ದಾವಣಗೆರೆ: ‘ಎಲ್ಲರಿಗೂ ಸಚಿವ ಸ್ಥಾನ ನೀಡಲು ಅವಕಾಶ ಇರುವುದಿಲ್ಲ. ಈ ಸಮಯದಲ್ಲಿ ಅಸಮಾಧಾನವಾಗುವುದು ಸಹಜ. ಅವುಗಳನ್ನು ಸರಿಪಡಿಸಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’ ಎಂದು ಸಚಿವ ಬೈರತಿ ಬಸವರಾಜ ತಿಳಿಸಿದರು.
ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಶುಕ್ರವಾರ ಮಳೆ ಹಾನಿ ಪ್ರದೇಶ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ‘ಖಾತೆ ಹಂಚಿಕೆ ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟಿದ್ದು. ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಾನು ಇಂತಹದ್ದೇ ಖಾತೆಯನ್ನು ನೀಡಿ ಎಂದು ಕೇಳಿಲ್ಲ. ಯಾವ ಖಾತೆ ನೀಡಿದರೂ ನಿಭಾಯಿಸಲು ಸಮರ್ಥವಾಗಿದ್ದೇನೆ’ ಎಂದರು.
ಶಾಸಕ ಜಮೀರ್ ಅಹಮದ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಸಚಿವರು ಸಮರ್ಥಿಸಿಕೊಂಡರು. ‘ಬಿಜೆಪಿಯಲ್ಲೂ ಆದಾಯಕ್ಕಿಂತ ಹೆಚ್ಚು ಆದಾಯ ಗಳಿಸಿರುವ ನಾಯಕರಿದ್ದಾರೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಸಿದ್ದರಾಮಯ್ಯ ಪಟ್ಟಿ ಬಿಡುಗಡೆ ಮಾಡಲಿ. ತಪ್ಪು ಮಾಡಿದ್ದರೆ ದೂರು ನೀಡಲಿ’ ಎಂದರು.
ಪ್ರಾದೇಶಿಕ ಅಸಮತೋಲನ: ‘ವಲಸಿಗ ಶಾಸಕರಿಗೆ ಆದ್ಯತೆ ನೀಡಬೇಕಿದ್ದರಿಂದ ಸಚಿವ ಸ್ಥಾನ ಹಂಚಿಕೆಯಲ್ಲಿ ಪ್ರಾದೇಶಿಕ ಅಸಮಾನತೆಯಾಗಿದೆ. ವಲಸಿಗರನ್ನು ಅವಲಂಬಿಸುವ ಪರಿಸ್ಥಿತಿ ಇಲ್ಲದಿದ್ದರೆ ಎಲ್ಲಾ ಜಿಲ್ಲೆಗಳ ಶಾಸಕರಿಗೂ ಸಚಿವ ಸ್ಥಾನ ಸಿಗುತ್ತಿತ್ತು’ ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.