ADVERTISEMENT

ಹೊನ್ನಾಳಿಯಲ್ಲಿ ಆರೋಪಿಗಳ ಬಂಧನ

ಎಲ್‍ಐಸಿ ಹೌಸಿಂಗ್ ಫೈನಾನ್ಸ್ ವ್ಯವಸ್ಥಾಪಕ ಅಪಹರಣ: ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 5:50 IST
Last Updated 1 ಜೂನ್ 2024, 5:50 IST
ಹಲ್ಲೆಗೊಳಗಾದ ಹರಿಹರದ ಎಲ್‍ಐಸಿ ಹೌಸಿಂಗ್ ಫೈನಾನ್ಸ್ ವ್ಯವಸ್ಥಾಪಕ ಶರಣ್
ಹಲ್ಲೆಗೊಳಗಾದ ಹರಿಹರದ ಎಲ್‍ಐಸಿ ಹೌಸಿಂಗ್ ಫೈನಾನ್ಸ್ ವ್ಯವಸ್ಥಾಪಕ ಶರಣ್    

ಹೊನ್ನಾಳಿ: ಗೃಹಸಾಲದ ಮಂಜೂರು ಮಾಡದ ಕಾರಣಕ್ಕೆ ಎಲ್‍ಐಸಿ ಹೌಸಿಂಗ್ ಫೈನಾನ್ಸ್‌ ವ್ಯವಸ್ಥಾಪಕರೊಬ್ಬರನ್ನು ಅಪಹರಿಸಿ ಕೊಲೆಗೆ ಯತ್ನಿಸಿದ ಆರೋ‍ಪದ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ದಾವಣಗೆರೆಯ ಎಲ್‍ಐಸಿ ಹೌಸಿಂಗ್ ಫೈನಾನ್ಸ್‌ ವ್ಯವಸ್ಥಾಪಕ ಹರಿಹರದ ಶರಣ್ ಹಲ್ಲೆಗೊಳಗಾದವರು. ಹಲ್ಲೆ  ಮಾಡಿದ ಆರೋಪದ ಮೇರೆಗೆ ಶಿಕಾರಿಪುರದ ನಾಗರಾಜ್, ನಾಸಿರ್ ಎಂಬುವರನ್ನು ಹೊನ್ನಾಳಿ ಸಿಪಿಐ ಮುದ್ದುರಾಜ್ ಮತ್ತು ತಂಡ ಬಂಧಿಸಿದೆ.

ಘಟನೆ ವಿವರ: ಶಿಕಾರಿಪುರದ ನಾಗರಾಜ್ ಮತ್ತು ನಾಸೀರ್ ಮತ್ತು ಇತರರು ಕುಂದಾಪುರದ ಶೆಟ್ಟಿ ಎಂಬುವವರ ಮೂಲಕ ನಕಲಿ ದಾಖಲೆ ಸೃಷ್ಟಿಸಿ ಹರಿಹರದಲ್ಲಿ ಯಾವುದೋ ಒಂದು ಮನೆ ತೋರಿಸಿ ಅದರ ಮೇಲೆ ₹ 49.60 ಸಾಲ ಪಡೆಯಲು  ತಯಾರಿ ನಡೆಸಿದ್ದರು. ಸಾಲವನ್ನು ಕೂಡಾ ಮಂಜೂರು ಮಾಡಲಾಗಿತ್ತು. ಆದರೆ ಸಾಲ ಪಡೆದ ಸಾಲಗಾರರು ಕೊಟ್ಟಿರುವ  ದಾಖಲೆ ನಕಲಿ ಎಂದು ತಿಳಿದು ಬಂದಿದ್ದರಿಂದ ವ್ಯವಸ್ಥಾಪಕ ಶರಣ್ ಅವರು ಮಂಜೂರಾಗಿದ್ದ ಚೆಕ್ ಅನ್ನು ಕೊಡಲಿಲ್ಲ.

ADVERTISEMENT

ಇದರಿಂದ ಕೋಪಗೊಂಡ ನಾಗರಾಜ್ ಮತ್ತು ನಾಸೀರ್ ಮತ್ತಿತರರು ಶುಕ್ರವಾರ ಸಂಜೆ ಕಚೇರಿಗೆ ಬಂದು ಶರಣ್‌ಗೆ ಏಕಾಏಕಿ ಮೂರು ಬಾರಿ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿ, ಅವರ ಕಣ್ಣಿಗೆ ಬಟ್ಟೆ ಕಟ್ಟಿ ಅಪಹರಿಸಿದರು ಎಂದು ಶರಣ್ ತಿಳಿಸಿದರು ಎಂದು ಪೊಲೀಸರು ಮಾಹಿತಿ ನೀಡಿದರು.

ಈ ಕುರಿತು ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣದ ಪ್ರಕರಣ ದೂರು ದಾಖಲಾದ ತಕ್ಷಣ ಕಂಟ್ರೋಲ್ ರೂಂನಿಂದ ಮಾಹಿತಿ ಪಡೆದ ಹೊನ್ನಾಳಿ ಪೊಲೀಸರು ಹೊನ್ನಾಳಿಯ ವಡ್ಡಿನಕೆರೆ ಹಳ್ಳದ ಬಳಿ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿ ಗಾಯಾಳು ಶರತ್ ಅವರನ್ನು ರಕ್ಷಿಸಿ ನಾಗರಾಜ್, ನಾಸಿರ್ ಅವರನ್ನು ಬಂದಿಸಿದ್ದಾರೆ. ಅವರ ಜೊತೆಗಿದ್ದ ವಿಶ್ವನಾಥ್ ಹಾಗೂ ಚಂದನ್ ಅವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಟಿಜೆ ನಗರದ ಪಿಎಸ್‍ಐ ಸುನಿಲ್ ಕುಮಾರ್ ಅವರು ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ 112 ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಲ್ಲೇಶಪ್ಪ, ಕುಮಾರನಾಯ್ಕ, ಬಸವರಾಜ್, ವೆಂಕಟೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.