ADVERTISEMENT

ಚಾಕುವಿಗಾಗಿ ಪೊಲೀಸರ ಹುಡುಕಾಟ

ಅಂಜಲಿ ಕೊಲೆಗೆ ಬಳಸಿದ್ದ ಚಾಕುವಿನಿಂದಲೇ ಮಹಿಳೆಗೆ ಇರಿದಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 18 ಮೇ 2024, 17:55 IST
Last Updated 18 ಮೇ 2024, 17:55 IST
<div class="paragraphs"><p> ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದಾವಣಗೆರೆ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಅವರನ್ನು ಹತ್ಯೆ ಮಾಡಿರುವ ಆರೋಪಿ ಗಿರೀಶ ಸಾವಂತ, ಈ ಕೊಲೆಗೆ ಬಳಸಿದ್ದ ಚಾಕುವಿನಿಂದಲೇ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಇರಿದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು ದಾವಣಗೆರೆಯ ಮಾಯಕೊಂಡದ ಬಳಿ ಶನಿವಾರ ಚಾಕುವಿಗಾಗಿ ಹುಡುಕಾಟ ನಡೆಸಿದರು. 

ಗದಗ ಜಿ‌ಲ್ಲೆ ಮುಳುಗುಂದದ ಚಿಂದಿಪೇಟೆ ಓಣಿಯ ನಿವಾಸಿ ಲಕ್ಷ್ಮಿ ಅವರಿಗೆ ಚಾಕುವಿನಿಂದ ಇರಿದಿದ್ದ ಆರೋಪಿ, ತಪ್ಪಿಸಿಕೊಳ್ಳಲೆಂದು ರೈಲಿನಿಂದ ಹೊರಗೆ ಜಿಗಿದಿದ್ದ. ಆತ ಬಿದ್ದಿದ್ದ ಸ್ಥಳ ಹಾಗೂ ಮಾಯಕೊಂಡದ ಆಸುಪಾಸಿನ ರೈಲ್ವೆ ಹಳಿಗಳ ಸುತ್ತಲೂ ಪೊಲೀಸರು ಚಾಕುವಿಗಾಗಿ ಹುಡುಕಾಡಿದರು. 

ADVERTISEMENT

‘ಆರೋಪಿಯು ಅಂಜಲಿ ಕೊಲೆ ಹಾಗೂ ಮಹಿಳೆಗೆ ಇರಿಯಲು ಬಳಸಿದ್ದ ಚಾಕು ಒಂದೇ ಆಗಿರುವ ಸಾಧ್ಯತೆ ಇದೆ. ಆ ಚಾಕುವೇ ಈಗ ಪ್ರಕರಣದ ಮುಖ್ಯ ಸಾಕ್ಷ್ಯವಾಗಿರುವುದರಿಂದ ರೈಲ್ವೆ ಪೊಲೀಸರು ಹಾಗೂ ಹಳಿಗಳ ನಿರ್ವಹಣೆ ಮಾಡುವ ಕೀ ಮ್ಯಾನ್‌ಗಳು ಹುಡುಕಾಟ ನಡೆಸಿದ್ದಾರೆ. ರೈಲಿನಿಂದ ಜಿಗಿಯುವ ವೇಳೆ ಆರೋಪಿ ಕೈಯಲ್ಲಿ ಚಾಕು ಇತ್ತು ಎಂಬುದು ಗೊತ್ತಾಗಿದೆ. ಅದನ್ನು ಆತ ಹಳಿಯ ಸುತ್ತಮುತ್ತ ಬಿಸಾಡಿರುವ ಸಾಧ್ಯತೆ ಇದೆ’ ಎಂದು ರೈಲ್ವೆ ಪೊಲೀಸ್‌ ಮೂಲಗಳು ತಿಳಿಸಿವೆ.

‘ಮೃತ ಅಂಜಲಿ ಅವರ ದೇಹದಲ್ಲಾಗಿರುವ ಗಾಯಕ್ಕೂ, ಲಕ್ಷ್ಮಿ ಅವರಿಗೆ ಆಗಿರುವ ಗಾಯಕ್ಕೂ ಸಾಮ್ಯತೆ ಕಂಡುಬಂದಿದೆ. ಇವೆರಡೂ ಕೃತ್ಯಗಳಿಗೂ ಆರೋಪಿ ಒಂದೇ ಆಯುಧ ಬಳಸಿರಬಹುದೆಂಬ ಅನುಮಾನ ಮೂಡಿದೆ’ ಎಂದು ಹೇಳಿವೆ.  

ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ: ‘ಮಗನಿಗೆ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಆತನ ದಾಖಲಾತಿಗೆಂದು ತುಮಕೂರಿಗೆ ಹೋಗಿ ವಿಶ್ವ ಮಾನವ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪತಿ ಮಹಾಂತೇಶ ಸವಟೂರು ಅವರೊಂದಿಗೆ ಹುಬ್ಬಳ್ಳಿಗೆ ಬರುತ್ತಿದ್ದೆ. ಅಕ್ಕ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರು ಅರಸೀಕೆರೆಯಲ್ಲಿ ಇಳಿದುಕೊಂಡರು. ಅಲ್ಲಿ ರೈಲು ಏರಿದ್ದ ಆರೋಪಿ ನಾವು ಕುಳಿತಿದ್ದ ಸೀಟಿನ ಮುಂದಿನ ಸೀಟಿನಲ್ಲೇ  ಆಸೀನನಾದ. ಬಳಿಕ ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಲು ಶುರು ಮಾಡಿದ’ ಎಂದು ಲಕ್ಷ್ಮಿ ಅವರು ರೈಲ್ವೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಚಿಕಿತ್ಸೆಗಾಗಿ ಒಂದೇ ಆಸ್ಪತ್ರೆಗೆ ದಾಖಲು: ಆರಂಭದಲ್ಲಿ ಲಕ್ಷ್ಮಿ ಅವರನ್ನು ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗಿ ಅರ್ಧಗಂಟೆಯ ನಂತರ ಗಿರೀಶನನ್ನೂ ಇದೇ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿತ್ತು.   

‘ನಾನು ದಾಖಲಾಗಿದ್ದ ಆಸ್ಪತ್ರೆಗೆ ಗಿರೀಶ್‌ನನ್ನೂ ಕರೆತರಲಾಗಿತ್ತು. ಆತನ ‍ಪ್ಯಾಂಟ್‌ನಲ್ಲಿ ರಕ್ತದ ಕಲೆ ಇತ್ತು. ಅದನ್ನು ನೋಡಿ ನಾನು ಚೀರಾಡಿದೆ. ಅಲ್ಲಿದ್ದವರು ನನ್ನನ್ನು ಸಮಾಧಾನಪಡಿಸಿದರು’ ಎಂದು ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.