ADVERTISEMENT

ಉಗ್ರನಿಗೆ ಆಶ್ರಯ ನೀಡಿದವರ ಬಗ್ಗೆ ತನಿಖೆ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 18:29 IST
Last Updated 8 ಜೂನ್ 2022, 18:29 IST
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ   

ದಾವಣಗೆರೆ: ಜಮ್ಮು–ಕಾಶ್ಮೀರದ ಉಗ್ರನಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿದವರು ಯಾರು? ಯಾರ ಮನೆಯಲ್ಲಿದ್ದ? ಯಾರ ಬೆಂಬಲ ಇದರ ಹಿಂದೆ ಇದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ನಗರದಲ್ಲಿ ಸುದಿಗಾರರ ಜತೆಗೆ ಅವರು ಮಾತನಾಡಿ, ‘ದೇಶದ ಭದ್ರತೆಯ ದೃಷ್ಟಿಯಿಂದ ತನಿಖೆಯ ವಿವರ ನೀಡುವುದಿಲ್ಲ. ಕಾಶ್ಮೀರದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸ್‌ ಇಲಾಖೆ ಅವರ ಸಂಪರ್ಕದಲ್ಲಿದೆ. ಕೇಂದ್ರ ಸರ್ಕಾರಕ್ಕೆ ತನಿಖೆಯ ವರದಿ ನೀಡಲಾಗುತ್ತದೆ’ ಎಂದು ಹೇಳಿದರು.

‘ಮುತಾಲಿಕ್‌ ಮತ್ತು ಯಶಪಾಲ್‌ ಸುವರ್ಣ ಅವರಿಗೆ ಬಂದಿರುವ ತಲೆ ತೆಗೆಯುವ ಬೆದರಿಕೆ ಬಗ್ಗೆ ಮಾತನಾಡುವುದಿಲ್ಲ. ಪ್ರಚೋದನಕಾರಿಯಾಗಿ ಯಾರೂ ಮಾತನಾಡಬಾರದು’ ಎಂದರು.

ADVERTISEMENT

ದೇವಸ್ಥಾನ–ಮಸೀದಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಚರ್ಚೆ ಮಾಡಬಾರದು ಎಂದು ಹೇಳಲಾಗುವುದಿಲ್ಲ. ಅದೇನಾದರೂ ವಿವಾದವಾಗಿ ಬೀದಿಗೆ ಬಂದರೆ ಆಗ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ಯಾರೂ ಅನುಮತಿ ಪಡದಿಲ್ಲ. ಪ್ರತಿಭಟನಕಾರರು ಮನೆಗೆ ನುಗ್ಗಿ ನಿಕ್ಕರ್‌ ತಂದು ಹೊತ್ತಿಸಿದ್ದಾರೆ. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ನಾವೂ ಪ್ರತಿಭಟನೆ ಮಾಡಿದವರೇ. ಪ್ರತಿಭಟನೆಯ ಹೆಸರಲ್ಲಿ ಯಾರದೋ ಮನೆಗೆ ನುಗ್ಗುವುದು ಹೋರಾಟವಲ್ಲ. ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರು ವಿದ್ಯಾರ್ಥಿಗಳೂ ಅಲ್ಲ, ಆ ಊರಿನವರೂ ಅಲ್ಲ. ತಿಪಟೂರಿನವರು ಒಬ್ಬರನ್ನು ಬಿಟ್ಟರೆ ಉಳಿದವರು ರಾಜ್ಯದ ಬೇರೆ ಕಡೆಗಳಿಂದ ಬಂದವರು. ಅದರಲ್ಲಿ ದಾವಣಗೆರೆಯ ಮೂವರು ಸೇರಿದ್ದಾರೆ ಎಂದು ತಿಳಿಸಿದರು.

‘ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಯಾರನ್ನೂ ಬಿಡುವುದಿಲ್ಲ. ನಮ್ಮ ಇಲಾಖೆಯ ಡಿವೈಎಸ್‌ಪಿಯನ್ನೇ ಬಿಟ್ಟಿಲ್ಲ. ಈ ಬಗ್ಗೆ ಸಮಗ್ರ ತನಿಖೆ ಮಾಡುತ್ತೇವೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಲಂಗೋಟಿಯೂ ಉಳಿಯುವುದಿಲ್ಲ’
ಚಿತ್ರದುರ್ಗ:
ಇಡೀ ದೇಶದ ಜನರು ಕಾಂಗ್ರೆಸ್‌ ಚಡ್ಡಿ ಬಿಚ್ಚಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ ಲಂಗೋಟಿಯನ್ನು ಬಿಚ್ಚಿ ಮನೆಗೆ ಕಳುಹಿಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕುಟುಕಿದರು.

‘ಇಷ್ಟು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್‌ ಹೊಣೆಗಾರಿಕೆ ಮರೆತು ವರ್ತಿಸುತ್ತಿದೆ. ಸರ್ಕಾರವನ್ನು ಟೀಕಿಸಲು ಅವರಿಗೆ ಯಾವುದೇ ಅಸ್ತ್ರ ಸಿಗುತ್ತಿಲ್ಲ. ಹೀಗಾಗಿ ಆರ್‌ಎಸ್‌ಎಸ್‌ ಚಡ್ಡಿಯ ಬಗ್ಗೆ ಬೇಜವಾಬ್ದಾರಿಯಿಂದ ಟೀಕಿಸುತ್ತಿದ್ದಾರೆ. ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುವ ಶಕ್ತಿಯನ್ನು ಕಾಂಗ್ರೆಸ್‌ ಕಳೆದುಕೊಂಡಿದೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.