ADVERTISEMENT

ಬಿರು ಬಿಸಿಲಿನಲ್ಲೂ ಸಿಹಿ ಕುಂಬಳ ಬೆಳೆದು ಬೀಗಿದ ರೈತ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 8:28 IST
Last Updated 30 ಮಾರ್ಚ್ 2024, 8:28 IST
ಸಂತೇಬೆನ್ನೂರು ಸಮೀಪದ ಭೀಮನೆರೆ ರೈತ ಉಮೇಶ್ ಅಡಕೆ ಬೆಳೆ ನಡುವೆ ಬೆಳೆದ ಸಿಹಿಕುಂಬಳ
ಸಂತೇಬೆನ್ನೂರು ಸಮೀಪದ ಭೀಮನೆರೆ ರೈತ ಉಮೇಶ್ ಅಡಕೆ ಬೆಳೆ ನಡುವೆ ಬೆಳೆದ ಸಿಹಿಕುಂಬಳ   

ಸಂತೇಬೆನ್ನೂರು: ಸಮೀಪದ ಭೀಮನೆರೆ ಗ್ರಾಮದ ರೈತ ಉಮೇಶ್ ಬಿರು ಬೇಸಿಗೆಯಲ್ಲೂ ಅಂತರ ಬೆಳೆಯಾಗಿ ಸಿಹಿ ಕುಂಬಳ ಬೆಳೆದು ಉತ್ತಮ ಲಾಭ ಗಳಿಸಿ ಮಾದರಿ ಆಗಿದ್ದಾರೆ.

ಎರಡು ವರ್ಷಗಳ ಅಡಿಕೆ ಗಿಡಗಳ ನಡುವೆ ಸಿಹಿ ಕುಂಬಳ ಬೀಜ ಬಿತ್ತನೆ ಮಾಡಿ ಫಲ ತೆಗೆದಿದ್ದಾರೆ. ಒಟ್ಟು 30 ಟನ್ ಸಿಹಿ ಕುಂಬಳ ಈಗಾಗಲೇ ಮಾರಾಟ ಮಾಡಿದ್ದಾರೆ. ಪ್ರತಿ ಟನ್‌ಗೆ ₹ 12,000 ಧಾರಣೆ ಸಿಕ್ಕಿದೆ. ಒಟ್ಟು ₹ 3.25 ಲಕ್ಷ ಮೌಲ್ಯದ ಬೆಳೆ ಬಂದಿದೆ. ಅಂದಾಜು ₹ 2 ಲಕ್ಷ ಲಾಭ ಗಳಿಸಿದ್ದಾರೆ.

‘ಬೀಜ, ಗೊಬ್ಬರ, ಕೂಲಿಗಾಗಿ ₹ 1.20 ಲಕ್ಷ ಖರ್ಚು ತಗುಲಿದೆ. ಅಡಿಕೆಗೆ ಕೊಡುವ ಹನಿ ನೀರಾವರಿಯಲ್ಲಿಯೇ ಸಿಹಿ ಕುಂಬಳ ಸಮೃದ್ಧವಾಗಿ ಫಸಲು ನೀಡಿದೆ. ಬೇಸಿಗೆಯಲ್ಲಿ ಅಡಿಕೆ ಬೆಳೆಗೆ ತಂಪು ನೀಡುವುದಲ್ಲದೇ ಉತ್ತಮ ಹಸಿರೆಲೆ ಗೊಬ್ಬರ ಕೂಡ ಸಿಗಲಿದೆ. ಕೇವಲ 80ರಿಂದ 85 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ’ ಎನ್ನುತ್ತಾರೆ ಉಮೇಶ್.

ADVERTISEMENT

‘ದಾವಣಗೆರೆಯಲ್ಲಿ 50 ಗ್ರಾಂ ತೂಕದ 40 ಪ್ಯಾಕೆಟ್ ಸಿಹಿಕುಂಬಳ ಬೀಜ ಖರೀದಿಸಿದ್ದೆ. ಒಂದು ಪ್ಯಾಕೆಟ್‌ನಲ್ಲಿ 400 ಬೀಜಗಳಿರುತ್ತವೆ. ಎರಡು ಅಡಿಕೆ ಗಿಡಗಳ ನಡುವೆ ಬೀಜಗಳನ್ನು ನಾಟಿ ಮಾಡಿದೆ. ಬೇಸಿಗೆಯಲ್ಲೂ ಸಮೃದ್ಧ ಫಸಲು ಬಂದಿದೆ. ಖರೀದಿದಾರರು ನೇರವಾಗಿ ಹೊಲಕ್ಕೆ ಬಂದು ಖರೀದಿಸುತ್ತಾರೆ. ಸಾಗಣೆ ಖರ್ಚು ಇರುವುದಿಲ್ಲ. ಮುಂಬೈಗೆ ಸಿಹಿ ಕುಂಬಳ ರವಾನಿಸಲಾಗುತ್ತದೆ. ಒಂದು ಸಿಹಿ ಕುಂಬಳ 3ರಿಂದ 4 ಕೆ.ಜಿ. ತೂಗುತ್ತದೆ. ಮಳೆಗಾಲದಲ್ಲಿ ಪ್ರತಿ ಎಕರೆಗೆ 10 ಕ್ವಿಂಟಲ್ ಇಳುವರಿ ಲಭಿಸಿತ್ತು’ ಎಂದು ಉಮೇಶ್‌ ಹೇಳಿಕೊಂಡರು.

ಸಹಿ ಕುಂಬಳ ರಾಶಿ
ಸಿಹಿ ಕುಂಬಳ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.