ದಾವಣಗೆರೆ: ವಿಮಾ ಕಂತಿನ (ಪ್ರೀಮಿಯಂ) ಸಬ್ಸಿಡಿ ಮೊತ್ತವನ್ನು ಸರ್ಕಾರ ಹೆಚ್ಚಿಸಿದ ಬಳಿಕ ಜಾನುವಾರು ವಿಮೆಗೆ ರೈತರಲ್ಲಿ ಉತ್ಸುಕತೆ ಹೆಚ್ಚುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲೆಗೆ ಮೊದಲ ಹಂತದಲ್ಲಿ ಹಂಚಿಕೆಯಾಗಿದ್ದ ₹ 12 ಲಕ್ಷ ಸಹಾಯಧನ ತಿಂಗಳ ಅವಧಿಯಲ್ಲಿ ವಿನಿಯೋಗವಾಗಿದೆ.
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಜಾನುವಾರು ವಿಮಾ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ವಿಮಾ ಕಂತಿನ ಸಹಾಯಧನದ ಮೊತ್ತವನ್ನು ಶೇ 50ರಿಂದ ಶೇ 85ಕ್ಕೆ ಏರಿಕೆ ಮಾಡಿ ಸರ್ಕಾರ ಮಾರ್ಚ್ 30ರಂದು ಆದೇಶಿಸಿತ್ತು. ಶೇ 15ರಷ್ಟು ವಿಮಾ ಕಂತಿನ ಮೊತ್ತವನ್ನು ಮಾತ್ರ ಜಾನುವಾರು ಮಾಲೀಕರು ಭರಿಸಬೇಕಿದೆ.
ಜಿಲ್ಲೆಯಲ್ಲಿ 3.29 ಲಕ್ಷ ಜಾನುವಾರುಗಳಿವೆ. ಪ್ರಸಕ್ತ ವರ್ಷ ಈವರೆಗೆ 464 ರಾಸುಗಳ ವಿಮೆಗೆ ನೋಂದಣಿ ಮಾಡಲಾಗಿದೆ. ವಿಮೆ ಸೌಲಭ್ಯ ಕೋರಿ ಹಲವು ಜಾನುವಾರು ಮಾಲೀಕರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಮೊರೆ ಇಡುತ್ತಿದ್ದಾರೆ. 2ನೇ ಹಂತದ ಸಹಾಯಧನದ ಮೊತ್ತಕ್ಕೆ ಪ್ರಸ್ತಾವ ಸಲ್ಲಿಸಿದ ಇಲಾಖೆ, ಅನುದಾನಕ್ಕೆ ಎದುರು ನೋಡುತ್ತಿದೆ.
ಹೈನುಗಾರಿಕೆ ಮೂಲಕ ಸ್ವಾವಲಂಬೀ ಬದುಕು ಕಟ್ಟಿಕೊಂಡಿರುವ ರೈತರಿಗೆ ನೆರವು ನೀಡುವ ಉದ್ದೇಶದಿಂದ ಸರ್ಕಾರ ರಾಸು ವಿಮಾ ಸೌಲಭ್ಯವನ್ನು ಕಲ್ಪಿಸಿದೆ. ರಾಸುಗಳ ಒಟ್ಟು ಮೌಲ್ಯದ ಶೇ 2ರಷ್ಟು ಮೊತ್ತವನ್ನು ವಾರ್ಷಿಕ ಪ್ರೀಮಿಯಂ ಆಗಿ ನಿಗದಿಪಡಿಸಲಾಗಿತ್ತು. 2024–25ನೇ ಆರ್ಥಿಕ ವರ್ಷದಿಂದ ರಾಸುಗಳ ಒಟ್ಟು ಮೌಲ್ಯದ ಶೇ 4ರಷ್ಟನ್ನು ಪ್ರೀಮಿಯಂ ಆಗಿ ಪಾವತಿಸುವಂತೆ ಸೂಚನೆ ನೀಡಲಾಗಿತ್ತು. ಇದರಲ್ಲಿ ಶೇ 50ರಷ್ಟು ಮೊತ್ತವನ್ನು ಜಾನುವಾರು ಮಾಲೀಕ ಹಾಗೂ ಶೇ 50ರಷ್ಟು ಸರ್ಕಾರ ಸಹಾಯಧನದ ರೂಪದಲ್ಲಿ ಭರಿಸುತ್ತಿತ್ತು. ಪ್ರೀಮಿಯಂ ಮೊತ್ತ ಏರಿಕೆಯಾಗಿದ್ದರಿಂದ ರೈತರಿಗೆ ಹೊರೆಯಾಗಿತ್ತು.
ವಿಮಾ ಕಂತಿನ ಮೊತ್ತ ಏಕಾಏಕಿ ದ್ವಿಗುಣಗೊಂಡಿದ್ದರಿಂದ ರೈತರು ಹಿಂದೇಟು ಹಾಕಿದ್ದರು. ಪ್ರೀಮಿಯಂ ಹೆಚ್ಚಳ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನು ಮನಗಂಡ ಸರ್ಕಾರ, ಪ್ರೀಮಿಯಂ ದರ ಬದಲಾವಣೆ ಮಾಡದೇ ಸಹಾಯಧನವನ್ನು ಶೇ 50ರಿಂದ ಶೇ 85ಕ್ಕೆ ಏರಿಸಿದೆ. ಇದರಿಂದ ಪ್ರತಿ ಜಾನುವಾರುಗೆ ಮಾಲೀಕರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ ₹ 150ರಿಂದ ₹ 500ರವರೆಗೆ ಕಡಿಮೆಯಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮಾಹಿತಿ ನೀಡಿದೆ.
ಮೃತ ಜಾನುವಾರುಗಳಿಗೆ ಸರ್ಕಾರ ಸಂಪೂರ್ಣ ಪರಿಹಾರ ನೀಡಲು ಸಾಧ್ಯವಿಲ್ಲ. ವಿಮೆ ಮಾಡಿಸಿದರೆ ಒಟ್ಟು ಮೌಲ್ಯವನ್ನು ಪರಿಹಾರದ ರೂಪದಲ್ಲಿ ಪಡೆಯಬಹುದು. ವಿಮೆ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಸ್ಪಂದನೆ ಸಿಗುತ್ತಿದೆಡಾ.ಚಂದ್ರಶೇಖರ ಸುಂಕದ ಉಪನಿರ್ದೇಶಕ ಪಶುಪಾಲನಾ ಇಲಾಖೆ
ಹಸು ಎಮ್ಮೆ ಎತ್ತುಗಳ ವಿಮಾ ಸೌಲಭ್ಯಕ್ಕೆ ಆದ್ಯತೆ ನೀಡಲಾಗುತ್ತದೆ. ಹಸುವೊಂದು ಗರ್ಭಧರಿಸುವ ಸ್ಥಿತಿ ತಲುಪಿದ ಬಳಿಕ ವಿಮೆ ವ್ಯಾಪ್ತಿಗೆ ಒಳಪಡುತ್ತದೆ. ಸಾಮಾನ್ಯವಾಗಿ 4 ವರ್ಷ ಮೇಲ್ಪಟ್ಟ ರಾಸುಗಳಿಗೆ ರೈತರು ವಿಮೆ ಮಾಡಿಸಲು ಮುಂದಾಗುತ್ತಾರೆ. ವಿಮೆ ಕಂತು ಪಾವತಿಗೂ ಮುನ್ನ ರಾಸುಗಳನ್ನು ಪಶುವೈದ್ಯರು ಪರೀಕ್ಷಿಸುತ್ತಾರೆ. ವಯಸ್ಸು ಹಾಲು ನೀಡುವ ಸಾಮರ್ಥ್ಯ ಸೇರಿ ಇತರ ಮಾನದಂಡಗಳ ಆಧಾರದ ಮೇರೆಗೆ ಮೌಲ್ಯವನ್ನು ನಿರ್ಧರಿಸುತ್ತಾರೆ. ಪ್ರತಿ ಜಾನುವಾರಿಗೆ ಗರಿಷ್ಠ ₹ 70000ದವರೆಗೆ ವಿಮಾ ಸೌಲಭ್ಯ ಪಡೆಯಲು ಅವಕಾಶವಿದೆ. ಐದು ಲೀಟರ್‌ಗೂ ಕಡಿಮೆ ಹಾಲು ಕರೆಯುವ ಹಾಗೂ ಸ್ಥಳೀಯ ತಳಿಗಳನ್ನು ವಿಮಾ ವ್ಯಾಪ್ತಿಗೆ ತರಲು ರೈತರು ಹಿಂದೇಟು ಹಾಕುತ್ತಾರೆ. ಎಚ್‌ಎಫ್ ಸೇರಿ ಮಿಶ್ರ ತಳಿಯ ಹಾಲು ಕೊಡುವ ಹಸುಗಳು ವಿಮಾ ವ್ಯಾಪ್ತಿಗೆ ಒಳಪಡುತ್ತಿವೆ.
2023–24ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಗೆ ₹ 45 ಲಕ್ಷ ಸಹಾಯಧನ ಲಭಿಸಿತ್ತು. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆ ರೈತರು ವಿಮೆಗೆ ಹೆಚ್ಚು ಒಲವು ತೋರಿದ್ದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೊದಲ ಹಂತದಲ್ಲಿ ಬಿಡುಗಡೆಯಾದ ಸಹಾಯಧನ ಸಂಪೂರ್ಣ ವೆಚ್ಚವಾಗಿದೆ. 2ನೇ ಹಂತದ ಸಹಾಯಧನಕ್ಕೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ‘ವಿಮಾ ಕಂತಿನ ಶೇ 85ರಷ್ಟು ಪ್ರಮಾಣವನ್ನು ಸರ್ಕಾರ ಭರಿಸುತ್ತದೆ. ಇದಕ್ಕೆಂದೇ ಪ್ರತಿ ಜಿಲ್ಲೆಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. 1ರಿಂದ 3 ವರ್ಷದ ಅವಧಿಗೆ ವಿಮೆ ಮಾಡಿಸಲು ಅವಕಾಶವಿದೆ’ ಎನ್ನುತ್ತಾರೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಚಂದ್ರಶೇಖರ ಸುಂಕದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.