ದಾವಣಗೆರೆ: ಮಹಿಳೆಯರು, ತಳ ಸಮುದಾಯದವರು ಸ್ವಾತಂತ್ರ್ಯಪೂರ್ವದಲ್ಲಿ ಶಿಕ್ಷಣದ ಕುರಿತು ಯೋಚಿಸಲೂ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಅವರ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸಿ, ಅಕ್ಷರ ಕಲಿಸಲು ಶ್ರಮಿಸಿದವರು ಸಾವಿತ್ರಿಬಾಯಿ ಫುಲೆ.
ದಲಿತರು, ಹಿಂದುಳಿದವರು, ಮಹಿಳೆಯರಿಗೆ ಶಿಕ್ಷಣದ ಅಗತ್ಯವನ್ನು ಮನಗಂಡ ಸಾವಿತ್ರಿಬಾಯಿ ತಮ್ಮ ವೈಯಕ್ತಿಕ ಜೀವನವನ್ನು ಬದಿಗಿರಿಸಿ, ದಮನಿತರಿಗಾಗಿ ದುಡಿದರು. ಈ ಹಾದಿಯಲ್ಲಿ ಸ್ವತಃ ಅವಮಾನ, ದಬ್ಬಾಳಿಕೆ, ಹಲ್ಲೆ, ನಿಂದನೆಗಳನ್ನು ಎದುರಿಸಬೇಕಾಗಿ ಬಂದರೂ, ಎದೆಗುಂದದೆ ಗುರಿಯತ್ತ ಮುನ್ನಡೆದರು. ಈ ಕಾರಣಕ್ಕೆ ಸಾವಿತ್ರಿಬಾಯಿ ಫುಲೆ ಅವರು ‘ಮೊದಲ ಅಕ್ಷರದವ್ವ’ ಎಂದೇ ಮನೆಮಾತಾಗಿದ್ದಾರೆ.
ಪೇಶ್ವೆಗಳ ಕರ್ಮಠ ಸಂಪ್ರದಾಯ, ಸನಾತನಿಗಳ ಕ್ರೌರ್ಯದ ಕಾಲವದು. ಕೇಶಮುಂಡನ, ಸತಿ ಸಹಗಮನ, ಬಾಲ್ಯ ವಿವಾಹದಂತಹ ಕಂದಾಚಾರಗಳು ಮುಂದುವರಿದಿದ್ದವು. 13ನೇ ವಯಸ್ಸಿಗೆ ಜ್ಯೋತಿಬಾ ಫೂಲೆ ಅವರೊಂದಿಗೆ ಸಾವಿತ್ರಿ ಮದುವೆ. ಪುಣೆಯ ಸ್ಥಿತಿವಂತರಾದ ಜ್ಯೋತಿಬಾ ಫುಲೆ ಹಿಂದುಳಿದ ಮಾಳಿಯೆಂಬ ಮಾಲಗಾರ ಕುಲದವರು. ಅಪಾರ ಸಾಮಾಜಿಕ ಕಳಕಳಿ ಉಳ್ಳವರು. ಅವರಲ್ಲಿನ ಜನಪ್ರಭುತ್ವದ ಆಶಯಗಳಿಗೆ ಇಂಬಾಗಿ ಬಂದವರು ಸಾವಿತ್ರಿಬಾಯಿ. ಸತಾರ ಸಮೀಪದ ನಾಯಗಾಂವ ಸಾವಿತ್ರಿಬಾಯಿ ಊರು.
ತಾನು ಅಕ್ಷರ ಕಲಿತು ಮಹಿಳೆಯರೆಲ್ಲರೂ ಸಾಕ್ಷರರಾಗಬೇಕೆಂಬ ಲಿಂಗ ಸಮಾನತೆಯ ಅದಮ್ಯ ಕನಸುಗಾರ್ತಿ ಸಾವಿತ್ರಿಬಾಯಿ. ಸಮಾನತೆ ಸಾರುವ ಪತಿಯ ಕನಸುಗಳಿಗೆ ಗುಡ್ಡದಷ್ಟು ಅಡ್ಡಿಗಳು. ಅಂತಹ ಕನಸುಗಳ ಸಾಕಾರದ ಸಂಕಥನವೇ ಈ ನಾಟಕ. 175 ವರ್ಷಗಳ ಹಿಂದೆ ಸಾವಿತ್ರಿಗೆ ಸಾಥ್ ನೀಡಿ ಶಾಲೆಗಳನ್ನು ಸ್ಥಾಪಿಸಿದವರು, ವಿಮೋಚನೆಗಾಗಿ ಬದುಕಿದವರು ಕೆಲವರು. ಅವರಲ್ಲಿ ಫಾತಿಮಾ ಶೇಖ್, ಸುಗುಣಾಬಾಯಿ ಸಹ ಪ್ರಮುಖರು.
ಸಾವಿತ್ರಿಬಾಯಿ ಕುರಿತು ಡಾ.ಡಿ.ಎಸ್. ಚೌಗಲೆ ನಾಟಕ ರಚಿಸಿದ್ದಾರೆ. 50 ನಿಮಿಷಗಳ ಮಿತಿಗೆ ಏಕವ್ಯಕ್ತಿ ರಂಗಪ್ರಯೋಗಕ್ಕೆ ತಂದವರು ರಂಗನಿರ್ದೇಶಕ ಮಂಜುನಾಥ ಬಡಿಗೇರ. ಹೆಗ್ಗೋಡಿನ ಕೆ.ವಿ. ಸುಬ್ಬಣ್ಣ ರಂಗಸಮೂಹದ ಎ.ಎಸ್. ಶೈಲಜಾ ಪ್ರಕಾಶ್ ಅವರು ಸಾವಿತ್ರಿಬಾಯಿ ಪಾತ್ರಕ್ಕೆ ಜೀವ ತುಂಬಿದ ಅಭಿನೇತ್ರಿ.
ರಂಗಪ್ರಯೋಗದ ಯಶಸ್ಸಿಗೆ ವಚನ, ಕೀರ್ತನೆಗಳ ಬಳಕೆಯೊಂದಿಗೆ ಖುದ್ದು ನಿರ್ದೇಶಕರೇ ಒಂದೆರಡು ಸಂದರ್ಭೋಚಿತ ಗೀತೆಗಳನ್ನು ರಚಿಸಿದ ಹೆಗ್ಗಳಿಕೆ. ಇತ್ತೀಚೆಗೆ ಏಕವ್ಯಕ್ತಿ ರಂಗಪ್ರಸ್ತುತಿಗಳು ಪರಂಪರೆಯಾಗಿ ಅಭಿವೃದ್ಧಿಯಾಗುತ್ತಿವೆ. ಅದರಲ್ಲೂ ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತಿರುವುದು ಸೋಜಿಗ. ಅನುಭವಿ ನಟಿ ಶೈಲಜಾ ಕೂಡ ಶಿಕ್ಷಕಿ. ಸಾವಿತ್ರಿಬಾಯಿ ದೇಶದ ಮೊದಲ ಶಿಕ್ಷಕಿ. ಸಾಮ್ಯತೆ ನೆರವಾಗಿದೆ.
ತೆಲಂಗಾಣದಿಂದ ಗುಳೇ ಹೊರಟುಬಂದ ಹತ್ತಾರು ಹಾವಾಡಿಗ ಕುಟುಂಬದ ಮಕ್ಕಳಿಗೆ ಕನ್ನಡ ಕಲಿಸಿ, ಮಕ್ಕಳು ಮತ್ತವರ ಕುಟುಂಬಗಳಿಗೆ ಸ್ವಾವಲಂಬನೆ ಹುಡುಕಿ ಕೊಟ್ಟಿರುವ ಶೈಲಜಾ, ಪ್ಲೇಗ್‌ನಿಂದ ಸಾಯುವ ಸಾವಿತ್ರಿಬಾಯಿಯ 66 ಸಂವತ್ಸರಗಳ ಸಾರ್ಥಕ ಬದುಕಿನ ಜತೆಗೆ ಹಾಸುಹೊಕ್ಕಿರುವ ಇತರೆ ಪಾತ್ರಗಳನ್ನು ಸಾಕ್ಷಾತ್ಕರಿಸಿದ್ದಾರೆ.
(ಲೇಖಕರು ರಂಗಭೂಮಿ ಬರಹಗಾರರು)
ರಂಗ ಬಳಗ, ದಾವಣಗೆರೆ ಅರ್ಪಿಸುವ ಸಾವಿತ್ರಿಬಾಯಿ ಫುಲೆ
ಏಕವ್ಯಕ್ತಿ ನಾಟಕ ಪ್ರದರ್ಶನ ಇಂದು
ಮುಖ್ಯ ಅತಿಥಿ: ಎಂ.ಜಿ. ಈಶ್ವರಪ್ಪ, ರಂಗ ತಜ್ಞರು
ಉಪಸ್ಥಿತಿ: ನಾಟಕಕಾರರಾದ ಡಿ.ಎಸ್. ಚೌಗಲೆ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ
ಬಿ. ವಾಮದೇವಪ್ಪ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ ಕಲ್ಪನಾ ರವೀಂದ್ರನಾಥ, ‘ಪ್ರಜಾವಾಣಿ’ ದಾವಣಗೆರೆ ಬ್ಯೂರೊ ಮುಖ್ಯಸ್ಥರಾದ ಸಿದ್ದಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ಸಹಾಯಕ ನಿರ್ದೇಶಕರಾದ ರವಿಚಂದ್ರ
ಸಹಯೋಗ: ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ದಾವಣಗೆರೆ ಜಿಲ್ಲಾ ಘಟಕ ಮತ್ತು ಅನ್ವೇಷಕರು ಆರ್ಟ್ ಫೌಂಡೇಶನ್ ಹಾಗೂ ಪ್ರತಿಮಾ ಸಭಾ
ಸಮಯ: ಸಂಜೆ: 6:15 ಕ್ಕೆ, ಸ್ಥಳ: ಕುವೆಂಪು ಕನ್ನಡ ಭವನ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.