ಹೊನ್ನಾಳಿ: ‘ದೇಶದ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ಕಾಂಗ್ರೆಸ್ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲೂ ದೂಳೀಪಟವಾಗಲಿದೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.
ಭಾನುವಾರ ನಗರದಲ್ಲಿ ತಾಲ್ಲೂಕು ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು.
‘ನಾನು ರಾಜ್ಯದ ಮೂಲೆ ಮೂಲೆಗಳಲ್ಲೂ ಪ್ರವಾಸ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿರುವುದನ್ನು ನೋಡಿದ್ದೇನೆ. ಕಾಂಗ್ರೆಸ್‌ನ ಹಲವಾರು ಟಿಕೆಟ್ ಆಕಾಂಕ್ಷಿಗಳು ತಮಗೆ ಕಾಂಗ್ರೆಸ್ ಟಿಕೆಟ್ ಬೇಡ ಎನ್ನುವ ಸ್ಥಿತಿಗೆ ತಲುಪಿದೆ’ ಎಂದರು.
‘ಹೊನ್ನಾಳಿಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಗೆಲುವಿನೊಂದಿಗೆ ರಾಜ್ಯದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರಲಿದೆ. ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಶಿವಮೊಗ್ಗಕ್ಕೆ ಬಂದಾಗ ‘ಹೇಗಿದೆಯಪ್ಪಾ ಹೊನ್ನಾಳಿ ತಾಲ್ಲೂಕಿನ ರಾಜಕೀಯ ಸ್ಥಿತಿಗತಿ’ ಎಂದು ನಾನು ವಿಚಾರಿಸಿದಾಗ ಅವರು ಈಗಾಗಲೇ ರೇಣುಕಾಚಾರ್ಯ ಗೆದ್ದಾಗಿದೆ ಎಂದು ಹೇಳುತ್ತಿದ್ದಾರೆ. ಗೆಲುವಿಗೆ ಕಾರಣ ಕೇಳಿದರೆ, ಅವಳಿ ತಾಲ್ಲೂಕಿನಲ್ಲಿ ನಿರಂತರವಾಗಿ ಸಾರ್ವಜನಿಕ ಸಂಪರ್ಕದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗೂ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಕೊರೊನಾ ಸಂದರ್ಭದಲ್ಲಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ ಎನ್ನುವ ಹಲವಾರು ಕಾರಣಗಳನ್ನು ನೀಡುತ್ತಿದ್ದಾರೆ’ ಎಂದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಿಲ್ಲ ವಾರಂಟಿ: ‘ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಚಿತವಾಗಿ ಕುಟುಂಬದ ಹಿರಿಯ ಮಹಿಳೆಗೆ
₹ 2,000 ಕೊಡುವುದಾಗಿ ಭರವಸೆ ನೀಡಿದೆ. ಹೀಗೆ ತಲಾ ₹ 2,000 ಕೊಟ್ಟರೆ ರಾಜ್ಯದ ಬಜೆಟ್‌ಗಿಂತ ದುಪ್ಪಟ್ಟು ಹಣ ತರಬೇಕಾಗುತ್ತದೆ. ಎಲ್ಲಿಂದ ತರುತ್ತಾರೆ’ ಎಂದು ಪ್ರಶ್ನಿಸಿದ ಅವರು, ‘ಡಿ.ಕೆ.ಶಿವಕುಮಾರ್ ಅವರು ಲೂಟಿ ಹೊಡೆದಿರುವ ಹಣದಿಂದ ಮಹಿಳೆಯರಿಗೆ ಈ ಹಣ ಕೊಡುತ್ತಾರಾ’ ಎಂದು ಪ್ರಶ್ನಿಸಿದರು. ‘ಅವರು ಯಾವ ಮುಖ ಹೊತ್ತು ಜನರ ಬಳಿ ಮತಯಾಚನೆ ಮಾಡುತ್ತಿದ್ದಾರೋ ನನಗಂತೂ ಗೊತ್ತಿಲ್ಲ’ ಎಂದರು.
‘ಮಾರ್ಚ್ 25ರಂದು ದಾವಣಗೆರೆಯಲ್ಲಿ ನಡೆಯುವ ’ಮಹಾಸಂಗಮ’ ಕಾರ್ಯಕ್ರಮಕ್ಕೆ ಈಗಾಗಲೇ ಪ್ರತಿ ಗ್ರಾಮದಿಂದ ಎಷ್ಟು ಬಸ್‌ಗಳು ಬೇಕು ಎಂದು ಪಟ್ಟಿ ಮಾಡಿದ್ದೇವೆ. ಈಗಿನ ಮಾಹಿತಿ ಪ್ರಕಾರ ಹೊನ್ನಾಳಿ ನ್ಯಾಮತಿ ಅವಳಿ ತಾಲ್ಲೂಕಿನಿಂದ 30,000 ಜನರನ್ನು ಕರೆದೊಯ್ಯಲಾಗುವುದು’ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಇದಕ್ಕೂ ಮೊದಲು ಶಾಸಕ ಎಂ.ಪಿ.ರೇಣುಕಾಚಾರ್ಯ ನಿವಾಸದಿಂದ ವಿಜಯ ಸಂಕಲ್ಪ ಯಾತ್ರೆ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬರಲಾಯಿತು. ರಾಯಣ್ಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಇದೇ ವೇಳೆ ಕಾಂಗ್ರೆಸ್‌ನ ಕೆಲ ಮುಖಂಡರು ಬಿಜೆಪಿ ಸೇರ್ಪಡೆಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.