ADVERTISEMENT

ಬಸವಾಪಟ್ಟಣ | ಬಿಡುಗಡೆಯಾಗದ ಅನುದಾನ; ಶೀಘ್ರವೇ ಬೀಗ

ಕತ್ತಲಗೆರೆ ಸರ್ಕಾರಿ ಕೃಷಿ ಡಿಪ್ಲೊಮಾ ಕಾಲೇಜು ಮುಂದುವರಿಸುವಂತೆ ಜನಪ್ರತಿನಿಧಿಗಳಿಗೆ ಮನವಿ

ಎನ್‌.ವಿ ರಮೇಶ್‌
Published 20 ಜನವರಿ 2024, 6:18 IST
Last Updated 20 ಜನವರಿ 2024, 6:18 IST
ಬಸವಾಪಟ್ಟಣ ಸಮೀಪದ ಕತ್ತಲಗೆರೆ ಕೃಷಿ ಡಿಪ್ಲೊಮಾ ಕಾಲೇಜಿನ ಹೊರ ನೋಟ 
ಬಸವಾಪಟ್ಟಣ ಸಮೀಪದ ಕತ್ತಲಗೆರೆ ಕೃಷಿ ಡಿಪ್ಲೊಮಾ ಕಾಲೇಜಿನ ಹೊರ ನೋಟ    

ಬಸವಾಪಟ್ಟಣ: ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿರುವ ಸರ್ಕಾರಿ ಕೃಷಿ ಡಿಪ್ಲೊಮಾ ಕಾಲೇಜು ಅನುದಾನದ ಕೊರತೆಯಿಂದಾಗಿ ನಲುಗಿದೆ. ಮೇ ತಿಂಗಳಲ್ಲಿ ನಡೆಯಲಿರುವ ಎರಡನೇ ವರ್ಷದ ಪರೀಕ್ಷೆ ನಂತರ ಮುಚ್ಚುವುದು ಖಚಿತವಾಗಿದ್ದು, ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕಾಲೇಜನ್ನು ₹2.35 ಕೋಟಿ ವೆಚ್ಚದಲ್ಲಿ 2012ರಲ್ಲಿ ಆರಂಭಿಸಲಾಗಿತ್ತು. ಎರಡು ಬೋಧನಾ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಸಭಾಂಗಣ, ಕಂಪ್ಯೂಟರ್‌ ಕೊಠಡಿ, ಪ್ರಾಂಶುಪಾಲರ ಕೊಠಡಿ, ಸಿಬ್ಬಂದಿ ಕೊಠಡಿ, ಉಗ್ರಾಣ ಮತ್ತು ಶೌಚಾಲಯಗಳನ್ನು ಇದು ಒಳಗೊಂಡಿದೆ.

ಗ್ರಂಥಾಲಯದಲ್ಲಿ ಕೃಷಿ ಡಿಪ್ಲೊಮಾ ಶಿಕ್ಷಣಕ್ಕೆ ಸಂಬಂಧಿಸಿದ 6,000 ಪುಸ್ತಕಗಳಿದ್ದು, ಬೋಧನಾ ಕೊಠಡಿಯಲ್ಲಿ ಗುಣಮಟ್ಟದ ಪೀಠೋಪಕರಣಗಳು, ಪಾಠೋಪಕರಣಗಳು ಇವೆ. ಅಲ್ಲದೇ ಕಾಲೇಜಿನ ಅಂದವನ್ನು ಹೆಚ್ಚಿಸಲು ಹೊರಾಂಗಣದಲ್ಲಿ ಸುಂದರ ತೋಟ ನಿರ್ಮಿಸಲಾಗಿದೆ. ₹ 60 ಲಕ್ಷ ವೆಚ್ಚದಲ್ಲಿ ಪೆವಿಲಿಯನ್‌ ಒಳಗೊಂಡ ಸುಭದ್ರವಾದ ಕ್ರೀಡಾಂಗಣವನ್ನೂ ನಿರ್ಮಿಸಲಾಗಿದೆ.

ADVERTISEMENT

₹2 ಕೋಟಿ ವೆಚ್ಚದಲ್ಲಿ ಬಾಲಕರು ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ವಿದ್ಯಾರ್ಥಿನಿಲಯ ನಿರ್ಮಿಸಿದ್ದು, ತಲಾ 20 ಕೊಠಡಿಗಳಿವೆ. ಈ ಎರಡೂ ವಿದ್ಯಾರ್ಥಿ ನಿಲಯಗಳು ಅಡುಗೆ ಕೋಣೆ, ಭೋಜನ ಕೊಠಡಿ, ವ್ಯಾಯಾಮ ಶಾಲೆ, ಶೌಚಾಲಯ ಹಾಗೂ ಸ್ನಾನದ ಕೋಣೆಗಳನ್ನು ಹೊಂದಿವೆ. ವಿದ್ಯಾರ್ಥಿಗಳನ್ನು ಆಗಾಗ ಕೃಷಿ ತಾಕುಗಳು ಮತ್ತು ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಲು ಸುಸಜ್ಜಿತವಾದ ಬಸ್‌ ಸೇರಿ ಅಗತ್ಯ ಮೂಲ ಸೌಲಭ್ಯಗಳೂ ಇವೆ. 

ಅಕ್ಕ ಪಕ್ಕದ ಗ್ರಾಮಗಳ ವಿದ್ಯಾರ್ಥಿಗಳೂ ಸೇರಿ ರಾಜ್ಯದ ಯುವಜನರ ಪಾಲಿಗೆ ಆಶಾಕಿರಣವಾಗಿದ್ದ ಕಾಲೇಜು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬೀಗ ಹಾಕುವ ಸ್ಥಿತಿ ಬಂದಿರುವುದಕ್ಕೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯುವಸಮೂಹ ಎಸ್ಸೆಸ್ಸೆಲ್ಸಿ ನಂತರ ಎರಡು ವರ್ಷದ ಡಿಪ್ಲೊಮಾ ಶಿಕ್ಷಣವನ್ನು ಪಡೆದು, ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗಿತ್ತು. ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಆಡಳಿತಕ್ಕೆ ಒಳಪಟ್ಟಿರುವ ಈ ಕಾಲೇಜಿಗೆ ಕತ್ತಲಗೆರೆಯ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಪ್ರಾಂಶುಪಾಲರಾಗಿದ್ದರು. ಕೃಷಿವಿಜ್ಞಾನಿಗಳು ಉಪನ್ಯಾಸಕರಾಗಿ, ಕೇಂದ್ರದ ಇತರ ಸಿಬ್ಬಂದಿ ಕಚೇರಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ಆರಂಭದಲ್ಲಿ 50 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ವಿಶ್ವವಿದ್ಯಾಲಯ ಆದೇಶಿತ್ತು. ನಂತರದಲ್ಲಿ ಸರ್ಕಾರದಿಂದ ಅನುದಾನದ ಕೊರತೆಯ ಕಾರಣ ವಿದ್ಯಾರ್ಥಿಗಳ ಸಂಖ್ಯೆಯನ್ನು 35ಕ್ಕೆ ನಂತರ 25ಕ್ಕೆ ಇಳಿಸಿತು. 2021-22ನೇ ಸಾಲಿಗೆ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳದಂತೆ ವಿಶ್ವವಿದ್ಯಾಲಯ ಆದೇಶ ನೀಡಿತ್ತು.

‘ಈಗ ನಮ್ಮ ಕಾಲೇಜಿನಲ್ಲಿ ಅಂತಿಮ ವರ್ಷದ ಕೆಲವೇ ವಿದ್ಯಾರ್ಥಿಗಳಿದ್ದಾರೆ. ಈ ವರ್ಷದ ಮೇ ತಿಂಗಳಿನಲ್ಲಿ ಅವರು ಪರೀಕ್ಷೆಗೆ ಹಾಜರಾದ ನಂತರ ಕಾಲೇಜು ಮುಚ್ಚಲಿದೆ. ಈವರೆಗೆ ಕಾಲೇಜಿನಿಂದ ಅಂದಾಜು 500 ವಿದ್ಯಾರ್ಥಿಗಳು ಡಿಪ್ಲೊಮಾ ಶಿಕ್ಷಣ ಪಡೆದು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಗಳಿಸಿದ್ದಾರೆ. ಕೆಲವರು ಉತ್ತಮ ಕೃಷಿಕರೂ ಆಗಿದ್ದಾರೆ. ಡಿಪ್ಲೊಮಾ ನಂತರ ವಿದ್ಯಾರ್ಥಿಗಳು ಬಿಎಸ್ಸಿ (ಅಗ್ರಿ)ಗೆ ಸೇರ್ಪಡೆಯಾಗಲೂ ಅವಕಾಶವಿತ್ತು. ಕಾಲೇಜು ಮುಚ್ಚದಂತೆ ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಯಾರೂ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳು ಇತ್ತ ಗಮನಹರಿಸಿ, ಜೂನ್‌ನಿಂದ ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರದ ಮುಖ್ಯಸ್ಥ ಮತ್ತು ಪ್ರಾಂಶುಪಾಲ ಬಿ.ಎಂ.ಆನಂದಕುಮಾರ್‌  ಮನವಿ ಮಾಡಿದ್ದಾರೆ.

ಬಸವಾಪಟ್ಟಣ ಸಮೀಪದ ಕತ್ತಲಗೆರೆ ಕೃಷಿ ಡಿಪ್ಲೊಮಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳು

ಆರ್ಥಿಕ ಸಂಕಷ್ಟದ ಕಾರಣ ಬಡವರ ಮಕ್ಕಳು ಬಿಎಸ್ಸಿ (ಅಗ್ರಿ) ವ್ಯಾಸಂಗ ಮಾಡುವುದು ಕಷ್ಟ. ಎರಡು ವರ್ಷದ ಕೃಷಿ ಡಿಪ್ಲೊಮಾ ಕೋರ್ಸ್‌ನಿಂದ ಅವರಿಗೆ ಅನುಕೂಲವಾಗಿತ್ತು. ಸೂಕ್ತ ಅನುದಾನ ಬಿಡುಗಡೆ ಮಾಡಿ ಕಾಲೇಜನ್ನು ಮುಂದುವರಿಸಬೇಕು

-ತೇಜಸ್ವಿ ಪಟೇಲ್‌ ರೈತ ಮುಖಂಡ 

ಗ್ರಾಮೀಣ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದ ಕಾಲೇಜನ್ನು ಮುಚ್ಚಲು ನಿರ್ಧರಿಸಿರುವುದು ನೋವಿನ ಸಂಗತಿ. ಕಾಲೇಜನ್ನು ಉಳಿಸಲು ಕ್ರಮ ಕೈಗೊಳ್ಳಬೇಕು

–ಡಾ.ಬಿ.ಆರ್‌.ಕುಸಗೂರ್‌ ವೈದ್ಯ 

ಸ್ಥಾಪನೆಯಾಗಿ ಅಲ್ಪ ಕಾಲದಲ್ಲಿಯೇ ಕೃಷಿ ಕಾಲೇಜು ಮುಚ್ಚುತ್ತಿರುವುದು ವಿಷಾದನೀಯ. ಗ್ರಾಮೀಣ ಭಾಗದ ಕೃಷಿಕರ ಮಕ್ಕಳ ಹಿತ ದೃಷ್ಟಿಯಿಂದ ಇದನ್ನು ಮುಂದುವರಿಸಬೇಕು

–ಟಿ.ವಿ.ರುದ್ರೇಶ್‌ ರೈತ ಕಾರಿಗನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.