ಚನ್ನಗಿರಿ: ‘ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ನ್ಯಾಯಯುತವಾಗಿ ಬರಬೇಕಾಗಿರುವ ಅನುದಾನವನ್ನು ನೀಡದೇ ಸತಾಯಿಸಿದ್ದರಿಂದ ಸುಪ್ರೀಂ ಕೋರ್ಟ್ ಮೆಟ್ಟಿಲು ಏರುವಂತಾಯಿತು. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು’ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು ಅವರು, ‘ಮೋದಿ ಅವರು ಇ.ಡಿ., ಜಾರಿ ನಿರ್ದೇಶನಾಲಯದ ಮೂಲಕ ವಿರೋಧ ಪಕ್ಷದವರನ್ನು ಹೆದರಿಸಿ, ಬಿಜೆಪಿಗೆ ಸೇರುವಂತೆ ಮಾಡಿಕೊಳ್ಳುತ್ತಿದ್ದಾರೆ. ಜಿಂದಾಲ್, ಆದಾನಿ, ಅಂಬಾನಿ ಅವರಂತಹ ಶ್ರೀಮಂತರಿಗೆ ಬಿಜೆಪಿ ತಲೆಬಾಗಿದೆ’ ಎಂದರು.
‘ದುಡ್ಡು ಹೊಡೆದು ದೊಡ್ಡವರಾಗಿರುವವರು ಬಿಜೆಪಿಯವರು. ಸಿದ್ದೇಶ್ವರ ಹಾಗೂ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರ ಹಾಗೂ ತಾವು ಎಂದು ಸುಳ್ಳು ಹೇಳಿಕೊಂಡು ಹೋಗುತ್ತಿದ್ದಾರೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಘೋಷಣೆ ಮಾಡಿ ₹446 ಕೋಟಿ ಅನುದಾನ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. ಸಿದ್ದೇಶ್ವರ ಅವರು ತಮ್ಮ ಸಹೋದರನನ್ನು ಜೈಲಿಗೆ ಕಳುಹಿಸಿದರು. ಸಾಹುಕಾರಿಕೆ ಇದ್ದರೂ ‘ಪರ್ಸೆಂಟೇಜ್’ ಕೇಳುವುದನ್ನು ಬಿಡಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬೈರತಿ ಬಸವರಾಜ್ ಸ್ಮಾರ್ಟ್ ಸಿಟಿ ಯೋಜನೆಯ ಅನುದಾನವನ್ನು ಲೂಟಿ ಮಾಡಿದರು ಎಂದು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.
‘ಅಭ್ಯರ್ಥಿ, ಸೊಸೆ ಪ್ರಭಾ ವೈದ್ಯರಾಗಿ ಜನಾನುರಾಗಿಯಾಗಿದ್ದಾರೆ. ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇಂತಹ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸದರನ್ನಾಗಿ ಮಾಡಿದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಖಂಡಿತ’ ಎಂದರು.
ಶಾಸಕ ಬಸವರಾಜು ವಿ. ಶಿವಗಂಗಾ ಮಾತನಾಡಿ, ‘ಸಿದ್ದೇಶ್ವರ ಸುಳ್ಳಿನ ಸರದಾರ. ಸುಳ್ಳು ಹೇಳಿಯೇ ಅವರು ನಾಲ್ಕು ಬಾರಿ ಸಂಸದರಾಗಿದ್ದಾರೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕುರಿತು ಬಹಿರಂಗವಾಗಿ ಚರ್ಚೆಗೆ ಬರಲಿ. ದಾಖಲೆ ಸಹಿತ ನಾನು ಚರ್ಚೆ ಮಾಡುತ್ತೇನೆ. ಬಿಜೆಪಿಯವರು ಚುನಾವಣೆ ವೇಳೆ ಸುಳ್ಳುಗಳನ್ನು ಸೃಷ್ಟಿ ಮಾಡುತ್ತಾರೆ ಎಂಬುದಕ್ಕೆ ಸಂಸದರು ಹೇಳಿರುವ ಸುಳ್ಳೇ ಸಾಕ್ಷಿ. ಈ ಬಾರಿ ಕಾಂಗ್ರೆಸ್ ಗೆಲುವನ್ನು ಇಂತಹ ಸುಳ್ಳು ಹೇಳಿ ತಪ್ಪಿಸಲು ಸಾಧ್ಯವಿಲ್ಲ’ ಎಂದರು.
ತಾಲ್ಲೂಕು ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್, ಮುಖಂಡರಾದ ಅಮಾನುಲ್ಲಾ, ಲೋಕೇಶಪ್ಪ, ಎ.ಜಿ. ಜಗದೀಶ್, ಸಿ. ನಾಗರಾಜ್, ಬಿ.ಆರ್. ಹಾಲೇಶ್, ಜಿ. ನಿಂಗಪ್ಪ, ಸೈಯದ್ ಗೌಸ್ ಪೀರ್, ಮಂಜುನಾಥ್, ಜ್ಯೋತಿ ಕೋರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.