ದಾವಣಗೆರೆ: ಇಂದಿನ ಯುವಕರ ಬದುಕು ಮಾದಕ ವಸ್ತುಗಳ ಬಳಕೆಯಿಂದ ಹಾಳಾಗುತ್ತಿದೆ. ಹೀಗಾಗಿ ಅದರಿಂದ ಮುಕ್ತಗೊಂಡು ಸಮಾಜಕ್ಕೆ ದಾರಿದೀಪವಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಕಿವಿಮಾತು ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗ್ರಾಮಾಂತರ ಪೊಲೀಸ್ ಉಪ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವಿದ್ಯಾವಂತರೇ ಕಾನೂನು ಪಾಲಿಸದೇ ಇರುವುದು ಸಮಾಜಕ್ಕೆ ಹಾನಿಕಾರವಾಗಿದೆ. ಮಾದಕ ವಸ್ತು ಸೇವನೆ, ಅತ್ಯಾಚಾರ, ಕಾನೂನು ಉಲ್ಲಂಘನೆಯಂತಹ ಸಮಾಜ ಘಾತಕ ಚಟುವಟಿಕೆಗಳು ಕಂಡು ಬಂದರೆ ಪೋಲಿಸರಿಗೆ ಮಾಹಿತಿ ನೀಡಬೇಕು. ಅದಕ್ಕಾಗಿಯೇ ಇಲಾಖೆಯಿಂದ ಹೊಸ ಆ್ಯಪ್ ಅಭಿವೃದ್ಧಿಗೊಳಿಸಲಾಗಿದೆ ಎಂದು ಹೇಳಿದರು.
ಮಾದಕ ವ್ಯಸನಗಳ ಬಗ್ಗೆ ಉಪನ್ಯಾಸ ನೀಡಿದ ಪೊಲೀಸ್ ಅಧಿಕಾರಿ ದೇವರಾಜ್, ಪ್ರತಿ ದೇಶದಲ್ಲಿ 5.70 ಲಕ್ಷ ಜನ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಇದು ಆತಂಕಕಾರಿ ಸಂಗತಿ. ದೇಶದಲ್ಲಿ 238 ಡ್ರಗ್ಸ್ ನಿಷೇಧಿಸಲಾಗಿದೆ. ಮಾದಕ ವಸ್ತುಗಳ ಸಾಗಾಣಿಕೆ ಕಂಡು ಬಂದರೆ ಯಾವುದೇ ಭಯವಿಲ್ಲದೆ ಪೊಲೀಸರಿಗೆ ಉತ್ತಮ ಸಮಾಜ ನಿರ್ಮಿಸಲು ಸಹಕರಿಸಬೇಕು’ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಟಿ.ಜೆ, ಟ್ರಾಫಿಕ್ ಸಿಗ್ನಲ್ ಪಾಲಿಸುವುದು, ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಹಾಕುವುದರಿಂದ ಅಮೂಲ್ಯ ಜೀವ ಉಳಿಯುತ್ತದೆ ಎಂಬುದನ್ನು ವಿಡಿಯೊಗಳ ಮೂಲಕ ಮನವರಿಕೆ ಮಾಡಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಎಸ್.ವಿ. ಹಲಸೆ, ‘ಕಾನೂನು ಪಾಲಿಸಿ ಪೊಲೀಸ್ ಇಲಾಖೆಯೊಂದಿಗೆ ಜನ ಕೈಗೂಡಿಸಿದಾಗ ಮಾತ್ರ ಮಾದಕ ವಸ್ತುಗಳಂತಹ ಸಾಮಾಜಿಕ ಪಿಡುಗಿನಿಂದ ದೂರವಾಗಬಹುದು’ ಎಂದು ಹೇಳಿದರು.
ಗ್ರಾಮಾಂತರ ಉಪವಿಭಾಗದ ಡಿವೈಎಸ್‌ಪಿ ಎಂ.ಕೆ. ಗಂಗಲ್ ಅವರು ಮಹಿಳೆಯರ ಸಂರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಕುಲಸಚಿವ ಪ್ರೊ. ಪಿ. ಕಣ್ಣನ್, ಹಣಕಾಸು ಅಧಿಕಾರಿ ಜೆ.ಕೆ. ರಾಜು ಹಾಜರಿದ್ದರು. ವಿದ್ಯಾರ್ಥಿ ಕಲ್ಯಾಣ ಘಟಕ ನಿರ್ದೇಶಕ ಪ್ರೊ. ಕೆ.ವಿ. ರಂಗಪ್ಪ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.