ADVERTISEMENT

ಬಾಳೆ, ವೀಳ್ಯದೆಲೆಯಿಂದ ಕೈತುಂಬಾ ಆದಾಯ

ಚನ್ನಗಿರಿ ತಾಲ್ಲೂಕಿನ ಮಲಹಾಳ್ ಗ್ರಾಮದ ರೈತ ಅನಿಲ್‌ಕುಮಾರ್‌ ಯಶಸ್ಸು

ಎಚ್.ವಿ.ನಟರಾಜ್
Published 20 ಏಪ್ರಿಲ್ 2022, 6:37 IST
Last Updated 20 ಏಪ್ರಿಲ್ 2022, 6:37 IST
ಚನ್ನಗಿರಿ ತಾಲ್ಲೂಕು ಮಲಹಾಳ್ ಗ್ರಾಮದ ಅಡಿಕೆ ತೋಟದಲ್ಲಿ ಪರ್ಯಾಯ ಬೆಳೆಯಾಗಿ ವೀಳ್ಯದೆಲೆ ಹಾಗೂ ಬಾಳೆ ಬೆಳೆಯನ್ನು ಹಾಕಿರುವುದು.
ಚನ್ನಗಿರಿ ತಾಲ್ಲೂಕು ಮಲಹಾಳ್ ಗ್ರಾಮದ ಅಡಿಕೆ ತೋಟದಲ್ಲಿ ಪರ್ಯಾಯ ಬೆಳೆಯಾಗಿ ವೀಳ್ಯದೆಲೆ ಹಾಗೂ ಬಾಳೆ ಬೆಳೆಯನ್ನು ಹಾಕಿರುವುದು.   

ಚನ್ನಗಿರಿ: ಕಾಲಕ್ಕೆ ತಕ್ಕಂತೆ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಮುಂದುವರಿಸಿದರೆ ಹೆಚ್ಚು ಆದಾಯ ಪಡೆದುಕೊಳ್ಳಬಹುದು ಎಂಬುದಕ್ಕೆ ತಾಲ್ಲೂಕಿನ ಮಲಹಾಳ್ ಗ್ರಾಮದ ಯುವ ರೈತ ಅನಿಲ್ ಕುಮಾರ್ ಸಾಕ್ಷಿಯಾಗಿದ್ದಾರೆ.

ಅನಿಲ್ ಕುಮಾರ್ 6 ಎಕರೆ ಅಡಿಕೆ ತೋಟ ಹೊಂದಿದ್ದಾರೆ. ಇದರ ನಡುವೆಯೇ ಪರ್ಯಾಯ ಬೆಳೆಯಾಗಿ ವೀಳ್ಯದೆಲೆ ಹಾಗೂ ಬಾಳೆ ಬೆಳೆಯನ್ನು ಬೆಳೆಯುತ್ತಿದ್ದಾರೆ. 500 ಅಡಿಕೆ ಮರಗಳಿಗೆ ವೀಳ್ಯದೆಲೆ ಬಳ್ಳಿಯನ್ನು ಹಬ್ಬಿಸಿದ್ದು, ಅಡಿಕೆ ಮರಗಳ ನಡುವೆ 500 ಬಾಳೆ ಬೆಳೆ ಹಾಕಿದ್ದಾರೆ. ಎಲ್ಲಾ ಖರ್ಚು ಕಳೆದು ₹ 15 ಲಕ್ಷ ಆದಾಯ ಪಡೆದುಕೊಳ್ಳುತ್ತಿದ್ದಾರೆ. ವೀಳ್ಯದೆಲೆ 500 ಬಳ್ಳಿಗಳಿಂದ ಪ್ರತಿ ವರ್ಷ ₹ 1 ಲಕ್ಷ ಹಾಗೂ 500 ಬಾಳೆ ಕಂದುಗಳಿಂದ ₹ 1.50 ಲಕ್ಷ ಸೇರಿ ಪರ್ಯಾಯ ಬೆಳೆಯಿಂದ ಒಟ್ಟು ₹2.50 ಲಕ್ಷ ಹೆಚ್ಚುವರಿ ಆದಾಯವನ್ನು ಗಳಿಸುತ್ತಿದ್ದಾರೆ.

‘ಅಡಿಕೆ ತೋಟವನ್ನು ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಡಿಕೆ ಗರಿ, ತೆಂಗಿನ ಗರಿ, ಅಡಿಕೆ ಹಾಳೆಗಳನ್ನು ತೆಗೆಯದೆ ಹಾಗೆಯೇ ಬಿಡುತ್ತೇವೆ. ಇದರಿಂದಾಗಿ ಗಿಡಗಳು ಸದಾ ತಂಪಾಗಿರುತ್ತವೆ. ಹಾಗೆಯೇ ಈ ಗರಿಗಳು ಒಣಗಿ ಗೊಬ್ಬರವಾಗುತ್ತವೆ.

ADVERTISEMENT

ಪ್ರತಿ ವರ್ಷ ಕೊಟ್ಟಿಗೆ ಹಾಗೂ ಕುರಿ ಗೊಬ್ಬರವನ್ನು ಮಾತ್ರ ಗಿಡಗಳ ಬುಡಗಳಿಗೆ ಹಾಕುತ್ತೇವೆ. ಮುಂದಿನ ದಿನಗಳಲ್ಲಿ ಅಡಿಕೆ ಮರಗಳಿಗೆ ಕಾಳು ಮೆಣಸು ಬಳ್ಳಿಗಳನ್ನು ಹಬ್ಬಿಸಲು ತೀರ್ಮಾನ ಮಾಡಿದ್ದೇವೆ. ನಮ್ಮಲ್ಲಿ ಈಗ ನೀರಿನ ಕೊರತೆ ಇಲ್ಲ. ಉಬ್ರಾಣಿ ಏತ ನೀರಾವರಿ ಯೋಜನೆಯಿಂದಾಗಿ ರೈತರ ಬದುಕು ಹಸನಾಗಿದೆ. 6 ಎಕರೆ ತೋಟದಲ್ಲಿ ಪ್ರತಿ ವರ್ಷ ₹ 18.50 ಲಕ್ಷ ಆದಾಯವನ್ನು ಪಡೆದುಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಪ್ರಗತಿಪರ ಯುವ ರೈತ ಅನಿಲ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.