ADVERTISEMENT

ದಾವಣಗೆರೆ: ರೈತರೊಂದಿಗೆ ಕೃಷಿ ಇಲಾಖೆ ‘ಗ್ರೂಪ್‌ಟಾಕ್‌’

ಏಕಕಾಲಕ್ಕೆ ಸಾವಿರಾರು ಜನರನ್ನು ಸಂಪರ್ಕಿಸಲು ನೂತನ ತಂತ್ರಜ್ಞಾನದ ಮೊರೆ

ಜಿ.ಬಿ.ನಾಗರಾಜ್
Published 13 ಜುಲೈ 2024, 6:55 IST
Last Updated 13 ಜುಲೈ 2024, 6:55 IST
ಆರ್‌.ಜಿ.ಸಿದ್ದೇಶ್‌, ರೈತ
ಆರ್‌.ಜಿ.ಸಿದ್ದೇಶ್‌, ರೈತ   

ದಾವಣಗೆರೆ: ರೈತರನ್ನು ಸಂಪರ್ಕಿಸಲು ಕೃಷಿ ಇಲಾಖೆ ‘ಗ್ರೂಪ್‌ಟಾಕ್‌’ ಎಂಬ ಹೊಸ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದೆ. ತಂತ್ರಜ್ಞಾನದ ನೆರವಿನಿಂದ ಏಕಕಾಲಕ್ಕೆ ಸಾವಿರಾರು ಜನರಿಗೆ ಸಲಹೆ, ಸೂಚನೆಗಳನ್ನು ನೀಡಲಾಗುತ್ತಿದ್ದು, ರೈತರಿಂದ ಉತ್ತಮ ಪ್ರತಿಸ್ಪಂದನೆ ವ್ಯಕ್ತವಾಗುತ್ತಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಇ–ಆಡಳಿತದ ಭಾಗವಾಗಿ ನೂತನ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿದೆ. ಕೃಷಿ, ಕಂದಾಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗಳು ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿವೆ. ಜಿಲ್ಲೆಯ ರೈತರು ಹೊಸ ತಾಂತ್ರಿಕ ವ್ಯವಸ್ಥೆಯಡಿ ಆಗಾಗ ಸೇರುತ್ತಿದ್ದು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ದಾವಣಗೆರೆ ತಾಲ್ಲೂಕಿನ ರೈತರನ್ನು ಸಂಪರ್ಕಿಸಲು ಕೃಷಿ ಇಲಾಖೆ ‘ಗ್ರೂಪ್‌ಟಾಕ್‌’ ಅಥವಾ ‘ವಾಯ್ಸ್‌ ಕಾನ್ಫರೆನ್ಸ್‌’ ಈಚೆಗೆ ಬಳಸಿಕೊಂಡಿದೆ. ಆಧಾರ್‌–ಪಹಣಿ ಜೋಡಿಸುವಂತೆ ಸೂಚನೆ ನೀಡಲು ‘ಗ್ರೂಪ್‌ಟಾಕ್‌’ ವ್ಯವಸ್ಥೆಯ ಮೊರೆ ಹೋಗಿದೆ. ಮೂರು ಸಾವಿರಕ್ಕೂ ಹೆಚ್ಚು ರೈತರನ್ನು ಏಕಕಾಲಕ್ಕೆ ದೂರವಾಣಿ ಮೂಲಕ ಸಂಪರ್ಕಿಸಿದೆ. ಮೆಕ್ಕೆಜೋಳಕ್ಕೆ ಕಾಣಿಸಿಕೊಂಡ ಲದ್ದಿಹುಳು ಬಾಧೆ, ಬೆಳೆ ವಿಮೆ ಕಂತು ಪಾವತಿ, ಬೆಳೆ ಸಮೀಕ್ಷೆ ಸೇರಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ.

ADVERTISEMENT

‘ಆಧಾರ್‌–ಪಹಣಿ ಜೋಡಿಸದ ರೈತರ ಪಟ್ಟಿ ಇಲಾಖೆಯಲ್ಲಿತ್ತು. ಈ ಜೋಡಣೆಯಿಂದ ಆಗುವ ಅನುಕೂಲಗಳನ್ನು ರೈತರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿತ್ತು. ಎನ್‌ಐಸಿ ಬೆಂಗಳೂರು ಕಚೇರಿಗೆ ರೈತರ ಹೆಸರು, ಊರು ಹಾಗೂ ದೂರವಾಣಿ ಸಂಖ್ಯೆಯನ್ನು ಒದಗಿಸಿ ‘ಗ್ರೂಪ್‌ಟಾಕ್‌’ಗೆ ಸಮಯ ನಿಗದಿಪಡಿಸುವಂತೆ ಕೋರಿಕೆ ಸಲ್ಲಿಸಲಾಯಿತು. ಜೂನ್‌ 28ರಂದು ಮಧ್ಯಾಹ್ನ 2.30ಕ್ಕೆ ರೈತರೊಂದಿಗೆ ಈ ಸಂವಹನ ಸಾಧ್ಯವಾಯಿತು. ಸುಮಾರು 45 ನಿಮಿಷ ರೈತರೊಂದಿಗೆ ಮಾತುಕತೆ ನಡೆಸಲಾಯಿತು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ಶ್ರೀಧರಮೂರ್ತಿ ತಿಳಿಸಿದರು.

ಏಕಕಾಲಕ್ಕೆ 5 ಸಾವಿರ ಜನರ ಸಂಪರ್ಕ:

ಬೆಂಗಳೂರಿನ ಎನ್‌ಐಸಿ ಕೇಂದ್ರ ಕಚೇರಿಯಿಂದ ಈ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಾಗುತ್ತಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಂಪರ್ಕಿಸಬೇಕಾದ ಜನರ ಹೆಸರು, ಊರು ಹಾಗೂ ಮೊಬೈಲ್‌ ಸಂಖ್ಯೆಯನ್ನು ಎನ್‌ಐಸಿಗೆ ಒದಗಿಸುತ್ತಾರೆ. ಗರಿಷ್ಠ ಐದು ಸಾವಿರ ಜನರಿಗೆ ಏಕಕಾಲದಲ್ಲಿ ದೂರವಾಣಿ ಕರೆ ಮಾಡಲು ಅವಕಾಶವಿದೆ. ಇದು ದ್ವಿಮುಖ ಸಂವಹನ ವ್ಯವಸ್ಥೆಯಾಗಿದ್ದು, ಅನುಮಾನಗಳನ್ನು ನಿವಾರಿಸಿಕೊಳ್ಳಲು ಪ್ರಶ್ನೆಗಳನ್ನು ಕೇಳಬಹುದಾಗಿದೆ.

ಸಂಪರ್ಕಿಸಬಹುದಾದ ವ್ಯಕ್ತಿಗಳ ಮೊಬೈಲ್‌ ಸಂಖ್ಯೆಗಳನ್ನು ಉಪಕರಣಕ್ಕೆ ಅಳವಡಿಸಿ ಸಮಯ ನಿಗದಿಪಡಿಸಲಾಗುತ್ತದೆ. ‘ಗ್ರೂಪ್‌ಟಾಕ್‌’ಗೆ ನಿಗದಿಪಡಿಸಿದ ದಿನ, ಸಮಯ, ವಿಷಯ ಹಾಗೂ ಮಾತನಾಡುವ ವ್ಯಕ್ತಿಯ ಬಗ್ಗೆ ಜನರಿಗೆ ಸಂದೇಶ ರವಾನೆಯಾಗುತ್ತದೆ. ಈ ಸಂದೇಶ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ರವಾನಿಸಲಾಗುತ್ತದೆ. ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲು ಇದೇ ಸಂದೇಶ ಮತ್ತೆ ಸಂಬಂಧಿಸಿದ ವ್ಯಕ್ತಿಯ ಮೊಬೈಲ್‌ಗೆ ಬರುತ್ತದೆ. ಸಮಯ ಬಿಡುವು ಮಾಡಿಕೊಳ್ಳಲು ಇದರಿಂದ ಸಹಕಾರಿಯಾಗುತ್ತದೆ.

‘ರೈತರನ್ನು ಸಂಪರ್ಕಿಸಿ ಸಲಹೆ, ಸೂಚನೆಗಳನ್ನು ನೀಡಲು ಇದರಿಂದ ಅನುಕೂಲವಾಗಿದೆ. ಇಲಾಖೆಯ ಸೌಲಭ್ಯ, ಬೆಳೆ, ಪೋಷಕಾಂಶ ನಿರ್ವಹಣೆಯ ಕುರಿತು ರೈತರೊಂದಿಗೆ ಮಾತುಕತೆ ನಡೆಸುವುದು ಸಲೀಸಾಗಿದೆ. ಈ ತಾಂತ್ರಿಕ ಸೌಲಭ್ಯವನ್ನು ಇನ್ನಷ್ಟು ಸಮರ್ಪಕವಾಗಿ ಬಳಸಿಕೊಳ್ಳಲು ಸಜ್ಜಾಗುತ್ತಿದ್ದೇವೆ’ ಎಂದು ಶ್ರೀಧರಮೂರ್ತಿ ವಿವರಿಸಿದರು.

ಚರ್ಚೆಗೂ ಅವಕಾಶ

‘ಗ್ರೂಪ್‌ಟಾಕ್‌’ನಲ್ಲಿ ದ್ವಿಮುಖ ಸಂವಹನ ವ್ಯವಸ್ಥೆ ಇರುವುದರಿಂದ ಚರ್ಚೆಗೂ ಅವಕಾಶ ಕಲ್ಪಿಸಲಾಗುತ್ತದೆ. ಅಧಿಕಾರಿ ಅಥವಾ ಸಂಬಂಧಿಸಿದ ವ್ಯಕ್ತಿ ಮಾತನಾಡಿದ ಬಳಿಕ ರೈತರು ಪ್ರಶ್ನೆಗಳನ್ನು ಕೇಳಬಹುದಾಗಿದೆ. ಅನುಮಾನಗಳನ್ನು ನಿವಾರಿಸಿಕೊಳ್ಳಲು ಕೊನೆಯ ಕೆಲ ನಿಮಿಷಗಳನ್ನು ಮೀಸಲಿಡಲಾಗುತ್ತದೆ.

‘ನಿಗದಿತ ಸಮಯಕ್ಕೆ ವ್ಯಕ್ತಿಗೆ ದೂರವಾಣಿ ಕರೆ ಹೋಗುತ್ತದೆ. ಮೊದಲೇ ಸಂದೇಶ ಗಮನಿಸಿದವರು ಕರೆ ಸ್ವೀಕರಿಸಿ ‘ಗ್ರಾಪ್‌ಟಾಕ್‌’ಗೆ ಸಜ್ಜಾಗುತ್ತಾರೆ. ಕರೆ ಸ್ವೀಕರಿಸದೇ ಇದ್ದರೆ ಅಥವಾ ತಾಂತ್ರಿಕ ಸಮಸ್ಯೆಯಿಂದ ಸಂಪರ್ಕ ಕಡಿತಗೊಂಡವರು ಮತ್ತೆ ಸೇರಬಹುದಾಗಿದೆ. ಪ್ರತಿ ಐದು ನಿಮಿಷಕ್ಕೊಮ್ಮೆ ನಿಯಮಿತವಾಗಿ ಕರೆ ಮಾಡಲಾಗುತ್ತದೆ. ಪ್ರಶ್ನೆ ಕೇಳಲು ಅನುಮಾನ ನಿವಾರಿಸಿಕೊಳ್ಳಲು ‘0’ ಪ್ರೆಸ್‌ ಮಾಡುವಂತೆ ಸೂಚಿಸಲಾಗುತ್ತದೆ. ಇಂತಹವರಿಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ’ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರದ ಅಧಿಕಾರಿಯೊಬ್ಬರು ವಿವರಿಸಿದರು.

ಮೆಕ್ಕೆಜೋಳಕ್ಕೆ ತಗುಲಿದ ಲದ್ದಿ ಹುಳು ಬಾಧೆಗೆ ಸಂಬಂಧಿಸಿದ ಮಾಹಿತಿ ‘ಗ್ರೂಪ್‌ಟಾಕ್‌’ನಲ್ಲಿ ಸಿಕ್ಕಿತು. ಇ–ಕೆವೈಸಿಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ರೈತರು ಬಗೆಹರಿಸಿಕೊಳ್ಳಲು ಅನುಕೂಲವಾಯಿತು.
ಆರ್‌.ಜಿ.ಸಿದ್ದೇಶ್‌, ರೈತ ರಾಂಪುರ ದಾವಣಗೆರೆ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.