ADVERTISEMENT

ಸಾಸ್ವೆಹಳ್ಳಿ | ಮಳೆ: ಅಡಿಕೆ ಸಸಿ ಖರೀದಿ ಭರಾಟೆ...

ಗಿರೀಶ್‌ ಎಂ ನಾಡಿಗ್‌
Published 26 ಜುಲೈ 2024, 5:55 IST
Last Updated 26 ಜುಲೈ 2024, 5:55 IST
ಸಾಸ್ವೆಹಳ್ಳಿ ಗ್ರಾಮದ ಬಳಿ ಅಡಿಕೆ ಸಸಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಒಯ್ಯುತ್ತಿರುವುದು
ಸಾಸ್ವೆಹಳ್ಳಿ ಗ್ರಾಮದ ಬಳಿ ಅಡಿಕೆ ಸಸಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಒಯ್ಯುತ್ತಿರುವುದು   

ಸಾಸ್ವೆಹಳ್ಳಿ: ಹೋಬಳಿಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರಾಗಿ, ಮೆಕ್ಕೆಜೋಳ, ತೊಗರಿ ಬೆಳೆಗಳು ನಳನಳಿಸುತ್ತಿವೆ. ಈ ನಡುವೆಯೇ ಹೊಸದಾಗಿ ಅಡಿಕೆ, ತೆಂಗು, ಬಾಳೆ ತೋಟ ಮಾಡುವತ್ತ ರೈತರು ಚಿತ್ತ ಹರಿಸಿದ್ದು, ಸಸಿಗಳಿಗೆ ಬೇಡಿಕೆ ಹೆಚ್ಚಿದೆ. 

ರೈತರು ಹೊಸದಾಗಿ ತೋಟ ಮಾಡಲು ಉತ್ತಮ ಗುಣಮಟ್ಟದ ಅಡಿಕೆ ಸಸಿಗಳನ್ನು ಖರೀದಿಸಿ ಟ್ರ್ಯಾಕ್ಟರ್, ಲಾರಿ, ಬೈಕ್‌ಗಳಲ್ಲಿ ಒಯ್ಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

‘ಒಂದು, ಒಂದೂವರೆ , ಎರಡು, ಮೂರು ವರ್ಷದ ಗಿಡಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ₹ 20 ರಿಂದ ₹ 100ರ ವರೆಗೆ ಅಡಿಕೆ ಸಸಿಗಳು ಲಭ್ಯವಿವೆ. ನಮ್ಮ ಆರ್ಥಿಕ ಶಕ್ತಿಯ ಅನುಸಾರ ಅಗತ್ಯವಿರುವಷ್ಟು ಅಡಿಕೆ ಸಸಿಗಳನ್ನು ಒಯ್ಯುತ್ತೇವೆ’  ಎಂದು ರೈತ ಚಂದ್ರಪ್ಪ ಹೇಳಿದರು.

ADVERTISEMENT

‘ಬರಗಾಲ ಆವರಿಸಿದಾಗ ಅಡಿಕೆ ಬೆಳೆಗಾರರು ನೀರಿನ ಟ್ಯಾಂಕರ್, ಭದ್ರಾ ನಾಲೆ ಹಾಗೂ ತುಂಗಭದ್ರಾ ನದಿಯಿಂದ ನೀರು ಬಳಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಡಿಕೆ ತೋಟ ಉಳಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಅಡಿಕೆಗೆ ಇರುವ ಬೆಲೆಯೇ ಕಾರಣ. ಕೆಲಸ ಕಡಿಮೆ. ಉತ್ತಮ ಇಳುವರಿಯೂ ಬರುತ್ತದೆ. ಅದಕ್ಕೆ ಎಲ್ಲರೂ ಅದರತ್ತ ಚಿತ್ತ ಹರಿಸಿದ್ದಾರೆ. ಸದ್ಯ ಅಡಿಕೆ ಸಸಿಗಳಿಗೆ ಭಾರಿ ಬೇಡಿಕೆ ಇದೆ’ ಎನ್ನುತ್ತಾರೆ ಹಾಲೇಶ್‌.

‘ಪ್ರತಿ ವರ್ಷ ಅಡಿಕೆ ಬೆಳೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿವರ್ಷ 500ರಿಂದ 1000 ಎಕರೆ ಹೊಸ ಅಡಿಕೆ ತೋಟ ಆಗುತ್ತಿದೆ. ಮೂರು ನಾಲ್ಕು ವರ್ಷಗಳಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ಅಂತರ್ಜಲ ಖಾಲಿಯಾಗಿ ಹಲವು ತೋಟಗಳು ಬತ್ತಿವೆ. ಆದಾಗ್ಯೂ ಮೆಕ್ಕೆಜೋಳ, ಭತ್ತ, ಹತ್ತಿ ಬೆಳೆಗಳ ಜಾಗವನ್ನು ಈ ಭಾಗದಲ್ಲಿ ಅಡಿಕೆ ಆವರಿಸುತ್ತಿದೆ’ ಎಂದು ಕೃಷಿ ಅಧಿಕಾರಿ ಶಶಿಧರ್ ಮಾಹಿತಿ ನೀಡಿದರು.

ಈಗಾಗಲೇ ಇಳುವರಿ ಕುಸಿತ ದರ ಕುಸಿತ ಮಳೆಯ ಕೊರತೆ ರೋಗ ಬಾಧೆಯಂತಹ ಹಲವು ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಆದರೂ ಹೊಸದಾಗಿ ಅಡಿಕೆ ತೋಟ ಮಾಡುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ.

-ರಮೇಶ್, ರೈತ ಸಾಸ್ವೆಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.