ADVERTISEMENT

‘ಅಕ್ಕ ಅಣ್ಣ ಬಣ್ಣ’ ಚಿತ್ರಕಲಾ ಪ್ರದರ್ಶನ 26ರಿಂದ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 10:45 IST
Last Updated 22 ಸೆಪ್ಟೆಂಬರ್ 2021, 10:45 IST
ದಾವಣಗೆರೆಯ ಕಲಾವಿದ ಶಾಂತಯ್ಯ ಪರಡಿಮಠ ಅವರು ರಚಿಸಿರುವ ಕಲಾಕೃತಿ
ದಾವಣಗೆರೆಯ ಕಲಾವಿದ ಶಾಂತಯ್ಯ ಪರಡಿಮಠ ಅವರು ರಚಿಸಿರುವ ಕಲಾಕೃತಿ   

ದಾವಣಗೆರೆ: ನಗರದ ತರಳಬಾಳು ಬಡಾವಣೆಯ ಸ್ವಸ್ತಿ ಆರ್ಟ್‌ ಗ್ಯಾಲರಿಯಲ್ಲಿ ಸೆಪ್ಟೆಂಬರ್‌ 26ರಿಂದ ಮೂರು ದಿನಗಳ ಕಾಲ ಕಲಾವಿದ ಶಾಂತಯ್ಯ ಪರಡಿಮಠ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ‘ಅಕ್ಕ ಅಣ್ಣ ಬಣ್ಣ’ವನ್ನು ಹಮ್ಮಿಕೊಳ್ಳಲಾಗಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಲಾವಿದ ಶಾಂತಯ್ಯ ಪರಡಿಮಠ, ‘ತ್ಯಾಗಜೀವಿ ಅಕ್ಕಮಹಾದೇವಿ ಹಾಗೂ ಅಣ್ಣ ಬಸವಣ್ಣ ಇಬ್ಬರ ವಿಚಾರಧಾರೆಗಳನ್ನು ಬಣ್ಣದಲ್ಲಿ ತರುವ ಪ್ರಯತ್ನವಾಗಿ ಅಕ್ಕ ಅಣ್ಣ ಬಣ್ಣ ಚಿತ್ರಕಲಾ ಪ್ರದರ್ಶನ ಹಮ್ಮಿಕೊಂಡಿದ್ದೇನೆ. ಇದೇ ಮೊದಲ ಬಾರಿಗೆ ಏಕವ್ಯಕ್ತಿ ಕಲಾ ಪ್ರದರ್ಶನ ನೀಡುತ್ತಿದ್ದೇನೆ’ ಎಂದು ಹೇಳಿದರು.

‘30 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಜಲವರ್ಣ ಹಾಗೂ ಅಕ್ರಾಲಿಕ್‌ ಮಾಧ್ಯಮದಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಇಲ್ಲಿನ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಕಲಿತವರು ದೇಶದಾದ್ಯಂತ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೂತನ ಶಿಕ್ಷಣ ನೀತಿಯಲ್ಲಿ ಲಲಿತಕಲೆಗೂ ಆದ್ಯತೆ ನೀಡಲಾಗಿದೆ. ಇಂಥ ಪ್ರದರ್ಶನಗಳು ಮಕ್ಕಳ ಭವಿಷ್ಯಕ್ಕೆ ಹಾಗೂ ಶಿಕ್ಷಕಕ್ಕೆ ಪೂರಕವಾಗಲಿದೆ’ ಎಂದು ತಿಳಿಸಿದರು.

ADVERTISEMENT

ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ದತ್ತಾತ್ರೇಯ ಭಟ್‌, ‘ಸೆ. 26ರಂದು ಬೆಳಿಗ್ಗೆ 10.30ಕ್ಕೆ ಮಂಜುನಾಥಸ್ವಾಮಿ ಚಾಲನೆ ನೀಡಲಿದ್ದಾರೆ. ಉದ್ಘಾಟನೆ ಬಳಿಕ ಅನುಶ್ರೀ ಬಳಗದಿಂದ ಕುಂಚ ಗಾಯನ ಕಾರ್ಯಕ್ರಮ ನಡೆಯಲಿದೆ. ಮೂರು ದಿನಗಳ ಕಾಲ ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಚಿತ್ರಕಲೆ ವೀಕ್ಷಣೆಗೆ ಅವಕಾಶವಿರಲಿದೆ’ ಎಂದು ಹೇಳಿದರು.

ಸ್ವಸ್ತಿ ಆರ್ಟ್‌ ಗ್ಯಾಲರಿಯ ಮೇಲ್ವಿಚಾರಕ ರವಿ ಹುದ್ದಾರ, ‘ಜಿಲ್ಲೆಯಲ್ಲಿ ಸುಮಾರು 2,500 ಚಿತ್ರಕಲಾವಿದರಿದ್ದಾರೆ. ಚಿತ್ರಕಲೆಯನ್ನು ಪ್ರಚಾರಕ್ಕೆ ತರಲು ಆರ್ಟ್‌ ಗ್ಯಾಲರಿ ನಿರ್ಮಿಸಲಾಗಿದ್ದು, ಪ್ರತಿ ತಿಂಗಳು ಒಬ್ಬ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡಲು ಉದ್ದೇಶಿಸಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.