ದಾವಣಗೆರೆ ಜಿಲ್ಲೆಯ ಜೀವನಾಡಿ ‘ಭದ್ರಾ ಜಲಾಶಯ’ ತುಂಬಿ ತುಳಿಕಿದಾಗಲೂ ನೀರಾವರಿ ಕೊನೆಯ ಭಾಗಕ್ಕೆ ನೀರು ಸಮರ್ಪಕವಾಗಿ ತಲುಪದಿರುವ ಸಮಸ್ಯೆ ಇಂದು–ನಿನ್ನೆಯದಲ್ಲ. ಭದ್ರಾ ನಾಲೆಗಳು ದುರಸ್ತಿ ಆಗದಿರುವುದು ನಿರ್ವಹಣೆ ಕೊರತೆ, ಪಂಪ್‌ಸೆಟ್ ಮೂಲಕ ನೀರು ಹಾಯಿಸಿಕೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳು ಇವೆ. ಈ ಕುರಿತ ಸರಣಿ ವರದಿ ಇಂದಿನಿಂದ ನಿಮ್ಮ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಲಿದೆ.
ದಾವಣಗೆರೆ: ಜಿಲ್ಲೆಯ ಜೀವನಾಡಿ ಭದ್ರಾ ನದಿ ಇದ್ದರೂ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಬದುಕು ಹಸನು ಮಾಡಿಕೊಳ್ಳುವ ಕೊನೆಯ ಭಾಗದ ರೈತರ ಕನಸು ಈಡೇರಿಲ್ಲ. ಬೇಸಿಗೆ ಹಂಗಾಮಿಗೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಾಧ್ಯವಾಗುತ್ತಿಲ್ಲ.
ಭದ್ರಾ ನಾಲೆಗಳ ನೀರು ಪೂರ್ಣ ಅಚ್ಚುಕಟ್ಟು ಪ್ರದೇಶಕ್ಕೆ ತಲುಪುತ್ತಿಲ್ಲ. ಇದಕ್ಕೆ ಕಾಲುವೆಗಳಲ್ಲಿ ಹೂಳು ತುಂಬಿ, ಗಿಡ– ಗಂಟಿಗಳು ಬೆಳೆದಿರುವುದು, ನಾಲೆಗಳು ಒಡೆದಿರುವುದು, ಮೇಲ್ಭಾಗದಲ್ಲಿ ಅಕ್ರಮ ಪಂಪ್‌ಸೆಟ್‌ಗಳ ಹಾವಳಿ, ಸಿಬ್ಬಂದಿ ಕೊರತೆ, ಅಸಮರ್ಪಕ ನಿರ್ವಹಣೆ ಸೇರಿದಂತೆ ಹಲವು ಕಾರಣಗಳಿವೆ.
1,200 ಕಿ.ಮೀ ವ್ಯಾಪ್ತಿ:
ಜಿಲ್ಲೆಯಲ್ಲಿ ಮುಖ್ಯ ನಾಲೆ, ವಿತರಣಾ ಮತ್ತು ಉಪ ನಾಲೆ ಸೇರಿ ಒಟ್ಟು 1,200 ಕಿ.ಮೀ ಅಂತರದಲ್ಲಿ ಕಾಲುವೆಗಳು ಹಾದುಹೋಗಿವೆ. ದಾವಣಗೆರೆ ಭಾಗದಲ್ಲೇ 464 ಕಿ.ಮೀ ಉದ್ದದಷ್ಟು ನಾಲೆಗಳಿವೆ. ಮುಖ್ಯ, ಶಾಖಾ, ಉಪ ನಾಲೆ ಹಾಗೂ ಹೊಲಗಾಲುವೆಗಳು ಎಂಬ ವಿಭಾಗ ಇವೆ. ವಿಭಾಗ ಆಧರಿಸಿ ಎಂಜಿನಿಯರ್‌ಗಳು, ನೀರುಗಂಟಿಗಳು ಕಾರ್ಯನಿರ್ವಹಿಸುತ್ತಾರೆ.
ಜಿಲ್ಲೆಯಲ್ಲಿ 65,847 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಜತೆಗೆ ಅಡಿಕೆ ಹಾಗೂ ಅಲ್ಪ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಎಲ್ಲ ಬೆಳೆಗೆ ಭದ್ರಾ ನೀರೇ ಪ್ರಮುಖ ಆಸರೆ.
ಅಚ್ಚುಕಟ್ಟು ವ್ಯಾಪ್ತಿಯ ಸೂಳೆಕೆರೆ ಸೇರಿದಂತೆ ಬಹುತೇಕ ಕೆರೆ–ಕಟ್ಟೆಗಳು, ಪಿಕಪ್ ಜಲಾಶಯಗಳು ನಾಲೆಯ ನೀರನ್ನೇ ಅವಲಂಬಿಸಿವೆ. ಜಲಾಶಯದಲ್ಲಿನ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯದಲ್ಲಿ 61.70 ಟಿಎಂಸಿ ಅಡಿ ನೀರನ್ನು ಮಾತ್ರ ನೀರಾವರಿಗೆ ಬಳಸಬಹುದು. ಪ್ರತಿ ಬೆಳೆಗೆ 31 ಟಿಎಂಸಿ ಅಡಿ ನೀರಿನ ಅಗತ್ಯವಿದೆ ಎಂಬುದು ಇಲಾಖೆಯ ಮಾಹಿತಿ.
1965ರಲ್ಲಿ ಭದ್ರಾ ಜಲಾಶಯದಿಂದ ನಾಲೆಗಳಲ್ಲಿ ನೀರು ಹರಿಯಲು ಆರಂಭವಾಗಿತ್ತು. ಬಳಿಕ 2007–08ರಲ್ಲಿ ಅಂದಾಜು ₹ 800 ಕೋಟಿ ವೆಚ್ಚದಲ್ಲಿ ಭದ್ರಾ ನಾಲೆಗಳ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ನಂತರದಲ್ಲಿ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರಗಳು ನಾಲೆಗಳ ಅಭಿವೃದ್ಧಿಯತ್ತ ಗಮನಹರಿಸಿಲ್ಲ.
ನಾಲೆಯ ತಡೆಗೋಡೆಗಳು ಶಿಥಿಲಗೊಂಡಿವೆ. ಹೊಲಗಾಲುವೆಗಳು ಕಾಂಕ್ರೀಟೀಕರಣವೇ ಕಂಡಿಲ್ಲ. ದೇವರಬೆಳೆಕೆರೆ ಪಿಕಪ್ ಜಲಾಶಯಕ್ಕೆ ಜಲಸಸ್ಯ ಹರಿದು ಬಂದು ಗೇಟ್‌ಗಳಿಗೆ ಅಡ್ಡಲಾಗಿ ನಿಲ್ಲುವ ಸಮಸ್ಯೆ ಪರಿಹಾರ ಕಂಡಿಲ್ಲ.
ನಾಲೆಗಳ ದುರಸ್ತಿಯಾಗದ ಕಾರಣ ನೀರು ಬಿಡುವ ವೇಳೆ ಪ್ರತಿನಿತ್ಯ ಹರಿಸುವ 2,650 ಕ್ಯುಸೆಕ್ ನೀರಿನಲ್ಲಿ 1,000 ಕ್ಯುಸೆಕ್ ಪೋಲಾಗುತ್ತದೆ ಎಂಬುದು ರೈತರ ಆರೋಪ.
ಹಿಗ್ಗಿದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ:
ಜಲಾಶಯ ನಿರ್ಮಾಣವಾದ ಸಂದರ್ಭದಲ್ಲಿನ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ನಂತರದ ವರ್ಷಗಳಲ್ಲಿ ಹಿಗ್ಗಿದೆ. ದಶಕಗಳ ಈಚೆಗೆ ಅಡಿಕೆ ಬೆಳೆಯತ್ತ ಆಕರ್ಷಿತರಾದ ರೈತರು ಅಡಿಕೆ ತೋಟ ಮಾಡಿದ್ದಾರೆ.
ಕಳಪೆ ಕಾಮಗಾರಿ:
ಅಭಿವೃದ್ಧಿ ಕಾಮಗಾರಿಯೂ ಕಳಪೆಯಾಗಿದ್ದು, ನಾಲೆಗಳು ಅಲ್ಲಲ್ಲಿ ಒಡೆದಿವೆ. ಅನುದಾನವೂ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂದು ರೈತರು ಆರೋಪಿಸುತ್ತಾರೆ.
ಸೀಮಿತವಾದ ಸಲಹಾ ಸಮಿತಿ:
ಭದ್ರಾ ಕಾಡಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಾಲೆಗಳಿಗೆ ನೀರು ಹರಿಸುವುದು ಬಿಟ್ಟು ಬೇರೆ ವಿಷಯ ಚರ್ಚೆ ಆಗುವುದೇ ಇಲ್ಲ. ನಿರ್ವಹಣೆ, ಹೂಳು, ಕೊನೆಭಾಗಕ್ಕೆ ನೀರು ತಲುಪದ ವಿಷಯ ಸಭೆಯಲ್ಲಿ ಗೌಣ.
‘ನಾಲೆಗಳ ಹೂಳು ತೆಗೆದಿಲ್ಲ. ಗಿಡಗಳು ಬೆಳೆದು, ಕಾಲುವೆ ಒಡೆದಿದೆ. ಅಲ್ಲಿ ರಸ್ತೆಗಳು ಸರಿಯಿಲ್ಲ. ಇದರಿಂದ ಹೊಲಗಳಿಗೆ ಹೋಗಿ ಗಾಲುವೆ ಸ್ವಚ್ಛಗೊಳಿಸುವುದು ಹೇಗೆ?’ ಎಂದು ಪ್ರಶ್ನಿಸುತ್ತಾರೆ ಕಂಸಾಗರದ ರೈತ ಪರಮೇಶ್ವರಪ್ಪ.
‘ಹೊಲಗಾಲುವೆಗಳ ಕಾಂಕ್ರೀಟೀಕರಣ ಮಾಡಿಲ್ಲ. ಹೂಳನ್ನು ನಾವೇ ತೆರವು ಮಾಡುತ್ತಿದ್ದೇವೆ. ಹೊಲಗಾಲುವೆಗಳ ಕಾಂಕ್ರೀಟೀಕರಣ ಮಾಡಿ, ರಸ್ತೆ ನಿರ್ಮಿಸಿದರೆ ಅನುಕೂಲವಾಗಲಿದೆ’ ಎಂದು ಜರೇಕಟ್ಟೆಯ ರೈತ ಸಂಜೀವಕುಮಾರ್ ಒತ್ತಾಯಿಸಿದರು.
ಉದ್ಯೋಗ ಖಾತರಿ ಯೋಜನೆಯಡಿ ಕಾಲುವೆಗಳ ಹೂಳು ಗಿಡಗಳ ತೆರವು ಕಾರ್ಯ ಕೈಗೊಳ್ಳಲಾಗಿದೆ. ಅಗತ್ಯ ಇರುವ ಕಡೆ ಕಾಮಗಾರಿ ವಿಸ್ತರಿಸಲಾಗುವುದು. ಕೊನೆ ಭಾಗಕ್ಕೆ ನೀರು ತಲುಪದ ಸಮಸ್ಯೆ ಗಮನದಲ್ಲಿದ್ದು ಕ್ರಮ ಕೈಗೊಳ್ಳಲಾಗುವುದು.ಡಾ. ಅಂಶುಮಂತ್, ಭದ್ರಾ ಕಾಡಾ ಅಧ್ಯಕ್ಷ
ಬದಲಾಗದ ಬೆಳೆ ಪದ್ಧತಿ
‘ಭದ್ರಾ ಜಲಾಶಯದಿಂದ ಮೊದಲ ಬಾರಿ ನೀರು ಹರಿಸುವಾಗ ಇದ್ದ ಬೆಳೆ ಪದ್ಧತಿ ಅನುಸಾರವೇ ನೀರು ಬಿಡುತ್ತಿರುವುದು ಬಳಕೆಯಲ್ಲಿನ ತೊಡಕಿಗೆ ಒಂದು ಕಾರಣ. ಜಲಾಶಯ ನಿರ್ಮಾಣದ ದಶಕಗಳ ನಂತರ ರೈತರು ಇತರೆ ಬೆಳೆಗಳತ್ತ ವಾಲಿದ್ದರೂ ಬೆಳೆ ಪದ್ಧತಿ ಆಗಿನಂತೆಯೇ ಇದೆ. ಜಲಾಶಯ ತುಂಬಿದ ತಕ್ಷಣ ನೀರು ಬರುವುದು ಖಚಿತ ಎಂದು ರೈತರು ಭಾವಿಸುತ್ತಾರೆ. ಆದರೆ ನಿರಾಸೆಯೇ ಹೆಚ್ಚು. ಭದ್ರಾ ಯೋಜನೆ ನಿರ್ಮಾಣಗೊಂಡು 60 ವರ್ಷಗಳಾದರೂ 2007ರ ನಂತರ ಭದ್ರಾ ನಾಲೆಗಳ ಆಧುನೀಕರಣವಾಗಿಲ್ಲ’ ಎಂದು ಭದ್ರಾ ಕಾಡಾ ನೀರು ನಿರ್ವಹಣಾ ಸಲಹಾ ಸಮಿತಿ ಸದಸ್ಯ ತೇಜಸ್ವಿ ಪಟೇಲ್ ಬೇಸರ ವ್ಯಕ್ತಪಡಿಸಿದರು.
ನೀರು ಬಳಕೆದಾರರ ಸಂಘದ ನಿರಾಸಕ್ತಿ
ಪ್ರತಿ 400ರಿಂದ 500 ಹೆಕ್ಟೇರ್ ವ್ಯಾಪ್ತಿಗೆ ತಲಾ ಒಂದು ನೀರು ಬಳಕೆದಾರರ ಸಂಘ ಸ್ಥಾಪಿಸಲಾಗಿದೆ. ಕಾಲುವೆಗಳ ನಿರ್ವಹಣೆ ಹೂಳು ಮತ್ತಿತರ ಚಟುವಟಿಕೆಗೆ ಸಂಘಗಳಿಗೆ ವಾರ್ಷಿಕ ಕಾರ್ಯಾನುದಾನ ಎಂದು ₹ 1 ಲಕ್ಷ ನೀಡಲಾಗುತ್ತದೆ. ಆದರೆ ಈ ಸಂಘಗಳು ಹಲವೆಡೆ ಸಕ್ರಿಯವಾಗಿಲ್ಲ ಎಂದು ಎಂಜಿನಿಯರ್‌ಗಳು ಆರೋಪಿಸುತ್ತಾರೆ.
‘ಎಲ್ಲದಕ್ಕೂ ಜಲಸಂಪನ್ಮೂಲ ಇಲಾಖೆಯತ್ತ ಬೊಟ್ಟು ಮಾಡುವುದು ಸರಿಯಲ್ಲ. ಕೆಲವೆಡೆ ನೀರು ಬಳಕೆದಾರರ ಸಂಘಗಳು ಸಕ್ರಿಯವಾಗಿಲ್ಲ. ನೀರುಗಂಟಿಗಳಿಗೆ ವೇತನ ಹೊರತುಪಡಿಸಿ ಇಲಾಖೆಯಿಂದ ವಾರ್ಷಿಕವಾಗಿ ಯಾವುದೇ ಅನುದಾನ ಬರುವುದಿಲ್ಲ. ನಾವು ಏನು ಮಾಡುವುದು?’ ಎಂಬ ಪ್ರಶ್ನೆ ಅವರದ್ದು.
ಅಧಿಕ ಅನುದಾನಕ್ಕೆ ಬೇಡಿಕೆ
‘ನೀರು ಬಳಕೆದಾರರ ಸಂಘಗಳಿಗೆ ನೀಡಲಾಗುವ ವಾರ್ಷಿಕ ಕಾರ್ಯಾನುದಾನವನ್ನು ₹ 2 ಲಕ್ಷಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದ್ದೇವೆ. ಹಲವೆಡೆ ನಾಲೆಗಳ ಗೇಟ್ ಹಾಳಾಗಿದ್ದು ದುರಸ್ತಿಯಾಗಿಲ್ಲ’ ಎಂದು ಭದ್ರಾ ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪ ರೆಡ್ಡಿ ಹೇಳಿದರು.
ಸಂಘಗಳಿಗೆ ಪ್ರತಿವರ್ಷ ಆಡಿಟ್ ಹಾಗೂ ಇತರೆ ಖರ್ಚು ಇರುತ್ತದೆ. ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಹಿಂದೆ ಒಂದೊಂದು ವಿಭಾಗದಲ್ಲಿ 5–6 ಎಂಜಿನಿಯರ್ ಇದ್ದರು. ಈಗ ಇಬ್ಬರು ಮೂವರು ಇದ್ದಾರೆ. ನೀರುಗಂಟಿಗಳಿಗೆ 5–6 ತಿಂಗಳಿಂದ ವೇತನ ನೀಡಿಲ್ಲ. ಇಂತಹ ಹಲವು ಸಮಸ್ಯೆ ಇದೆ. ಇದಕ್ಕೆ ಪರಿಹಾರ ಯಾವಾಗ ಎಂದು ಪ್ರಶ್ನಿಸುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.