ADVERTISEMENT

ಭತ್ತ: ಬಿರು ಬಿಸಿಲಿನಿಂದ ಇಳುವರಿ ಕುಸಿತ

ಭರದಿಂದ ಸಾಗಿದ ಬೇಸಿಗೆ ಭತ್ತದ ಕೊಯ್ಲು; ದರವೂ ಕಡಿಮೆ

​ಪ್ರಜಾವಾಣಿ ವಾರ್ತೆ
Published 18 ಮೇ 2024, 13:14 IST
Last Updated 18 ಮೇ 2024, 13:14 IST
ಬಸವಾಪಟ್ಟಣ ಹೋಬಳಿಯ ಸೂಳೆಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನಡೆಯುತ್ತಿರುವ ಭತ್ತದ ಕೊಯ್ಲು
ಬಸವಾಪಟ್ಟಣ ಹೋಬಳಿಯ ಸೂಳೆಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನಡೆಯುತ್ತಿರುವ ಭತ್ತದ ಕೊಯ್ಲು   

ಬಸವಾಪಟ್ಟಣ: ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ಸುಮಾರು 300 ಹೆಕ್ಟೇರ್‌ ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಭತ್ತದ ಕೊಯ್ಲು ಆರಂಭವಾಗಿದೆ. ಆದರೆ ಈ ಬಾರಿಯ ಬಿರುಬಿಸಿಲಿನಿಂದ ಇಳುವರಿ ಕಡಿಮೆಯಾಗಿದೆ ಎಂದು ರೈತರು ತಿಳಿಸಿದ್ದಾರೆ.

‘ಸಾಮಾನ್ಯವಾಗಿ ಬೇಸಿಗೆ ಹಂಗಾಮಿನ ಬೆಳೆಗೆ ರೋಗ ಮತ್ತು ಕೀಟಗಳ ಬಾಧೆ ಕಡಿಮೆ. ಎಕರೆಗೆ 30 ರಿಂದ 35 ಕ್ವಿಂಟಲ್‌ ಇಳುವರಿ ಬರುತ್ತಿತ್ತು. ಈ ವರ್ಷವೂ ಉತ್ತಮವಾದ ಇಳುವರಿ ನಿರೀಕ್ಷಿಸಿದ್ದೆವು. ಆದರೆ ಬಿಸಿಲಿನ ತೀವ್ರತೆಯಿಂದ ಈವರ್ಷದ ಬೇಸಿಗೆ ಹಂಗಾಮಿನಲ್ಲಿ ನಾವು ನಾಟಿ ಮಾಡಿದ ಆರ್‌.ಎನ್‌.ಆರ್‌ ತಳಿಯ ಭತ್ತ ಎಕೆರೆಗೆ 25 ರಿಂದ 26 ಕ್ವಿಂಟಲ್‌ ಇಳುವರಿ ಬಂದಿದೆ’ ಎಂದು ಚಿರಡೋಣಿಯ ರೈತ ಸಿ.ಎಂ.ರುದ್ರಯ್ಯ ಹೇಳಿದರು.

‘ಕಳೆದ ಮಳೆಗಾಲದಲ್ಲಿ ಉತ್ತಮ ಇಳುವರಿ ಬಂದಿತ್ತು. ದರವೂ ಕ್ವಿಂಟಲ್‌ಗೆ ₹3,000ವರೆಗೆ ಏರಿಕೆಯಾಗಿತ್ತು. ಆದರೆ ಬೇಸಿಗೆ ಬೆಳೆಯಲ್ಲಿ ಬೆಳೆದ ಭತ್ತಕ್ಕೆ ಕ್ವಿಂಟಲ್‌ಗೆ ₹2,500 ರಿಂದ ₹2,700 ದರ ಸಿಗುತ್ತಿದೆ. ಇತರ ಕಡೆಗಳಿಂದ ಭತ್ತದ ಆವಕ ಹೆಚ್ಚಿರುವುದರಿಂದ ವ್ಯಾಪಾರಿಗಳೂ ಸಹ ಹೆಚ್ಚಿನ ದರ ನೀಡಿ ಕೊಳ್ಳಲು ಮುಂದೆ ಬರುತ್ತಿಲ್ಲ. ಇದರಿಂದ ರೈತರಿಗೆ ಸಹಜವಾಗಿ ನಷ್ಟವುಂಟಾಗಿದೆ’ ಎಂದು ರೈತ ನಾಗೇಶ್ವರ ರಾವ್‌ ಹೇಳಿದರು.

ADVERTISEMENT
ಬಸವಾಪಟ್ಟಣ ಹೋಬಳಿಯ ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಒಕ್ಕಲಿನಲ್ಲಿ ನಿರತರಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.