ADVERTISEMENT

ದಾವಣಗೆರೆ: ಆಶ್ರಯ ಮನೆಗೆ ‘ಇ–ಸ್ವತ್ತು’ ತೊಡಕು

3 ವರ್ಷಗಳ ಬಳಿಕ ಮಂಜೂರಾದ ಮನೆ, ಸಂಕಷ್ಟಕ್ಕೆ ಸಿಲುಕಿದ ಗ್ರಾಮೀಣ ಫಲಾನುಭವಿಗಳು

ಜಿ.ಬಿ.ನಾಗರಾಜ್
Published 10 ನವೆಂಬರ್ 2024, 0:10 IST
Last Updated 10 ನವೆಂಬರ್ 2024, 0:10 IST
   

ದಾವಣಗೆರೆ: ವಸತಿ ಯೋಜನೆಗಳಿಗೆ ‘ಇ–ಸ್ವತ್ತು’ ಹಾಜರುಪಡಿಸಲಾಗದೇ ಮಂಜೂರಾದ ಮನೆಗಳನ್ನು ನಿರ್ಮಿಸಿಕೊಳ್ಳಲು ಗ್ರಾಮೀಣ ಪ್ರದೇಶದ ಫಲಾನುಭವಿಗಳು ಪರದಾಡುತ್ತಿದ್ದಾರೆ. ರಾಜೀವಗಾಂಧಿ ವಸತಿ ನಿಗಮದ ನಿಯಮಗಳಿಗೆ ಅನುಗುಣವಾದ ಭೂದಾಖಲೆ ಒದಗಿಸಲು ಸಾಧ್ಯವಾಗದೇ ಅಸಹಾಯಕತೆಯಲ್ಲಿದ್ದಾರೆ.

ಬಡವರಿಗೆ ಸೂರು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬಸವ ವಸತಿ ಯೋಜನೆ, ಅಂಬೇಡ್ಕರ್‌ ವಸತಿ ಯೋಜನೆ ರೂಪಿಸಿದೆ. ಮೂರು ವರ್ಷಗಳ ಬಳಿಕ ಮನೆಗಳಿಗೆ ಮಂಜೂರಾತಿ ದೊರಕಿದೆ. ವಸತಿ ಸೌಲಭ್ಯ ಪಡೆಯಲು ಬಹುದಿನಗಳಿಂದ ಕಾಯುತ್ತಿದ್ದ ರಾಜ್ಯದ ಜನರಿಗೆ ‘ಇ–ಸ್ವತ್ತು’ ನಿರಾಸೆಯುಂಟು ಮಾಡಿದೆ.

ಗ್ರಾಮ ಠಾಣಾ ವ್ಯಾಪ್ತಿಯ ಕ್ರಮಬದ್ಧ ಆಸ್ತಿಗಳಿಗೆ ಗ್ರಾಮ ಪಂಚಾಯಿತಿ ‘ಇ–ಸ್ವತ್ತು’ ನೀಡುತ್ತದೆ. ನಮೂನೆ– 9, ನಮೂನೆ– 11 ‘ಎ’ ಹಾಗೂ 11 ‘ಬಿ’ (ಕ್ರಮಬದ್ಧವಲ್ಲದ ಆಸ್ತಿ) ಖಾತೆಗಳನ್ನು ‘ದಿಶಾಂಕ್‌’ ಆ್ಯಪ್‌ ಮೂಲಕ ಸೃಜಿಸುವ ಅಧಿಕಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಇದೆ. ಆಸ್ತಿ ದಾಖಲೆಗಳಲ್ಲಿನ ಗೊಂದಲದಿಂದ ಗ್ರಾಮೀಣ ಪ್ರದೇಶದಲ್ಲಿ ಇ–ಸ್ವತ್ತು ಪಡೆಯುವುದು ಸುಲಭವಲ್ಲ ಎಂಬಂತಾಗಿದೆ.

ADVERTISEMENT

ಫಲಾನುಭವಿಯ ಕುಟುಂಬದ ಸದಸ್ಯರ ಹೆಸರಿನಲ್ಲಿ ನಿವೇಶನ ಇದ್ದರೆ ವಸತಿ ನಿರ್ಮಾಣಕ್ಕೆ ಈ ಹಿಂದೆ ಅನುಮೋದನೆ ಸಿಗುತ್ತಿತ್ತು. ಮನೆ ನಿರ್ಮಾಣವಾದ ಬಳಿಕ ಮಾಲೀಕತ್ವದ ವಿಚಾರವಾಗಿ ವ್ಯಾಜ್ಯಗಳು ಶುರುವಾಗುತ್ತಿದ್ದವು. ಹೀಗಾಗಿ, ಫಲಾನುಭವಿ ಅಥವಾ ಅವರ ಪತಿ–ಪತ್ನಿ ಹೆಸರಿಗೆ ‘ಇ–ಸ್ವತ್ತು’ ಇದ್ದರೆ ಮಾತ್ರ ಮಂಜೂರಾತಿ ಆದೇಶ ನೀಡಲಾಗುತ್ತಿದೆ. ಭೂ ಪರಿವರ್ತನೆ, ಪಾಲು ವಿಭಾಗ, ಪೌತಿ ಖಾತೆಯ ತೊಡಕಿನಿಂದಾಗಿ ಇಂತಹ ಭೂಮಿಗೆ ಇ–ಸ್ವತ್ತು ಸೃಜಿಸಲು ಸಾಧ್ಯವಾಗುತ್ತಿಲ್ಲ.

ವಸತಿ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ ಬಹುತೇಕರು ಗ್ರಾಮ ಠಾಣಾ ವ್ಯಾಪ್ತಿಯ ಹೊರಗಿದ್ದಾರೆ. ಭೂಪರಿವರ್ತನೆ ಮಾಡದೇ ನಿರ್ಮಾಣಗೊಂಡ ಬಡಾವಣೆಯಲ್ಲಿ ನಿವೇಶನ ಹೊಂದಿದ್ದಾರೆ. ಭೂದಾಖಲೆಯ ಸಮಸ್ಯೆಯಿಂದ ಫಲಾನುಭವಿಯ ಹೆಸರಿನಲ್ಲಿನ ‘ಇ–ಸ್ವತ್ತು’ ಪಡೆಯಲು ಆಗುತ್ತಿಲ್ಲ. ಕಂದಾಯ ಮತ್ತು ಭೂದಾಖಲೆ ಇಲಾಖೆ ಇಂತಹ ಆಸ್ತಿಗಳ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುತ್ತಿಲ್ಲ. ಇದರಿಂದ ‘ಇ–ಸ್ವತ್ತು’ ವಿತರಣೆಯಲ್ಲಿ ತೊಂದರೆ ಉಂಟಾಗಿದೆ ಎಂಬುದು ಪಿಡಿಒ ಒಬ್ಬರ ಹೇಳಿಕೆ.

‘ಬಸವ ವಸತಿ ಯೋಜನೆ, ಅಂಬೇಡ್ಕರ್‌ ವಸತಿ ಯೋಜನೆಯಡಿ 245 ಮನೆಗಳು ಮಂಜೂರಾಗಿವೆ. 2021ರ ಬಳಿಕ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಇಷ್ಟು ಪ್ರಮಾಣದ ಮನೆ ಸಿಕ್ಕಿರುವುದಕ್ಕೆ ಖುಷಿಯಾಗಿತ್ತು. ಆದರೆ, ‘ಇ–ಸ್ವತ್ತು’ ಸೇರಿ ಅಗತ್ಯ ದಾಖಲೆಗಳನ್ನು ಒದಗಿಸಲು 88 ಫಲಾನುಭವಿಗಳಿಗೆ ಮಾತ್ರ ಸಾಧ್ಯವಾಗಿದೆ. ವಸತಿ ರಹಿತರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ’ ಎಂದು ದಾವಣಗೆರೆ ತಾಲ್ಲೂಕಿನ ಮುದಹದಡಿ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎನ್‌. ಮಹೇಂದ್ರ ಬೇಸರ ವ್ಯಕ್ತಪಡಿಸಿದರು.

ಗ್ರಾಮ ಠಾಣಾ ವ್ಯಾಪ್ತಿಯ ನಿಗದಿಯಲ್ಲಿ ಕೆಲ ತೊಂದರೆ ಆಗಿದೆ. ಕಂದಾಯ ಇಲಾಖೆ ಜತೆ ಚರ್ಚಿಸಿ ಪರಿಹರಿಸುವ ಪ್ರಯತ್ನ ನಡೆಯುತ್ತಿದೆ
ಸುರೇಶ್‌ ಬಿ.ಇಟ್ನಾಳ್‌, ಸಿಇಒ, ಜಿಲ್ಲಾ ಪಂಚಾಯಿತಿ, ದಾವಣಗೆರೆ
ಮನೆ ತಿರಸ್ಕರಿಸುವ ಫಲಾನುಭವಿ
ಮನೆ ನಿರ್ಮಾಣಕ್ಕೆ ನೀಡುವ ಸಹಾಯಧನದ ಮೊತ್ತ ಕಡಿಮೆ ಎಂಬ ಕಾರಣವನ್ನು ಮುಂದಿಟ್ಟು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ (ಪಿಎಂಎವೈ) ಮಂಜೂರಾದ ಮನೆಗಳನ್ನು ಕೆಲ ಫಲಾನುಭವಿಗಳು ತಿರಸ್ಕರಿಸುತ್ತಿದ್ದಾರೆ. ‘ಆಯ್ಕೆಯಾದ ಸಾಮಾನ್ಯ ವರ್ಗದ ಫಲಾನುಭವಿಗೆ ₹1.20 ಲಕ್ಷ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗೆ ₹1.70 ಲಕ್ಷ ಸಹಾಯಧನ ಲಭ್ಯವಾಗುತ್ತದೆ. ನರೇಗಾ ಯೋಜನೆಯಡಿ ₹27,000 ವೆಚ್ಚದ ಕಾಮಗಾರಿ ಮಾಡಿಕೊಳ್ಳಲು ಅವಕಾಶವಿದೆ. ಈ ಸಹಾಯಧನ ಕಡಿಮೆ ಎಂಬ ಕೊರಗು ಅನೇಕರಲ್ಲಿದೆ. ನಗರ ವಸತಿ ಯೋಜನೆಯಡಿ ಫಲಾನುಭವಿಗೆ ಲಭ್ಯ ವಾಗುತ್ತಿರುವ ₹ 3 ಲಕ್ಷ ಸಹಾಯಧನದ ಸೌಲಭ್ಯವನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಲಾಗುತ್ತದೆ ಎಂಬ ವದಂತಿಯಿಂದ ಪ್ರಸಕ್ತ ಸಾಲಿನಲ್ಲಿ ಮನೆ ನಿರ್ಮಾಣಕ್ಕೆ ಜನ ಉತ್ಸುಕತೆ ತೋರುತ್ತಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.