ADVERTISEMENT

ನಾಟಿ ಪದ್ಧತಿಯಲ್ಲಿ ರೈತರ ಯಶಸ್ಸು

ಅಕ್ಕಡಿ ಬೆಳೆಯಾಗಿ ತೊಗರಿ: ಮೆ‌ಕ್ಕೆಜೋಳದ ಜೊತೆಯಲ್ಲಿ 8,375 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

ಡಿ.ಕೆ.ಬಸವರಾಜು
Published 27 ಡಿಸೆಂಬರ್ 2023, 7:34 IST
Last Updated 27 ಡಿಸೆಂಬರ್ 2023, 7:34 IST
ಹೊನ್ನಾಳಿ ತಾಲ್ಲೂಕಿನ ಬಿದರಗುಡ್ಡೆಯ ರೈತ ಪ್ರಭಯ್ಯ ಅವರು ನಾಟಿ ಪದ್ಧತಿಯಲ್ಲಿ ತೊಗರಿ ಬೆಳೆದಿದ್ದು, ಉತ್ತಮ ಇಳುವರಿ ಬಂದಿದೆ.
ಹೊನ್ನಾಳಿ ತಾಲ್ಲೂಕಿನ ಬಿದರಗುಡ್ಡೆಯ ರೈತ ಪ್ರಭಯ್ಯ ಅವರು ನಾಟಿ ಪದ್ಧತಿಯಲ್ಲಿ ತೊಗರಿ ಬೆಳೆದಿದ್ದು, ಉತ್ತಮ ಇಳುವರಿ ಬಂದಿದೆ.   

ದಾವಣಗೆರೆ: ಜಿಲ್ಲೆಯಲ್ಲಿ ರೈತರು ತೊಗರಿಯನ್ನು ಅಂತರ ಬೆಳೆಯಾಗಿ (ಅಕ್ಕಡಿ) ಬೆಳೆಯುತ್ತಿದ್ದು, ರೈತರು ಯಶಸ್ಸು ಕಂಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 10,100 ಹೆಕ್ಟೇರ್‌ನಲ್ಲಿ ತೊಗರಿ ಬೆಳೆಯಲಾಗಿದೆ. ಜಿಲ್ಲೆಯಲ್ಲಿ ರೈತರು ಮೆಕ್ಕೆಜೋಳ ಹಾಗೂ ಅಡಿಕೆಯ ನಡುವೆ ಅಂತರ ಬೆಳೆಯಾಗಿ ತೊಗರಿಯನ್ನು ನಾಟಿ ಮಾಡುವ ಮೂಲಕ ರೈತರು ಇಳುವರಿ ಪಡೆದಿದ್ದಾರೆ. 8,375 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳದ ಜೊತೆಗೆ ತೊಗರಿಯನ್ನು ನಾಟಿ ಮಾಡಿದ್ದಾರೆ.

ಕಳೆದ ತಿಂಗಳು ಜಿಲ್ಲೆಗೆ ಭೇಟಿ ನೀಡಿದ್ದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಪದ್ಧತಿಯ ಬಗ್ಗೆ ಶ್ಲಾಘಿಸಿದರು. ಜೊತೆಗೆ ಇತರೆ ಜಿಲ್ಲೆಗಳಲ್ಲೂ ಈ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

‘ತೊಗರಿಯನ್ನು ಪಾಲಿಥೀನ್ ಕವರ್‌ಗಳಲ್ಲಿ ಬಿತ್ತನೆ ಮಾಡಿ 30 ದಿನಗಳವರೆಗೆ ಪೋಷಿಸಿ ಬಳಿಕ ಬಿತ್ತನೆ ಮಾಡಿದ್ದರಿಂದ ನಾಟಿ ಪದ್ಧತಿ ಅಳವಡಿಸುವುದರಿಂದ ಬಿತ್ತನೆ ಬೀಜದ ಉಳಿತಾಯವಾಗುತ್ತದೆ. ಜೊತೆಗೆ ಆಳವಾದ ಬೇರುಗಳು ಇರುವುದರಿಂದ ಬೆಳೆಯು ಬರಸಹಿಷ್ಣುತೆ ಹೊಂದಿರುತ್ತದೆ. ರೋಗಗಳನ್ನು ನಿಯಂತ್ರಿಸುವುದರ ಜೊತೆಗೆ ಅಧಿಕ ಇಳುವರಿ ಪಡೆಯಬಹುದು. ಸಣ್ಣ ಅತಿ ಸಣ್ಣ ರೈತರಿಗೆ ಇದು ಉಪಯುಕ್ತವಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ತಿಳಿಸಿದರು.

ಎಕರೆಗೆ 8 ಕ್ವಿಂಟಲ್: ಒಂದು ಎಕರೆಯಲ್ಲಿ ಅಡಿಕೆ ಗಿಡ ನೆಟ್ಟಿದ್ದು, ಎರಡು ಅಡಿಕೆ ಗಿಡಗಳ ಬಿಆರ್‌ಜಿ 2 ತಳಿಯ ತೊಗರಿ ನೆಟ್ಟಿದ್ದು, ಉತ್ತಮ ಫಸಲು ಬಂದಿದೆ. ಒಂದು ಎಕರೆಗೆ 8 ಕ್ವಿಂಟಲ್ ಇಳುವರಿ ಬಂದಿದೆ ಎಂದು ಹೊನ್ನಾಳಿ ತಾಲ್ಲೂಕಿನ ಬಿದರಗುಡ್ಡೆಯ ರೈತ ಪ್ರಭಯ್ಯ ತಿಳಿಸಿದರು.

‘ಇಲಾಖೆಯಿಂದ ನೀಡಿದ ಬೀಜವನ್ನು ತಂದು ಸಗಣಿಗೊಬ್ಬರ ಮಣ್ಣು ಸೇರಿಸಿ ಒಂದು ಪ್ಯಾಕೆಟ್‌ಗೆ ಎರಡು ಬೀಜದಂತೆ ಮಿಶ್ರಣ ಮಾಡಿ ನಾಟಿ ಮಾಡಿದೆ. ಇದಲ್ಲದೇ ಅಡಿಕೆ ಗಿಡಗಳ ಒಂದು ಎಕರೆಯಲ್ಲ 15 ಸಾಲು ಬದನೆ ಗಿಡ ನೆಟ್ಟಿದ್ದು, ಬದನೆ ಹಾಗೂ ತೊಗರಿ ಮಿಶ್ರ ಬೆಳೆಯಾಗಿ ಬೆಳೆದೆ. ಜೊತೆಗೆ ಒಂದು ಟ್ರೇ ಚೆಂಡು ಹೂ ಬಿತ್ತನೆ ಮಾಡಿದೆ’ ಇದರಿಂದ ಉತ್ತಮ ಆದಾಯ ಬಂದಿತು’ ಎಂದು ಪ್ರಭಯ್ಯ ಹೇಳಿದರು.

‘ಬದನೆ ಗಿಡ ನೆಟ್ಟಿದ್ದರಿಂದ ತೊಗರಿಗೆ ಬರುವ ಕೀಟವೆಲ್ಲಾ ಬದನೆಗೆ ಆಕ್ರಮಿಸಿಕೊಂಡವು. ಇದರಿಂದ ತೊಗರಿ ಕೀಟಬಾಧೆ ಇಲ್ಲದೇ ಸರಾಗವಾಗಿ ಬೆಳೆಯಿತು. ತೊಗರಿಯ ಗಿಡದ ಕುಡಿ ಚಿವುಟಿದ್ದರಿಂದ ಗಿಡಗಳು ಅಗಲವಾಗಿ ವಿಸ್ತರಿಸಿದ್ದರಿಂದ ಹೆಚ್ಚಿನ ಕಾಯಿಗಳು ಬರಲು ಸಾಧ್ಯವಾಯಿತು’ ಎಂದು ಹೇಳಿದರು.

ತೊಗರಿ ಬೆಳೆಯ ಜೊತೆ ರೈತ ಪ್ರಭಯ್ಯ
ಈ ಹಿಂದೆ ತೊಗರಿ ಬಿತ್ತನೆ ಮಾಡಿದ್ದರಿಂದ ಸಾಲುಗಳು ದಪ್ಪ ಜಾಸ್ತಿಯಾಗಿ ಇಳುವರಿ ಕಡಿಮೆಯಾಗಿತ್ತು. ನಾಟಿ ಪದ್ಧತಿಯಿಂದ ಹೆಚ್ಚಿನ ಇಳುವರಿ ಬಂದಿದೆ.
–ಪ್ರಭಯ್ಯ ಬಿದರಗುಡ್ಡೆಯ ರೈತ.

ರೈತರ ಆದಾಯ ವೃದ್ಧಿ

‘ತೊಗರಿ ನಾಟಿ ಪದ್ಧತಿಯಲ್ಲಿ ಎಕರೆಗೆ 8ರಿಂದ 12 ಕ್ವಿಂಟಲ್ ನಿರೀಕ್ಷೆ ಮಾಡಲಾಗಿದೆ. ನಾಟಿ ಪದ್ಧತಿಯಲ್ಲಿ ಅಂತರ ಬೆಳೆಯಾಗಿ ತೊಗರಿಯನ್ನು ಬೆಳೆಯುವುದರಿಂದ ಸಂಪನ್ಮೂಲಗಳ ಬಳಕೆ ಸಮರ್ಪಕವಾಗಿ ಆಗುತ್ತದೆ. ಅಲ್ಲದೇ ಮಣ್ಣಿನ ಫಲವತ್ತತೆ ವೃದ್ಧಿಸುವುದರ ಆದಾಯದಿಂದ ರೈತರ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ’ ಎಂದು ಶ್ರೀನಿವಾಸ್ ಚಿಂತಾಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.