ಹರಿಹರ: ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕದೇ ಶಿಷ್ಟಾಚಾರ ಉಲ್ಲಂಘಿಸಿದ ಹರಿಹರ ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ವಿರುದ್ಧ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಆಕ್ರೋಶಗೊಂಡು ಏಕವಚನದಲ್ಲಿ ನಿಂದಿಸಿದ್ದಾರೆ.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ಧೂಡಾ) ಹರಿಹರ ಶಾಖಾ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಮಧ್ಯಪ್ರವೇಶಿಸಿದ ‘ಧೂಡಾ’ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹಾಗೂ ಸ್ಥಳೀಯ ಮುಖಂಡರು ಶಾಸಕರನ್ನು ಸಮಾಧಾನಪಡಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಧೂಡಾ’ ಶಾಖಾ ಕಚೇರಿ ಉದ್ಘಾಟನೆ ಸೋಮವಾರ ಬೆಳಿಗ್ಗೆ 11 ಕ್ಕೆ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ‘ಧೂಡಾ’ ಸದಸ್ಯರೂ ಆಗಿರುವ ಸ್ಥಳೀಯ ಶಾಸಕ ಬಿ.ಪಿ.ಹರೀಶ್ ಅವರನ್ನು ನಗರಸಭೆ ಪೌರಾಯುಕ್ತರು ಶಿಷ್ಟಾಚಾರದ ಪ್ರಕಾರ ಆಹ್ವಾನ ನೀಡಿರಲಿಲ್ಲ. ಇದರಿಂದ ಕುಪಿತಗೊಂಡ ಶಾಸಕರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ಪೌರಾಯುಕ್ತರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.
‘ಶಾಸಕರು ಅಂದರೆ ಏನಂದುಕೊಂಡಿದ್ದೀಯಾ? ನಿನ್ನ ಆಟ ಅತಿಯಾಗಿದೆ. ‘ಧೂಡಾ’ ಅಧ್ಯಕ್ಷರು ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ನೀನು ಏಕೆ ಆಹ್ವಾನ ನೀಡಲಿಲ್ಲ. ಸಾಹುಕಾರನ (ಸಚಿವ ಎಸ್.ಎಸ್.ಮಲ್ಲಿಕಾರ್ಜುನ) ಮೆಚ್ಚಿಸಲು ಇಷ್ಟೆಲ್ಲಾ ಮಾಡುತ್ತಿದ್ದೀಯಾ? ಥೂ ಮುಖ ತೋರಿಸಬೇಡ ಹೋಗು ಆಕಡೆ…’ ಎಂದು ಪೌರಾಯುಕ್ತರ ವಿರುದ್ಧ ರೇಗಾಡಿರುವುದು ವಿಡಿಯೋದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.