ದಾವಣಗೆರೆ: ಜಿಲ್ಲೆಯಲ್ಲಿ ಆರು ಜವಳಿ ಉದ್ಯಮ ಘಟಕ ಸ್ಥಾಪನೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಕೈಮಗ್ಗ ಮತ್ತು ಜವಳಿ ಇಲಾಖೆಯ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಆರು ಜವಳಿ ಘಟಕಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಯಿತು.
ತಾಲ್ಲೂಕಿನ ಕರಿಲಕ್ಕೇನಹಳ್ಳಿಯಲ್ಲಿ ₹ 2.83 ಲಕ್ಷ ಯೋಜನಾ ವೆಚ್ಚದ ವಿದ್ಯುತ್ ಮಗ್ಗ, ಕರೂರು ಕೈಗಾರಿಕಾ ಪ್ರದೇಶದಲ್ಲಿ ₹ 2.5 ಲಕ್ಷ ಯೋಜನಾ ವೆಚ್ಚದ ರೆಡಿಮೇಡ್ ಗಾರ್ಮೆಂಟ್ಸ್, ಹರಿಹರ ತಾಲ್ಲೂಕಿನ ಹರ್ಲಾಪುರದಲ್ಲಿ ₹ 2.83 ಲಕ್ಷ ಯೋಜನಾ ವೆಚ್ಚದ ವಿದ್ಯುತ್ ಮಗ್ಗ, ಹರಿಹರ ತಾಲ್ಲೂಕು ಹನಗವಾಡಿಯಲ್ಲಿ ₹ 2.83 ಲಕ್ಷ ಯೋಜನಾ ವೆಚ್ಚದ ವಿದ್ಯುತ್ ಮಗ್ಗ, ಹರಿಹರ ತಾಲ್ಲೂಕು ಸಾರಥಿ-ಕುರುಬರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ₹ 2.48 ಲಕ್ಷ ಯೋಜನಾ ವೆಚ್ಚದ ವಿದ್ಯುತ್ ಮಗ್ಗ ಹಾಗೂ ದಾವಣಗೆರೆ ನಗರದ ನಿಟುವಳ್ಳಿಯಲ್ಲಿ ₹ 2 ಕೋಟಿ ಯೋಜನಾ ವೆಚ್ಚದ ರೆಡಿಮೇಡ್ ಗಾರ್ಮೆಂಟ್ಸ್ ಘಟಕಗಳಿಗೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ಲೋಕಿಕೆರೆ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ₹ 4.55 ಕೋಟಿ ಅಂದಾಜು ವೆಚ್ಚದ ಬಯೋ ಸ್ಟಿಮ್ಯುಲೆಂಟ್ಸ್ ಮೈಕ್ರೋ ನ್ಯೂಟ್ರಿಯನಟ್ಸ್ ಕಾರ್ಖಾನೆ ಆರಂಭಿಸಲು ಹೊಸ ಪ್ರಸ್ತಾವನೆ ಬಂದಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜ್, ಉದ್ಯಮಿಗಳಾದ
ಶ್ರೀನಿವಾಸ್, ಹನುಮಂತರಾವ್, ರೆಹಮಾನ್ ಮುಂತಾದವರು ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.