ADVERTISEMENT

10 ಕೆ.ಜಿ. ಅಕ್ಕಿ ನೀಡಲು ಬದ್ಧ: ಸಚಿವ ತಿಮ್ಮಾಪುರ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2023, 15:42 IST
Last Updated 22 ಜೂನ್ 2023, 15:42 IST
ಆರ್.ಬಿ. ತಿಮ್ಮಾಪುರ್
ಆರ್.ಬಿ. ತಿಮ್ಮಾಪುರ್   

ದಾವಣಗೆರೆ: ‘ನಾವು ಕೊಟ್ಟ ಮಾತಿನಂತೆ ‘ಅನ್ನಭಾಗ್ಯ’ ಯೋಜನೆಯಡಿ ತಲಾ 10 ಕೆ.ಜಿ. ಅಕ್ಕಿ ನೀಡಲು ನಾವು ಬದ್ಧರಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ಪೂರೈಸದೆ ಅಸಹಕಾರ ನೀತಿ ಅನುಸರಿಸುತ್ತಿರುವ ಕಾರಣದಿಂದಾಗಿ ಈ ಕೂಡಲೇ ಅಕ್ಕಿ ನೀಡಲಾಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಚಿವ ಮುನಿಯಪ್ಪ ಅವರಿಗೆ ಅವಕಾಶ ನೀಡದಿರುವುದು ಖಂಡನೀಯ’ ಎಂದರು.

‘ಸರ್ಕಾರ ಹೇಗೆ ನಡೆಸಬೇಕೆನ್ನುವುದು ನಮಗೆ ಗೊತ್ತಿದೆ. ಕೇಂದ್ರದ ಕೆಲ ಸಚಿವರು ಅದಾನಿ, ಅಂಬಾನಿ ಜತೆ ಬೆಳೆದವರಾಗಿದ್ದಾರೆ. ಹೀಗಾಗಿ ಅವರಿಗೆ ಬಡವರ ಕಷ್ಟದ ಬಗ್ಗೆ ಅರಿವಿಲ್ಲ’ ಎಂದು ಟೀಕಿಸಿದರು.

ADVERTISEMENT

‘ನಾವು ಮದ್ಯದ ದರ ಏರಿಕೆ ಮಾಡಿಲ್ಲ. ಬದಲಾಗಿ ಬಿಯರ್ ಕಂಪನಿಗಳೇ ದರ ಏರಿಕೆ ಮಾಡಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿದ್ದರಾಮಯ್ಯ ಅವರು ಪೂರ್ಣವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ.  ಹಲವರು ಈ ಬಗ್ಗೆ ಹೇಳಿಕೆ ನೀಡುತ್ತಿರುವುದು ಅವರ ವೈಯಕ್ತಿಕ. ಈ ಬಗ್ಗೆ ನಾನು ಏನನ್ನು ಹೇಳುವುದಿಲ್ಲ’ ಎಂದು ಹೇಳಿದರು.

‘ಬಿಜೆಪಿಯವರು ಸೋಲಿನ ಹತಾಶೆಯಿಂದ ಗೊಂದಲದಲ್ಲಿ ಇದ್ದಾರೆ. ಯಾರನ್ನಾದರೂ ಮಾಡಬಹುದು. ಸೋಲಿನ ಹೊಣೆ ಹೊರಲು ಯಾರು ಎಂದು ಯೋಚನೆ ಮಾಡುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಯಡಿಯೂರಪ್ಪ ಅವರಿಗೆ ತೀವ್ರ ಒತ್ತಡವಿದೆ. ಈಗ ಅವರನ್ನು ಪ್ರವಾಸ ಮಾಡಲು ಏಕೆ ಹೇಳುತ್ತಾರೋ ಗೊತ್ತಿಲ್ಲ. ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಾ ಇದೆ’ ಎಂದು ಯಡಿಯೂರಪ್ಪ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.