ಬಸವಾಪಟ್ಟಣ: ಪ್ರತಿವರ್ಷ ಮಳೆಯ ಜೊತೆಗೇ ಅಡಿಕೆ ಕೊಯ್ಲು ಮತ್ತು ಸಂಸ್ಕರಣೆ ಆರಂಭವಾಗುವುದರಿಂದ ಬೇಯಿಸಿದ ಅಡಿಕೆ ಒಣಗಿಸಲು ಇಸ್ರೇಲ್ ತಂತ್ರಜ್ಞಾನದ ಪಾಲಿಹೌಸ್ ಬೆಳೆಗಾರರಿಗೆ ವರದಾನವಾಗಿದೆ.
ಮಳೆಗಾಲದಲ್ಲಿ ಬೇಯಿಸಿದ ಅಡಿಕೆ ಒಣಗಿಸಲು ರೈತರು ಪಡುವ ಕಷ್ಟ ಹೇಳತೀರದು. ತೇವಾಂಶದಿಂದ ಅಡಿಕೆ ರಾಶಿ ಫಂಗಸ್‌ಗೆ ತುತ್ತಾಗುತ್ತಿದ್ದು, ಗುಣಮಟ್ಟ ಕುಸಿತವಾಗುತ್ತಿದೆ. ಈ ಸಮಸ್ಯೆಯ ಪರಿಹಾರಕ್ಕೆ ಬೆಚ್ಚನೆಯ ಪಾಲಿಥೀನ್ ಹೊದಿಕೆಯ ಡೇರೆಗಳು ಹಳ್ಳಿಗಳಲ್ಲಿ ನಿರ್ಮಾಣವಾಗುತ್ತಿವೆ.
ಬಸವಾಪಟ್ಟಣ ಸಮೀಪದ ಕಣಿವೆಬಿಳಚಿಯ ಅಡಿಕೆ ಬೆಳೆಗಾರ ಎಸ್.ಅಣ್ಣೋಜಿರಾವ್ ಇಂತಹ ಪಾಲಿಹೌಸ್ ನಿರ್ಮಿಸಿದ್ದು, ಇದರಲ್ಲಿ ಬೇಯಿಸಿದ ಅಡಿಕೆ ಒಣಗಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.
‘ವರ್ಷದ ಹಿಂದೆ ನಮ್ಮ ಕಣದಲ್ಲಿ ಪಾಲಿಹೌಸ್ ನಿರ್ಮಿಸಿದ್ದು, ಇದರೊಳಗೆ ಮಳೆಯ ನೀರಾಗಲೀ, ಶೀತ ಗಾಳಿಯಾಗಲೀ ಪ್ರವೇಶಿಸುವುದಿಲ್ಲ. ಸದಾ ಕಾಲ ಬೆಚ್ಚಗಿರುತ್ತದೆ. ಸುಲಿದು, ಬೇಯಿಸಿದ ಅಡಿಕೆಯನ್ನು ಈ ಪಾಲಿಹೌಸ್‌ನಲ್ಲಿ ನೆಲದ ಮೇಲೆ ಹಾಸಿರುವ ಟಾರ್ಪಾಲಿನ್ ಅಥವಾ ರಾಸಾಯನಿಕ ಗೊಬ್ಬರದ ಪ್ಲಾಸ್ಟಿಕ್ ಚೀಲಗಳಿಂದ ತಯಾರಿಸಿದ ಹಾಸಿನ ಮೇಲೆ ವಾರ ಹರಡಿದರೆ ಬಿಸಿಲಿನಲ್ಲಿ ಒಣಗಿದ ಅಡಿಕೆಯಂತೆಯೇ ಚೆನ್ನಾಗಿ ಒಣಗುತ್ತದೆ. ಬಣ್ಣ ಕೂಡ ಬದಲಾಗದೇ ನೈಸರ್ಗಿಕವಾಗಿರುತ್ತದೆ. ಗುಣಮಟ್ಟವೂ ಉತ್ತಮವಾಗಿರುತ್ತದೆ’ ಎಂದು ಅಣ್ಣೋಜಿರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾನು ₹ 3.5 ಲಕ್ಷ ವೆಚ್ಚದಲ್ಲಿ 100 ಅಡಿ ಉದ್ದ 40 ಅಡಿ ಅಗಲ, 20 ಅಡಿ ಎತ್ತರದ ಪಾಲಿಹೌಸ್ ನಿರ್ಮಿಸಿದ್ದೇನೆ. ರೈತರು ತಮ್ಮ ಅಗತ್ಯಕ್ಕೆ ತಕ್ಕಂತೆ ಯಾವುದೇ ಅಳತೆಯಲ್ಲಿ ಪಾಲಿಹೌಸ್ ನಿರ್ಮಿಸಿಕೊಳ್ಳಬಹುದು. ಪಾಲಿ ಹೌಸ್ ನಿರ್ಮಿಸಿಕೊಳ್ಳಲು ಸರ್ಕಾರವು ರೈತರಿಗೆ ಶೇ. 60ರಷ್ಟು ಸಹಾಯಧನ ನೀಡುತ್ತದೆ. ಮಲೆನಾಡು ಭಾಗದ ಅಡಿಕೆ ಬೆಳೆಗಾರರನ್ನು ಸಂಪರ್ಕಿಸಿದಾಗ ಈ ಬಗ್ಗೆ ಮಾಹಿತಿ ದೊರೆಯಿತು. ಶಿವಮೊಗ್ಗದ ಸಂಸ್ಥೆಯೊಂದು ದಪ್ಪವಾದ ಪಾಲಿಥಿನ್ ಹಾಗೂ ಅಲ್ಯುಮಿನಿಯಮ್ ಕೊಳವೆಗಳನ್ನು ಬಳಸಿ ಬಹುಕಾಲ ಬಾಳಿಕೆ ಬರುವಂತೆ ಪಾಲಿಥಿನ್ ಹೌಸ್ ನಿರ್ಮಿಸಿಕೊಡುತ್ತಿದೆ. ನನ್ನನ್ನು ಸಂಪರ್ಕಿಸಿದ ಹಲವು ರೈತರಿಗೆ ಈ ಕುರಿತು ಮಾಹಿತಿ ನೀಡಿದ್ದೇನೆ’ ಎಂದರು.
ನಿರಂತರ ಮಳೆಯಿಂದ ಬೇಯಿಸಿದ ಅಡಿಕೆ ಫಂಗಸ್ ಹಿಡಿಯುವುದನ್ನು ತಡೆಗಟ್ಟಲು ಪಾಲಿಥಿನ್ ಹೌಸ್‌ಗಳನ್ನು ನಿರ್ಮಿಸಿಕೊಳ್ಳಬಹುದು. ಹೊಸ ಹೊಸ ತಂತ್ರಜ್ಞಾನಗಳ ಅಳವಡಿಕೆ ಕೃಷಿಗೆ ಅಗತ್ಯವಾಗಿದ್ದು, ರೈತರು ಈ ಬಗ್ಗೆ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಸಂಪರ್ಕಿಸಿ ಮಾಹಿತಿ ಪಡೆಯಬೇಕು’ ಎಂದು ಕೃಷಿ ಇಲಾಖೆಯ ಅಧಿಕಾರಿ ಎನ್.ಲತಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.