹ್ನ 3ಕ್ಕೆ ಅವರನ್ನು ಬಂಧಿಸಿ ಚಿತ್ರದುರ್ಗಕ್ಕೆ ಕರೆದೊಯ್ದಿದ್ದರು.

ಡಿ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದ್ರಾದರೂ, ಹೈಕೋರ್ಟ್‌ ತಡೆಯಾಜ್ಞೆ ಮೇರೆಗೆ ಮೂರು ಗಂಟೆಗಳಲ್ಲಿ ಶರಣರು ಕಾರಾಗೃಹದಿಂದ ಹೊರಬಂದರು. ರಾತ್ರಿ ವಿರಕ್ತ ಮಠಕ್ಕೆ ಬಂದಾಗ ಭಕ್ತರು ಅವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿ, ಜೈಕಾರ ಕೂಗಿದರು.

ADVERTISEMENT

ಬಳಿಕ ಸುದ್ದಿಗಾರರಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಬಂಧನಕ್ಕೆ ಒಳಪಡಿಸುವ ಸಂದರ್ಭದಲ್ಲಿ ವಿರಕ್ತ ಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ಜೊತೆಗೆ ಟ್ರಸ್ಟಿಗಳಾದ ಎಂ. ಜಯಕುಮಾರ್, ಅಂದನೂರು ಮುಪ್ಪಣ್ಣ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.