ಬಸವಾಪಟ್ಟಣ: ಇಡೀ ವರ್ಷ ಬೆಳೆಯುವ ಮತ್ತು ನಿರಂತರವಾಗಿ ಬೇಡಿಕೆ ಇರುವ ತರಕಾರಿ ಬದನೆಯನ್ನು ಅಡಿಕೆ ಗಿಡಗಳಲ್ಲಿ ಅಂತರ ಬೆಳೆಯಾಗಿ ಬೆಳೆಯುತ್ತಿರುವ ಇಲ್ಲಿನ ರೈತ ಬಿ.ಎಚ್.ರಮೇಶ್ ಸಾಕಷ್ಟು ಲಾಭ ಗಳಿಸುತ್ತಿದ್ದಾರೆ.
ಸಮೀಪದ ಮಾಯಕೊಂಡ ನರ್ಸರಿಯಿಂದ ಒಂದೂವರೆ ತಿಂಗಳ ಅವಧಿಯ ರಾಂಪುರ ತಳಿಯ ಬದನೆ ಸಸಿಗಳನ್ನು 60 ಪೈಸೆಗೆ ಒಂದರಂತೆ ಖರೀದಿಸಿ ತೋಟದ ಅಡಿಕೆ ಗಿಡಗಳ ಮಧ್ಯದಲ್ಲಿ ನಾಟಿ ಮಾಡಿದ್ದರು. ಗಿಡದಿಂದ ಗಿಡಕ್ಕೆ ಮೂರು ಅಡಿ ಮತ್ತು ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರದಲ್ಲಿ 1,200 ಸಸಿಗಳನ್ನು ನಾಟಿ ಮಾಡಿದ್ದರು. ಗಿಡಗಳ ಕೊಯ್ತು ಶುರುವಾಗಿದ್ದು, ಅವರು ಸ್ಥಳೀಯವಾಗಿಯೇ ಮಾರುಕಟ್ಟೆ ಕಂಡುಕೊಂಡಿದ್ದಾರೆ.
‘ವಾರಕ್ಕೆ ಒಮ್ಮೆ ಬದನೆ ಕಾಯಿಗಳನ್ನು ಕೊಯ್ಲು ಮಾಡುತ್ತಿದ್ದು, 20 ಕೆ.ಜಿ. ತೂಗುವ 40 ಕ್ರೇಟ್ ಬದನೆ ದೊರೆಯುತ್ತಿದೆ. ಒಂದು ಕ್ರೇಟ್ ಬದನೆಗೆ ₹250 ರಿಂದ ₹300 ವರೆಗೆ ಬೆಲೆ ಇದೆ. ಬೇಡಿಕೆ ಹೆಚ್ಚಾದಲ್ಲಿ ಬೆಲೆಯೂ ಹೆಚ್ಚಾಗುತ್ತದೆ’ ಎಂದು ರಮೇಶ್ ಹೇಳಿದ್ದಾರೆ.
‘ಈ ಭಾಗದ ಖುಷ್ಕಿ ಭೂಮಿಯಲ್ಲಿ ಬೆಳೆಯುವ ಬದನೆ ರುಚಿ ಮತ್ತು ಗಾತ್ರದಲ್ಲಿ ಉತ್ತಮವಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಬಸವಾಪಟ್ಟಣದಲ್ಲಿ ಐದರಿಂದ ಆರು ತರಕಾರಿ ಅಂಗಡಿಗಳಿದ್ದು, ದಿನನಿತ್ಯದ ತರಕಾರಿಗಳಿಗಾಗಿ ನಾವು ಸ್ಥಳೀಯ ರೈತರನ್ನು ಅವಲಂಬಿಸಿದ್ದೇವೆ. ಇಲ್ಲಿನ ರೈತರು ಎರಡು ದಿನಕ್ಕೊಮ್ಮೆ ತಾಜಾ ಬದನೆ ಪೂರೈಸುತ್ತಾರೆ’ ಎನ್ನುತ್ತಾರೆ ಇಲ್ಲಿನ ತರಕಾರಿ ವ್ಯಾಪಾರಿಗಳಾದ ಮಹಮದ್ ಶೌಕತ್, ಅಮ್‌ಜದ್, ಸಖಲೀನ್.
ಸ್ಥಳೀಯ ವ್ಯಾಪಾರಿಗಳಿಗೆ ನಾನು ಮಾರಾಟ ಮಾಡುತ್ತಿದ್ದೇನೆ. ಬದನೆ ಒಂದು ಉತ್ತಮ ತರಕಾರಿಯಾಗಿದ್ದು ಪ್ರತಿನಿತ್ಯದ ಅಡುಗೆಗೆ ಬಳಕೆಯಾಗುವುದರಿಂದ ನಿರಂತರ ಬೇಡಿಕೆ ಇದೆ. ರೈತರು ಅಂತರ ಬೆಳೆಯಾಗಿ ಬೆಳೆದು ಲಾಭಗಳಿಸಬಹುದು’
–ರಮೇಶ್, ರೈತ
ಪೋಷಣೆ ವಿಧಾನ:
ನಾಟಿ ಮಾಡುವ ಮೊದಲು ಸಸಿ ನೆಡುವ ಗುಣಿಗೆ ಕೊಟ್ಟಿಗೆ ಗೊಬ್ಬರ ಮತ್ತು ಕುರಿ ಗೊಬ್ಬರವನ್ನು ಹಾಕಬೇಕು.ಗಿಡಗಳು ಬೆಳೆಯಲಾರಂಭಿಸಿದಾಗ ಡಿ.ಎ.ಪಿ. ರಾಸಾಯನಿಕ ಗೊಬ್ಬರವನ್ನು ನೀಡಬೇಕು. ಬದನೆ ಬೆಳೆಗೆ ವಾರಕ್ಕೊಮ್ಮೆ ನೀರು ಸರಬರಾಜು ಸಾಕು. ಈ ಬೆಳೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲ. ಅದಕ್ಕಾಗಿ ಡ್ರಿಪ್ ಮೂಲಕ ನೀರು ಹಾಯಿಸಿದರೆ ಉತ್ತಮ. 40 ದಿನಗಳ ನಂತರ ಗಿಡಗಳಲ್ಲಿ ಹೂಬಿಡಲು ಆರಂಭಿಸುತ್ತವೆ. ಮೂರು ತಿಂಗಳ ನಂತರ ಕಾಯಿ ಬಿಡಲು ಆರಂಭವಾಗಿ ಒಂದು ವರ್ಷದವರೆಗೆ ಫಸಲನ್ನು ಪಡೆಯಬಹುದು.
ಕೀಟಬಾಧೆ ತಡೆಗೆ ಸರಳ ಉಪಾಯ
ಬದನೆಗೆ ಕಾಂಡ ಕೊರಕ ಮತ್ತು ಕಾಯಿಕೊರಕ ಹುಳುಗಳ ಬಾಧೆ ಇರುತ್ತದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕೃಷಿ ತಜ್ಞರ ಸಲಹೆಯ ಮೇರೆಗೆ ಕೀಟನಾಶಕಗಳನ್ನು ಸಿಂಪರಣೆ ಮಾಡಬೇಕು. ‘ನಾನು ಕೊರೊಜಿನ್ ಕೀಟನಾಶಕ ಬಳಸಿದ್ದೇನೆ. ಕೀಟಗಳ ದಾಳಿಯನ್ನು ತಡೆಯಲು ಸುತ್ತಲೂ ಚೆಂಡು ಹೂಗಳನ್ನು ಬೆಳೆದರೆ ಕೀಟಗಳು ಅತ್ತ ಕಡೆ ಆಕರ್ಷಿತವಾಗಿ ಬದನೆಗೆ ಕೀಟ ಬಾಧೆ ಅಷ್ಟಾಗಿ ತಟ್ಟುವುದಿಲ್ಲ. ನಾನು ಬದನೆ ಗಿಡಗಳ ಸಮೀಪದಲ್ಲಿಯೇ ಗುಲಾಬಿ ಗಿಡಗಳನ್ನು ಬೆಳೆಸಿರುವುದರಿಂದ ಕೀಟ ಬಾಧೆ ಹೆಚ್ಚಾಗಿಲ್ಲ’ ಎಂದು ರಮೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.