ಜೀವವೈವಿಧ್ಯದಲ್ಲಿ ಕೀಟಗಳದ್ದೇ ಪಾರುಪತ್ಯ. ಸೂಕ್ಷ್ಮಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕಣ್ಣಿಗೆ ಕಾಣುವ ಕೀಟ ಪ್ರಪಂಚವೇ ದೊಡ್ಡದು. ಅದರಲ್ಲೂ ಪಾತರಗಿತ್ತಿಗಳು ಬಗೆಬಗೆಯವು. ತಮ್ಮ ಬಣ್ಣ, ಗಾತ್ರ, ಆಕಾರ, ಹಾರಾಟದಲ್ಲಿ ಹೆಚ್ಚಿನ ವೈವಿಧ್ಯ ಹೊಂದಿರುವ ಗುಂಪು. ಇಂತಹ ಚಿಟ್ಟೆಗಳ ಗುಂಪಿನ ವಿಶೇಷ ಸದಸ್ಯನೆಂದರೆ ಬಿದಿರು ಮರಕಂದು ಚಿಟ್ಟೆ (Bamboo treebrown). ಪ್ರಾಣಿಶಾಸ್ತ್ರೀಯವಾಗಿ ಲೆತೆ ಯೂರೋಪ (Lethe europa) ಎಂದು ನಾಮಾಂಕಿತ.
ಕುಚ್ಚು ಪಾದದ ಚಿಟ್ಟೆಗಳ ಕುಟುಂಬವಾದ ನಿಂಫಾಲಿಡೇ ಗುಂಪಿಗೆ ಇದು ಸೇರಿದೆ. ಗಂಡು ಚಿಟ್ಟೆಯ ಮೇಲ್ಭಾಗ ಕಡು ಕಂದು ಬಣ್ಣ. ಮುಂದಿನ ರೆಕ್ಕೆಗಳಲ್ಲಿ ಎರಡು ಪೇಲವ ಕಣ್ಣುಗಳಂತಹ ಚುಕ್ಕೆಗಳು ಮತ್ತು ಮೇಲಿನ ಎರಡು ಬಿಳಿಯ ಚುಕ್ಕೆಗಳು. ಒಂದು ಬಿಳಿಯ ಪಟ್ಟೆ ಕೆಳಭಾಗದಲ್ಲಿ ಕಾಣುವುದು. ಎರಡು ರೆಕ್ಕೆಗಳ ಅಂಚುಗಳಲ್ಲಿ ಪೇಲವ ಬಿಳಿ ಗೆರೆಗಳಿರುತ್ತವೆ. ರೆಕ್ಕೆಯ ಕೆಳಭಾಗವು ಕಪ್ಪು ಮಿಶ್ರಿತ ಕಂದು ಬಣ್ಣ. ಅದರಲ್ಲಿ ಕೆಳಗೆ ನೀಲಿ ಮಿಶ್ರಿತ ಬಿಳಿ ಬಣ್ಣದ ತೆಳುವಾದ ಅಡ್ಡಗೆರೆ. ಮುಂದಿನ ರೆಕ್ಕೆಯಲ್ಲಿ ಓರೆಯಾಗಿರುವ ಬಿಳಿ ಪಟ್ಟೆ. ಎರಡೂ ರೆಕ್ಕೆಗಳಲ್ಲಿ ನೇರಳೆ ಅಂಚಿರುವ ಬೆಳ್ಳಿ ಬಣ್ಣದ ಕಣ್ಣಿನಂತಹ ಗುರುತುಗಳು ಸರದಿಯಲ್ಲಿ ಕಾಣುವುದು. ರೆಕ್ಕೆ ಬಿಚ್ಚಿದಾಗ ಅಗಲ 65–75 ಮಿ.ಮೀ. ಹಿಂದಿನ ರೆಕ್ಕೆಗಳ ಅಂಚುಗಳು ಹಲ್ಲುಗಳಂತೆ ಅಲೆಅಲೆಯಾಗಿರುತ್ತವೆ.
ಹೆಣ್ಣು ಚಿಟ್ಟೆಯಲ್ಲಿ ಹಿಂದಿನ ರೆಕ್ಕೆಯ ಅಂಚಿನ ಒಳಭಾಗದಲ್ಲಿ ಕಪ್ಪು ಚುಕ್ಕೆಗಳಿರುತ್ತವೆ. ಮುಂದಿನ ರೆಕ್ಕೆಯ ತಳದ ಹೊರಭಾಗದಲ್ಲಿ ಓರೆಯಾಗಿರುವ ಬಿಳಿ ಪಟ್ಟೆ ಇರುತ್ತದೆ. ಮಚ್ಚೆಗಳು ಮತ್ತು ಕಣ್ಣುಗಳಂತಿರುವ ಚುಕ್ಕೆಗಳು ಗಂಡಿಗಿಂತ ದೊಡ್ಡವು.
ಸಾಮಾನ್ಯವಾಗಿ ಬಿದಿರು ಮೆಳೆಗಳಿರುವ ಕಾಡುಗಳಲ್ಲಿ ಕಂಡುಬರುವ ಅಪರೂಪದ ಚಿಟ್ಟೆ. ಕೊಳೆತ ಹಣ್ಣಗಳು, ಹಸುವಿನ ಸಗಣಿಗೆ ಆಕರ್ಷಿತವಾಗುತ್ತವೆ. ತೇವಾಂಶವಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಮಾತ್ರ ಕಾಣಸಿಗುತ್ತವೆ. ಕರ್ನಾಟಕದಲ್ಲಿ ಬೆಂಗಳೂರು, ದಕ್ಷಿಣ ಕನ್ನಡ ಮತ್ತು ತುಮಕೂರು ಜಿಲ್ಲೆಗಳಿಂದ ಮಾತ್ರ ಇವುಗಳ ಇರುವಿಕೆಯನ್ನು ಪತ್ತೆಹಚ್ಚಲಾಗಿದೆ.
ಬಟರ್‌ಫೈಲ್ಸ್ ಅಫ್ ಇಂಡಿಯಾ ನೀಡುವ ಮಾಹಿತಿ ಪ್ರಕಾರ ಕೇವಲ 38 ಬಾರಿ ವಯಸ್ಕ ಚಿಟ್ಟೆಯು ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ದಾಖಲಾಗಿದೆ. ಬೆಂಗಳೂರಿನಲ್ಲಿರುವ ರಾಷ್ಟೀಯ ಜೀವವಿಜ್ಞಾನ ಕೇಂದ್ರದ ತಂಡವು ಸಹ ಇಂತಹ ಅಪರೂಪದ ಚಿಟ್ಟೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ.
ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿ ಬಿದಿರು ಮರಗಳ ಹತ್ತಿರ ಈ ಅಪರೂಪದ ಚಿಟ್ಟೆ ಹಾರಾಡುತ್ತಿರುವಾಗ ಕಾಣಸಿಕ್ಕಿತು. ದಾವಣಗೆರೆಯ ಜೀವವೈವಿಧ್ಯದ ಪಟ್ಟಿಗೆ ಹೊಸ ಸದಸ್ಯ ಸೇರಿದಂತಾಯಿತು. ಬರಡು ಭೂಮಿಯಾಗಿದ್ದ ವಿಶ್ವವಿದ್ಯಾಲಯದ ಆವರಣ ಇಂದು ಸುಮಾರು ಏಳು ಸಾವಿರಕ್ಕೂ ಹೆಚ್ಚು ಮರಗಿಡಗಳಿಂದ ನಳನಳಿಸುತ್ತಿದೆ. ಹಲವಾರು ಪಕ್ಷಿ, ಕೀಟಗಳಿಗೆ ಆಶ್ರಯತಾಣವಾಗಿದ್ದು ಹಸಿರೇ ಉಸಿರು ಎಂಬ ಮಾತನ್ನು ರುಜುವಾತು ಪಡಿಸಿದೆ. ಈ ಚಿಟ್ಟೆಗಳು ಇಲ್ಲಿಯೇ ವಾಸವಿದ್ದಾವೆಯೇ, ಸಂತಾನಾಭಿವೃದ್ಧಿ ಮಾಡುತ್ತಿವೆಯೇ ಅಥವಾ ವಲಸೆ ಬಂದಿವೆಯೇ ಎಂಬುದಿನ್ನೂ ತಿಳಿಯಬೇಕಾಗಿದೆ. ಇಂತಹ ಅಪರೂಪದ ಚಿಟ್ಟೆಗಳನ್ನು ನೋಡುವ ಸೌಭಾಗ್ಯ ನಮ್ಮ ಮಕ್ಕಳದ್ದಾಗಲಿದೆ. ಪರಿಸರದ ಮಹತ್ವ ಮತ್ತು ಸಂರಕ್ಷಣೆಯ ಪಾಠವೂ ಸಿಗಲಿದೆ.
(ಲೇಖಕರು ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು.ಚಿತ್ರ ಲೇಖಕರದ್ದು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.