ಬಸವಾಪಟ್ಟಣ: ಭಾರಿ ಬಿಸಿಲಿನ ಕಾರಣ ಟೊಮೆಟೊ ಬೆಳೆ ಸಂಪೂರ್ಣ ಒಣಗುತ್ತಿದ್ದು, ಉತ್ಪಾದನೆ ಕೊರತೆಯಿಂದಾಗಿ ಬೆಲೆಯಲ್ಲಿ ಹೆಚ್ಚಳವಾಗಿದೆ.
ಬಸವಾಪಟ್ಟಣ ಸೇರಿ ವಿವಿಧೆಡೆ ಹಲವು ರೈತರು ಟೊಮೆಟೊ ಸಸಿಗಳನ್ನು ನಾಟಿ ಮಾಡಿದ್ದರು. ಆದರೆ, ಈ ವರ್ಷ ಮಳೆಯ ಕೊರತೆ, ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದಿಂದ ಅಂತರ್ಜಲ ತುಂಬಾ ಆಳಕ್ಕಿಳಿದ ಪರಿಣಾಮ ನೀರಿನ ಕೊರತೆಯಿಂದ ಟೊಮೆಟೊ ಬೆಳೆಗಳು ಒಣಗುತ್ತಿವೆ ಎಂದು ಕೃಷಿ ಅಧಿಕಾರಿ ಎನ್.ಲತಾ ತಿಳಿಸಿದರು.
ದೂರದ ನರ್ಸರಿಗಳಿಂದ ಟೊಮೆಟೊ ಸಸಿಗಳನ್ನು ಖರೀದಿಸಿ ತಂದು ನಾಟಿ ಮಾಡಿದ್ದೆವು. ನೀರಿನ ಕೊರತೆಯಿಂದ ಗಿಡಗಳು ಸಮೃದ್ಧವಾಗಿ ಬೆಳೆಯದೇ ಹೂ ಮತ್ತು ಕಾಯಿಗಳು ನಿರೀಕ್ಷೆಯಂತೆ ಮೂಡಿ ಬರಲಿಲ್ಲ. ಗಿಡಗಳಲ್ಲಿ ಕಂಡು ಬಂದ ಬೆರೆಳೆಣಿಕೆಯ ಕಾಯಿಗಳ ಗಾತ್ರ ತುಂಬಾ ಸಣ್ಣದಾಗಿದ್ದು, ಇಳುವರಿ ಕಡಿಮೆಯಾಗಿದೆ ಎಂದು ಟೊಮೆಟೊ ಬೆಳೆಗಾರ ಹಾಲಾನಾಯ್ಕ ಬೇಸರ ವ್ಯಕ್ತಪಡಿಸಿದರು.
ಟೊಮೆಟೊ ಸಾಮಾನ್ಯವಾಗಿ ಎಕರೆಗೆ 12ರಿಂದ 15 ಟನ್ ಇಳುವರಿ ಬರುತ್ತದೆ. ಸಮೃದ್ಧ ಬೆಳೆಯಾದರೆ 20ರಿಂದ 30 ಟನ್ ವರೆಗೂ ಇಳುವರಿ ಬರುತ್ತದೆ. ಬಿಸಿಲಿನ ಕಾರಣ ಇಳುವರಿ ಕಡಿಮೆಯಾಗಿದ್ದು, 8ರಿಂದ 10 ಟನ್ ಬಂದರೆ ಹೆಚ್ಚು. ಒಂದು ಎಕರೆ ಟೊಮೆಟೊ ಬೆಳೆಯಲು ₹ 70,000ದಿಂದ ₹ 80,000ದವರೆಗೂ ಖರ್ಚಾಗುತ್ತದೆ. ಆದರೆ, ಈ ವರ್ಷದ ಮಹಾ ಬೇಸಿಗೆಯಲ್ಲಿ ಇಳುವರಿ ಸಂಪೂರ್ಣ ಕಡಿಮೆಯಾಗಿ ನಷ್ಟ ಅನುಭವಿಸುವಂತಾಗಿದೆ ಎಂದು ರೈತ ಜಫ್ರುಲ್ಲಾ ತಿಳಿಸಿದರು.
ತಿಂಗಳ ಹಿಂದೆ ಟೊಮೆಟೊ ಬೆಲೆ ಕೆ.ಜಿ.ಗೆ ₹ 10 ಇತ್ತು. ಈಗ ₹ 30ಕ್ಕೆ ಏರಿದೆ. ಕಳೆದ ವರ್ಷ ಹೀಗೆ ಏರುತ್ತಾ ₹ 160 ತಲುಪಿತ್ತು. ಈಗ 25 ಕೆ.ಜಿ. ತೂಗುವ ಒಂದು ಕ್ರೇಟ್ ಟೊಮೆಟೊ ಬೆಲೆ ₹ 500ರಿಂದ ₹ 550 ಇದ್ದು, ಬಿಸಿಲಿನ ಪರಿಣಾಮವಾಗಿ ದರ ಇನ್ನೂ ಹೆಚ್ಚಾಗಲಿದೆ ಎಂದು ತರಕಾರಿ ವ್ಯಾಪಾರಿ ಮೊಹಮ್ಮದ್ ಸಖಲೀನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.