ದಾವಣಗೆರೆ: ದೀಪಾವಳಿ ಹಬ್ಬದ ಸಡಗರದಲ್ಲಿ ಸಿಡಿಸಿದ ಪಟಾಕಿಯಿಂದ ಮಾಲಿನ್ಯಕಾರಕ ಕಣಗಳು (ಪಿಎಂ 10) ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡು ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೊರಹೊಮ್ಮಿದ ಶಬ್ದ ವಾತಾವರಣ ಕಲುಷಿತಗೊಳಿಸಿದೆ.
‘ಹಸಿರು ಪಟಾಕಿ ಮಾತ್ರವೇ ಬಳಸಬೇಕು’ ಎಂಬ ನಿರ್ಬಂಧವನ್ನು ಸರ್ಕಾರ ಹೇರಿದರೂ ಶಬ್ದ ಹಾಗೂ ವಾಯು ಮಾಲಿನ್ಯ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಸರ್ಕಾರ ಹಾಗೂ ಸಂಘ– ಸಂಸ್ಥೆಗಳು ಹಬ್ಬಕ್ಕೂ ಮುನ್ನ ಪಟಾಕಿ ಬಗ್ಗೆ ಜಾಗೃತಿ ಮೂಡಿಸಿದ್ದವು. ಆದರೂ, ಹಬ್ಬದ ಅಂಗವಾಗಿ ದಾವಣಗೆರೆ ನಗರದಲ್ಲಿ ನಾಲ್ಕು ದಿನ ಪಟಾಕಿ ಜೋರಾಗಿ ಸಿಡಿದವು.
ಪಟಾಕಿ ಸ್ಫೋಟದಿಂದ ವಾತಾವರಣದಲ್ಲಿ ಆಗಿರುವ ಬದಲಾವಣೆಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ದಾಖಲಿಸಿದೆ. ದೇವರಾಜ ಅರಸು ಬಡಾವಣೆಯಲ್ಲಿರುವ ಪ್ರಾದೇಶಿಕ ಕಚೇರಿ ಹಾಗೂ ಪಿ.ಬಿ. ರಸ್ತೆಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣದ ಮುಂಭಾಗದ ಸಂಚಾರ ಪೊಲೀಸ್ ಠಾಣೆಯ ಕೇಂದ್ರದಲ್ಲಿ ವಾಯು ಗುಣಮಟ್ಟ ಹಾಗೂ ಶಬ್ದ ಮಾಲಿನ್ಯವನ್ನು ಅಳೆಯಲಾಗಿದೆ.
ಹಬ್ಬಕ್ಕೂ ಮುನ್ನ ಅ.27ರಿಂದ ಅ.30ರವರೆಗೆ ಹಾಗೂ ಹಬ್ಬದ ದಿನಗಳಾದ ಅ.31ರಿಂದ ನ.3ರವರೆಗೆ ವಾಯು ಗುಣಮಟ್ಟ ಹಾಗೂ ಶಬ್ದವನ್ನು ಪರಿಶೀಲಿಸಲಾಗಿದೆ. ದೇವರಾಜ ಅರಸು ಬಡಾವಣೆಯಲ್ಲಿರುವ ಪ್ರಾದೇಶಿಕ ಕಚೇರಿಯ ಕೇಂದ್ರದಲ್ಲಿ ದೊಡ್ಡ ವ್ಯತ್ಯಾಸಗಳೇನೂ ಕಾಣಿಸಿಕೊಂಡಿಲ್ಲ. ಪಿ.ಬಿ ರಸ್ತೆಯ ಸಂಚಾರ ಪೊಲೀಸ್ ಠಾಣೆಯ ಕೇಂದ್ರದಲ್ಲಿ ಹಬ್ಬಕ್ಕೂ ಮುನ್ನ ಉತ್ತಮವಾಗಿದ್ದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಿಢೀರ್ ಏರಿಕೆ ಕಂಡಿದೆ.
ಒಂದು ಸಾವಿರ ಲೀಟರ್ ಗಾಳಿಯಲ್ಲಿ ಪಿಎಂ 10 ಮಾಲಿನ್ಯಕಾರಕ ಕಣಗಳ ಪ್ರಮಾಣ 120ರಿಂದ 194ಮೈಕ್ರೋ ಗ್ರಾಂ ವರೆಗೆ ಏರಿಳಿತ ಕಂಡಿದೆ. ಪಿಎಂ 2.5 ಮಾಲಿನ್ಯಕಾರಕ ಕಣಗಳ ಪ್ರಮಾಣ 24ರಿಂದ 52ಮೈಕ್ರೋ ಗ್ರಾಂ ನಡುವೆ ಕಾಣಿಸಿಕೊಂಡಿದೆ. ಶಬ್ದದ ಪ್ರಮಾಣ 66ರಿಂದ 80 ಡೆಸಿಬಲ್ ನಡುವೆ ದಾಖಲಾಗಿದೆ. ರಾತ್ರಿ 10 ಗಂಟೆಯ ಬಳಿಕವೂ ಪಟಾಕಿ ಸಿಡಿಸಿರುವುದು ಶಬ್ದ ಮಾಪಕದಲ್ಲಿ ದಾಖಲಾಗಿದೆ.
ಪಿಎಂ 2.5 ಮಾಲಿನ್ಯಕಾರಕ ಕಣಗಳ ವಾರ್ಷಿಕ ಸರಾಸರಿ ಪ್ರಮಾಣ 40ಮೈಕ್ರೋ ಗ್ರಾಂ ಇದೆ. ನ.1ರ ನರಕ ಚತುರ್ದಶಿಯಂದು 51 ಮೈಕ್ರೋ ಗ್ರಾಂ ಹಾಗೂ ನ.2ರ ಬಲಿಪಾಡ್ಯಮಿಯ ದಿನ 52 ಮೈಕ್ರೋ ಗ್ರಾಂ ಕಾಣಿಸಿಕೊಂಡಿವೆ. ಪಿಎಂ 10 ಕಣಗಳ ವಾರ್ಷಿಕ ಸರಾಸರಿ ಪ್ರಮಾಣ 60 ಮೈಕ್ರೋ ಗ್ರಾಂ ಇದೆ. ಹಬ್ಬದ ನಾಲ್ಕು ದಿನವೂ ಈ ಕಣಗಳು ದ್ವಿಗುಣ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ದಾವಣಗೆರೆಯ ಜನವಸತಿ ಪ್ರದೇಶದ ಸರಾಸರಿ ಶಬ್ದದ ಪ್ರಮಾಣ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ 55 ಡೆಸಿಬಲ್ ಹಾಗೂ ರಾತ್ರಿ 45 ಡೆಸಿಬಲ್ ಇದೆ. ಅ.31ರಂದು 68 ಡೆಸಿಬಲ್, ನ.1ರಂದು 67 ಡೆಸಿಬಲ್ ಹಾಗೂ ನ.2ರಂದು 80 ಡೆಸಿಬಲ್ ಶಬ್ದ ದಾಖಲಾಗಿದೆ. ವಾಣಿಜ್ಯ ಹಾಗೂ ಕೈಗಾರಿಕಾ ಪ್ರದೇಶದಲ್ಲಿರುವ ಶಬ್ದ ಜನವಸತಿ ಪ್ರದೇಶದಲ್ಲಿ ಹೊರಹೊಮ್ಮಿದೆ.
‘ಪಟಾಕಿ ಸಿಡಿಸಿದ ಪರಿಣಾಮವಾಗಿ ದಾವಣಗೆರೆ ನಗರದ ವಾತಾವರಣದಲ್ಲಿ ಕೊಂಚ ಬದಲಾವಣೆಯಾಗಿದೆ. ಪಿ.ಬಿ ರಸ್ತೆಯ ಮಾಪನ ಕೇಂದ್ರದಲ್ಲಿ ಪಟಾಕಿ ಜೊತೆಗೆ ವಾಹನಗಳ ಶಬ್ದವೂ ದಾಖಲಾಗಿದೆ. ಮಕ್ಕಳು, ವೃದ್ಧರು ಹಾಗೂ ಪಕ್ಷಿಗಳಿಗೆ ತೊಂದರೆ ಉಂಟಾಗಿದೆ’ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.