ದಾವಣಗೆರೆ: ಕೊರೊನಾ ವಿರುದ್ಧದ ಹೋರಾಟದಲ್ಲಿ ಸಾವಿರ ಕೈಗಳು ಕೆಲಸ ಮಾಡುತ್ತಿವೆ. ಅದರಲ್ಲಿ ಪ್ರಮುಖವಾದ ಕೊಂಡಿ ಆಶಾ ಕಾರ್ಯಕರ್ತೆಯರು.
ನಗರ ಮತ್ತು ಗ್ರಾಮಾಂತರ ಎಂಬ ಎರಡು ವಿಭಾಗದಲ್ಲಿ ಜಿಲ್ಲೆಯಲ್ಲಿ ಸುಮಾರು 850 ಆಶಾ ಕಾರ್ಯಕರ್ತರು ಎಡೆಬಿಡದೆ ಕೆಲಸ ಮಾಡುತ್ತಿದ್ದಾರೆ. ಕೆಲವು ಹಳ್ಳಿಗಳಲ್ಲಿ ಒಬ್ಬೊಬ್ಬರೇ ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವು ಕಡೆ ಎರಡು ಮೂರು ಮಂದಿ ಒಟ್ಟು ಸೇರಿ ಹೋಗುತ್ತಿದ್ದಾರೆ. ಪೇಟೆಗಳಲ್ಲಿ ನಾಲ್ಕೈದು ಮಂದಿ ಗುಂಪಾಗಿ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಊರಿಗೆ ಯಾರೇ ಹೊಸಬರು ಬಂದರೂ ಅಲ್ಲಿಗೆ ಆಶಾ ಕಾರ್ಯಕರ್ತೆಯರು ಹೋಗುತ್ತಾರೆ. ಜ್ವರ, ಕೆಮ್ಮು, ಶೀತ, ಗಂಟಲು ನೋವು ಮುಂತಾದ ಕೊರೊನಾ ವೈರಸ್ ಸೋಂಕಿಗೆ ಸಂಬಂಧಿತ ಲಕ್ಷಣಗಳು ಇವೆಯೇ ಎಂದು ತಿಳಿದುಕೊಳ್ಳುತ್ತಾರೆ. ಇದ್ದರೆ ವೈದ್ಯರಿಗೆ ತಿಳಿಸುತ್ತಾರೆ. ಇಲ್ಲದೇ ಇದ್ದರೆ 14 ದಿನ ಕ್ವಾರಂಟೈನ್‌ನಲ್ಲಿ ಇರಿ ಎಂದು ಅವರಿಗೆ ಸೂಚಿಸುತ್ತಾರೆ. ಜತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ, ನಗರ ಸ್ಥಳೀಯಾಡಳಿತಗಳಿಗೆ ಅವರ ಬಗ್ಗೆ ಮಾಹಿತಿ ನೀಡುತ್ತಾರೆ.
ಬೆಂಗಳೂರು ಮತ್ತಿತರ ಕಡೆಗಳಲ್ಲಿ ಆಶಾ ಕಾರ್ಯಕರ್ತೆಯರ ಬಗ್ಗೆ ತಪ್ಪಾಗಿ ತಿಳಿದುಕೊಂಡು ಹಲ್ಲೆ ಮುಂತಾದ ಪ್ರಕರಣಗಳು ನಡೆದಿದ್ದವು. ಜಿಲ್ಲೆಯಲ್ಲಿ ಅಂಥ ಯಾವುದೇ ಕಹಿ ಘಟನೆಗಳಿಗೆ ಆಸ್ಪದ ಇಲ್ಲದಂತೆ ಕಾರ್ಯ ನಿರ್ವಹಿಸಿದ್ದಾರೆ.
‘ಸಮೀಕ್ಷೆ ತರಹ ಮನೆ ಮನೆಗಳಿಗೆ ಭೇಟಿ ನೀಡುತ್ತಿದ್ದೇವೆ. ವೈಯಕ್ತಿಕ ಸ್ಚಚ್ಛತೆ, ಆಗಾಗ ಕೈ ತೊಳೆಯುವುದು, ಮಾಸ್ಕ್ ಹಾಕಿಕೊಳ್ಳುವುದು, ಪ್ರತಿಯೊಬ್ಬರೂ ಅಂತರ ಕಾಯ್ದುಕೊಳ್ಳುವುದನ್ನು ಹೇಳಿಕೊಡುತ್ತೇವೆ. ಹೊರಗಿನಿಂದ ಬಂದರೆ ಅವರ ಹೆಸರು, ವಿಳಾಸ, ಫೋನ್ ನಂಬರ್ ಮುಂತಾದ ಮಾಹಿತಿ ಸಂಗ್ರಹಿಸುತ್ತೇವೆ’ ಎಂದು ತಮ್ಮ ಕೆಲಸದ ಬಗ್ಗೆ ಆವರಗೆರೆಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಸವಿತಾರಾಜು ‘ಪ್ರಜಾವಾಣಿ’ಗೆ ವಿವರ ನೀಡಿದರು.
‘ನಾವು ಐದು ಮಂದಿ ಒಟ್ಟಾಗಿ ಮನೆ ಮನೆಗಳಿಗೆ ಹೋಗುತ್ತಿದ್ದೇವೆ. ಜನರು ಕೂಡ ನಮ್ಮನ್ನು ಗೌರವದಿಂದ ಕಾಣುತ್ತಿದ್ದಾರೆ’ ಎನ್ನುತ್ತಾರೆ ಅವರು.
‘ಗೊಲ್ಲರಹಳ್ಳಿಯಲ್ಲಿ ನಾನು ಒಬ್ಬಳೇ ಮನೆ ಮನೆಗೆ ಹೋಗುತ್ತಿದ್ದೇನೆ. ಯಾವುದೇ ಸಮಸ್ಯೆ ಎದುರಾಗಿಲ್ಲ. ಗುಂಪುಗೂಡಬಾರದು ಎಂದು ಜನರಿಗೆ ತಿಳಿಸುತ್ತಿದ್ದೇನೆ. ಗುಂಪು ದೊಡ್ಡದಾಗಿದ್ದರೆ ಸಿಸ್ಟರ್ಸ್, ಬ್ರದರ್ಸ್, ಪೊಲೀಸರಿಗೆ ಮಾಹಿತಿ ನೀಡುತ್ತೇನೆ. ಅವರು ತಕ್ಷಣ ಬಂದು ಜಾಗೃತಿ ಮೂಡಿಸುತ್ತಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘದ ಸಂಚಾಲಕಿ ಮಂಜಮ್ಮ.
‘ಅಂಗನವಾಡಿ ಕಾರ್ಯಕರ್ತೆ ಮತ್ತು ನಾನು ಹೋಗುತ್ತಿದ್ದೇವೆ. ನಮ್ಮ ಮಾತು ಜನ ಕೇಳುತ್ತಾರೆ. ಕೇಳದೇ ಇದ್ದಾಗ ಪಂಚಾಯಿತಿ, ಪೊಲೀಸರಿಗೆ ಮಾಹಿತಿ ನೀಡುತ್ತೇವೆ’ ಎಂದು ಗುಡಾಳ್‌ನ ಆಶಾ ಕಾರ್ಯಕರ್ತೆ ಶೆರಿಫಾ.
‘ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಜನರ ಮಧ್ಯೆ ಕೊಂಡಿಯಾಗಿ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದಾಗಿ ಎಲ್ಲರೂ ಮನೆಯೊಳಗೆ ಇದ್ದರೆ ಇವರು ಮಾತ್ರ ಹೊರಗೆ ಬಂದು ಕೆಲಸ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಸೇವೆಯನ್ನು ಸರ್ಕಾರ ಮತ್ತು ಜನ ಮರೆಯುವಂತಿಲ್ಲ’ ಎಂಬುದು ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘದ (ಎಐಟಿಯುಸಿ) ಸಂಚಾಲಕ ಆವರಗೆರೆ ವಾಸು ಅವರ ಅಭಿಪ್ರಾಯ.
‘ಅಲ್ಲೇ ಪರೀಕ್ಷಿಸುವ ವ್ಯವಸ್ಥೆ ಇದ್ದರೆ ಒಳ್ಳೆಯದು’
‘ಎಲ್ಲ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿದೆ. ಜ್ವರ, ಶೀತ, ಕೆಮ್ಮು, ಗಂಟಲು ನೋವು ಇರುವವರು ಪತ್ತೆಯಾದರೆ ಅಲ್ಲೇ ಔಷಧ ನೀಡುವ ವ್ಯವಸ್ಥೆ ಮಾಡಿದ್ದರೆ ಒಳ್ಳೆಯದಿತ್ತು. ಪರ್ಸನಲ್ ಪ್ರೊಟೆಕ್ಷನ್ ಕಿಟ್ ನೀಡಿದ್ದರೆ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರದವರೇ ಔಷಧ ನೀಡಿ, ಗಂಭೀರ ಸಮಸ್ಯೆಯನ್ನಷ್ಟೇ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದರೆ ಸಮಸ್ಯೆಯ ತೀವ್ರತೆ ಕಡಿಮೆಯಾಗುತ್ತಿತ್ತು’ ಎಂಬುದು ಆಶಾ ಕಾರ್ಯಕರ್ತೆಯರ ಸಲಹೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.