ದಾವಣಗೆರೆ: ಕಡುವರ್ಣದ ಸಮವಸ್ತ್ರ ತೊಟ್ಟು ಶಿಸ್ತುಬದ್ಧವಾಗಿ ಹೆಜ್ಜೆಹಾಕುತ್ತ ಮೈದಾನಕ್ಕೆ ಬಂದ ಮಕ್ಕಳ ಕೈಯಲ್ಲಿದ್ದ ಉಪಕರಣಗಳಿಂದ ಸುಶ್ರಾವ್ಯ ಸಂಗೀತ ಹೊರಹೊಮ್ಮತೊಡಗಿತು. ಬದಲಾಗುತ್ತಿದ್ದ ರಾಗಗಳಿಗೆ ಪ್ರೇಕ್ಷಕರ ಮೈಮನಗಳು ಪುಳಕಗೊಳ್ಳುತ್ತಿದ್ದವು. ಸಮೂಹವಾದ್ಯಗಳಲ್ಲಿ ತೊರೆಯಾಗಿ ಶುರುವಾದ ದೇಶಭಕ್ತಿ ಗೀತೆಗಳ ಸಂಗೀತ ಹೊಳೆಯಾಗಿ ಹರಿಯಿತು.
ಇಂತಹದೊಂದು ಅಪರೂಪದ ಸಮೂಹ ವಾದ್ಯ ಸಂಗೀತಕ್ಕೆ ಸಾಕ್ಷಿಯಾಗಿದ್ದು ತೋಳಹುಣಸೆ ಗ್ರಾಮದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿ ಶಾಲೆ. ದಕ್ಷಿಣ ವಲಯ ಮಟ್ಟದ ಬಾಲಕ ಮತ್ತು ಬಾಲಕಿಯರ ಪೈಪ್ ಹಾಗೂ ಬ್ರಾಸ್ ಬ್ಯಾಂಡ್ ಸ್ಪರ್ಧೆ ಹೊಸ ಲೋಕವೊಂದನ್ನು ಸೃಷ್ಟಿಸಿತ್ತು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಛತೀಸಗಡ, ತೆಲಂಗಾಣ, ಪುದುಚೇರಿ ರಾಜ್ಯ ಹಾಗೂ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ 750ಕ್ಕೂ ಹೆಚ್ಚು ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆಗಳು ನಡೆದವು.
23 ತಂಡಗಳ ಪೈಕಿ 19 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ವಿಮಾನಯಾನದಲ್ಲಿ ಉಂಟಾದ ವ್ಯತ್ಯಯದ ಕಾರಣಕ್ಕೆ ನಾಲ್ಕು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಬಿಳಿ, ಕೆಂಪು, ನೀಲಿ ಸೇರಿ ಕಡುಕಪ್ಪು ಬಣ್ಣದ ಬ್ಯಾಂಡ್ ಸಮವಸ್ತ್ರದಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ವಾದ್ಯ ಸಂಗೀತ ಪ್ರದರ್ಶನಕ್ಕೆ ಸಜ್ಜಾಗಿದ್ದರು. ಪ್ರತಿ ತಂಡದಲ್ಲಿ 25ರಿಂದ 33 ಸದಸ್ಯರಿದ್ದರು. ತಂಡದ ಪ್ರದರ್ಶನಕ್ಕೆ 10ರಿಂದ 15 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು.
ರಾಷ್ಟ್ರಗೀತೆ ಹೊರತುಪಡಿಸಿ ಉಳಿದ ಎಲ್ಲ ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಲು ಅನುಮತಿಸಲಾಗಿತ್ತು. ‘ಸಾರೇ ಝಹಾಂಸೆ ಅಚ್ಛಾ..’, ‘ರಘುಪತಿ ರಾಘವ ರಾಜಾರಾಂ..’, ಸೇರಿ ಹತ್ತಾರು ಗೀತೆಗಳನ್ನು ವಾದ್ಯ ಸಂಗೀತದಲ್ಲಿ ನುಡಿಸಲಾಯಿತು. ಪ್ರತಿ ತಂಡದ ಪದರ್ಶನವನ್ನು ಕಂಡಾಗ ಮೈದಾನದಲ್ಲಿ ಚಪ್ಪಾಳೆಯ ಸುರಿಮಳೆ ಸುರಿಯುತ್ತಿತ್ತು.
ಬ್ಯಾಂಡ್ ಮೇಜರ್ ಕೋಲು ತಿರುಗಿಸುತ್ತ ಮೈದಾನಕ್ಕೆ ತಂಡವನ್ನು ಕರೆತರುತ್ತಿದ್ದರು. ಶಿಸ್ತುಬದ್ಧ ಹೆಜ್ಜೆಗಳನ್ನು ನೋಡುತ್ತಿದ್ದ ಪ್ರೇಕ್ಷಕರ ಕಣ್ಣುಗಳಲ್ಲಿ ಕುತೂಹಲ ಮೂಡುತ್ತಿತ್ತು. ತೀರ್ಪುಗಾರರು ತಂಡದ ಬಳಿಗೆ ತೆರಳಿ ವೀಕ್ಷಣೆ ಮಾಡುತ್ತಿದ್ದರು. ಧರಿಸಿದ ಸಮವಸ್ತ್ರ, ಸಂಗೀತ ಪರಿಕರಗಳನ್ನು ಗಮನಿಸಿ ಅಂಕಗಳನ್ನು ನೀಡುತ್ತಿದ್ದರು. ಬ್ಯಾಂಡ್ ಮೇಜರ್ ಪ್ರದರ್ಶನಕ್ಕೆ ಅನುಮತಿ ಪಡೆಯುತ್ತಿದ್ದಂತೆ ಕಾಲಾವಕಾಶ ಶುರುವಾಗುತ್ತಿತ್ತು.
ಬೇಸ್ ಡ್ರಮ್‌ನಿಂದ ಹೊರಡುತ್ತಿದ್ದ ಸದ್ದು ತಂಡಕ್ಕೆ ಆದೇಶ ನೀಡುತ್ತಿತ್ತು. ಒಂದೊಂದೊ ಹೊಡೆತದಲ್ಲಿ ಭಿನ್ನ ಸಂದೇಶ ರವಾನೆಯಾಗುತ್ತಿತ್ತು. ‘ಟ್ರಂಪ್‌ಸೆಟ್’ ನಾದ ಮೊಳಗುತ್ತಿದ್ದಂತೆ ‘ತೂಬಾ’ ಜೊತೆಯಾಗುತ್ತಿತ್ತು. ಸ್ಯಾಕ್ಸೋಫೋನ್, ಫ್ಲೂಟ್ ಹಾಗೂ ತಾಳಗಳಿಂದ ಸುಶ್ರಾವ್ಯ ಸಂಗೀತ ಹೊರಹೊಮ್ಮುತ್ತಿತ್ತು. ಒಂದೊಂದು ತಂಡ ಈ ಸಂಗೀತ ಪರಿಕರಗಳನ್ನು ಬಳಸುತ್ತಿದ್ದ ರೀತಿ ಭಿನ್ನವಾಗಿತ್ತು. ಕೇರಳ, ಛತ್ತೀಸಗಡದ ಬಾಲಕಿಯರ ಬ್ಯಾಂಡ್‌ಗಳಲ್ಲಿ ಹೆಚ್ಚು ಸಂಗೀತ ಪರಿಕರಗಳಿದ್ದವು.
ಸಂಗೀತ ನುಡಿಸುತ್ತ ನಿಧಾನ ನಡಿಗೆ, ವೇಗದ ನಡಿಗೆಯಲ್ಲಿ ಹೆಜ್ಜೆಹಾಕುತ್ತಿದ್ದಾಗ ಪ್ರೇಕ್ಷಕರು ರೋಮಾಂಚನಗೊಳ್ಳುತ್ತಿದ್ದರು. ಹಿಂದೆ–ಮುಂದೆ ಸಾಗುತ್ತ, ಅಕ್ಕ–ಪಕ್ಕದಲ್ಲಿ ಬದಲಾಗುತ್ತ ನಡೆದಾಡುತ್ತಿದ್ದ ರೀತಿ ಬೆರಗು ಮೂಡಿಸುತ್ತಿತ್ತು. ಬ್ಯಾಂಡ್ ಮೇಜರ್ ಸೂಚನೆ ಮೇರೆಗೆ ತಂಡದ ಲಯ, ಗಾಯನ ಬದಲಾಗುತ್ತಿದ್ದವು. ಮಾರ್ಚ್‌ಫಾಸ್ಟ್‌ನಲ್ಲಿ ಸೆಲ್ಯೂಟ್ ಮಾಡುತ್ತ ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು. ತೀರ್ಪುಗಾರರ ಒಪ್ಪಿಗೆ ಪಡೆದು ತಂಡವನ್ನು ವಿಸರ್ಜನೆ ಮಾಡಲಾಗುತ್ತಿತ್ತು. ಮೈದಾನದಿಂದ ತಂಡ ಹೊರನಡೆಯುವಾಗ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಡಿವೈಎಸ್‌ಪಿ ಪ್ರಕಾಶ್, ಮಾಜಿ ಯೋಧ ಸುರೇಂದ್ರ ಸಿಂಗ್, ಆರೋಗ್ಯಸ್ವಾಮಿ ತೀರ್ಪುಗಾರರಾಗಿರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.