ADVERTISEMENT

ಮೈತ್ರಿಯಿಂದ ಎರಡು ಪಕ್ಷಕ್ಕೂ ಲಾಭ: ಬೋಜೇಗೌಡ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:43 IST
Last Updated 19 ಜೂನ್ 2024, 14:43 IST
ಹೊನ್ನಾಳಿ ಪಟ್ಟಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿಧಾನ ಪರಿಷತ್‌ ಶಾಸಕ ಡಾ.ಧನಂಜಯ ಸರ್ಜಿ ಮಾತನಾಡಿದರು.
ಹೊನ್ನಾಳಿ ಪಟ್ಟಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿಧಾನ ಪರಿಷತ್‌ ಶಾಸಕ ಡಾ.ಧನಂಜಯ ಸರ್ಜಿ ಮಾತನಾಡಿದರು.   

ಹೊನ್ನಾಳಿ: ‘ಲೋಕಸಭಾ ಚುನಾವಣೆ ಹಾಗೂ ರಾಜ್ಯದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿಗೆ ಹಾಗೂ ಜೆಡಿಎಸ್ ಇಬ್ಬರಿಗೂ ಲಾಭವಾಯಿತು’ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಗೆಲುವು ಸಾಧಿಸಿದ ನೂತನ ಶಾಸಕ ಎಸ್.ಎಲ್. ಬೋಜೇಗೌಡ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಬಿಜೆಪಿ ತಾಲ್ಲೂಕು ಘಟಕದಿಂದ ಬುಧವಾರ ಸನ್ಮಾನ ಸ್ವೀಕರಿಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.

‘ನಮ್ಮ ಮೈತ್ರಿ ಕೇವಲ ನಾಯಕರ ಮಧ್ಯೆ ನಡೆದ ಹೊಂದಾಣಿಕೆ ಅಲ್ಲ. ತಳಮಟ್ಟದ ಕಾರ್ಯಕರ್ತರಲ್ಲಿ ಆದ ಹೊಂದಾಣಿಕೆಯಿಂದ ಗೆಲುವು ಸಾಧ್ಯವಾಯಿತು’ ಎಂದರು.

ADVERTISEMENT

‘ರಾಜ್ಯದ ಅನುದಾನಿತ ಶಾಲೆಗಳಲ್ಲಿ ಶೇ 50ರಷ್ಟು ಶಿಕ್ಷಕರ ಕೊರತೆ ಇದೆ. ಈ ಶಾಲೆಗಳು ಅಳಿವಿನಂಚಿನಲ್ಲಿವೆ. ಸರ್ಕಾರಿ ಶಾಲೆಗಳಲ್ಲಿ, ಉತ್ತಮ ಕಟ್ಟಡ, ಶೌಚಾಲಯಗಳು ಇಲ್ಲ, ಶಿಕ್ಷಕರೂ ಇಲ್ಲ. ಈ ಎಲ್ಲವೂ ನನ್ನ ಅರಿವಿಗಿದೆ’ ಎಂದ ಅವರು, ‘ನಾಡಿನ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಒಪಿಎಸ್ ಸೌಲಭ್ಯ ಇದೆ. ಆದರೆ, 40 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಈ ಸೌಲಭ್ಯ ಇಲ್ಲ ಅಂದರೆ ಹೇಗೆ. ಈ ಬಗ್ಗೆ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇನೆ’ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕು: ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಶಾಸಕ ಡಾ.ಧನಂಜಯ ಸರ್ಜಿ ಮಾತನಾಡಿ, ‘ಕುದಿಯುವವರು ಕುದಿಯಲಿ, ಉರಿಯುವವರು ಉರಿಯಲಿ. ಆದರೆ ಕುದಿಯುವವರು ಆವಿಯಾಗುತ್ತಾರೆ. ಉರಿಯುವವರು ಬೂದಿಯಾಗುತ್ತಾರೆ’ ಎನ್ನುವ ಸಿದ್ದೇಶ್ವರ ಸ್ವಾಮೀಜಿಯ ಸಂದೇಶದಂತೆ ನಾನು ಚುನಾವಣೆಯಲ್ಲಿ ನಡೆದುಕೊಂಡೆ. ಹೀಗಾಗಿ ನನ್ನ ಗೆಲುವು ಸುಲಭಸಾಧ್ಯವಾಯಿತು’ ಎಂದರು.

‘ಇದೊಂದು ಪಿಕ್ ಪಾಕೆಟ್ ಸರ್ಕಾರ, ಈ ಸರ್ಕಾರ ಇರಬಾರದು. ಇದನ್ನು ಕಿತ್ತೊಗೆಯಬೇಕು’ ಎಂದ ಅವರು, ‘ಸಂವಿಧಾನದ ಬಗ್ಗೆ ಮಾತನಾಡಿದವರು ಈ ಸಂವಿಧಾನವನ್ನು 106 ಬಾರಿ ತಿದ್ದುಪಡಿ ಮಾಡಿದ್ದಾರೆ. ತುರ್ತು ಸಂದರ್ಭದಲ್ಲಂತೂ ಹೆಚ್ಚು ಬಾರಿ ತಿದ್ದುಪಡಿಗೆ ನಮ್ಮ ಸಂವಿಧಾನ ಒಳಗಾಗಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನೇತೃತ್ವದ ಸರ್ಕಾರ’ ಎಂದು ಟೀಕಾ ಪ್ರಹಾರ ನಡೆಸಿದರು.

‘ದೇವೇಗೌಡರು ತಮ್ಮ ಇಳಿವಯಸ್ಸಿನಲ್ಲಿಯೂ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದು ಅನುಕೂಲವಾಯಿತು. ಆದರೆ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಸೋತವರು ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದು ನಮ್ಮಿಂದಾದ ಸೋಲಲ್ಲ, ಬದಲಾಗಿ ಅವರ ಸ್ವಯಂಕೃತ ಅಪರಾಧದಿಂದ ಆದ ಸೋಲು’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಕೆ.ಸುರೇಶ್, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪಿ. ಕುಬೇರಪ್ಪ ಸೇರಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಹೊನ್ನಾಳಿ ಪಟ್ಟಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಶಾಸಕರಾದ ಡಾ.ಧನಂಜಯ ಸರ್ಜಿ ಹಾಗೂ ಎಸ್.ಎಲ್. ಬೋಜೇಗೌಡ ಅವರನ್ನು ನ್ಮಾನಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.