ದಾವಣಗೆರೆ: ‘ಪಾಲಿಕೆಯಲ್ಲಿ ಕಳೆದ ಬಾರಿ ಒಂದು ಸ್ಥಾನದಲ್ಲಿದ್ದವರು ಈ ಬಾರಿ 17ಕ್ಕೆ ಬಂದಿದ್ದೇವೆ. ಅಧಿಕಾರಕ್ಕೆ ಬಂದೇ ಬರುತ್ತೇವೆ’ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ರೇಣುಕಾಮಂದಿರದಲ್ಲಿ ಗುರುವಾರ ನಡೆದ ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರ ಪದಗ್ರಹಣ, ಪಾಲಿಕೆಯ ನೂತನ ಸದಸ್ಯರಿಗೆ ಮತ್ತು ಪರಾಜಿತ ಅಭ್ಯರ್ಥಿಗಳಿಗೆ ಸನ್ಮಾನ, ಮತದಾರರಿಗೆ, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೆ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದವರು ನಡೆಸಿದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿ. ಜನರಿಗೆ ನೀಡಿದ ಭರವಸೆಯನ್ನು ನೂರಕ್ಕೆ ನೂರು ಈಡೇರಿಸಲು ಆಗದೇ ಇದ್ದರೂ ನೂರಕ್ಕೆ ಎಂಬತ್ತಾದರೂ ಈಡೇರಿಸಿ. ಕಾರ್ಯಕರ್ತರ, ಜನರ ನೋವುಗಳಿಗೆ ಸ್ಪಂದಿಸಿ. ಜನರ ನಿಮ್ಮ ಮೊಬೈಲ್‌ಗೆ ಕರೆ ಮಾಡಿದಾಗ ಸ್ವೀಕರಿಸಿ ಮಾತನಾಡಿ. ಒಂದು ವೇಳೆ ಕರೆ ಸ್ವೀಕರಿಸಲು ಆ ಸಂದರ್ಭದಲ್ಲಿ ಆಗದಿದ್ದರೆ ನಂತರ ಆ ಸಂಖ್ಯೆಗೆ ನೀವೇ ಕರೆ ಮಾಡಿ ಮಾತನಾಡಿ. ಅಹಂಕಾರ ಬೆಳೆಸಿಕೊಳ್ಳಬೇಡಿ. ಸೋತಾಗಲೂ ಗೆದ್ದಾಗಲೂ ಒಂದೇ ರೀತಿ ಇರಿ’ ಎಂದು ಬುದ್ಧಿಮಾತುಗಳನ್ನು ಹೇಳಿದರು.
‘ನೆಹರೂವಿನಿಂದ ಹಿಡಿದು ರಾಹುಲ್ ಗಾಂಧಿವರೆಗೆ ಕಾಂಗ್ರೆಸ್ ಒಂದು ಕುಟುಂಬಕ್ಕೆ ಸೀಮಿತವಾಗಿತ್ತು. ಅದರ ವಿರುದ್ಧ ಬಿಜೆಪಿ ಸಂಘಟಿತವಾಯಿತು. ಅಮಿತ್ ಶಾ, ಮೋದಿಯವರು ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವೂ ಅಲ್ಲದಂತೆ ಮಾಡಿದರು. ಅದೇ ರೀತಿ ದಾವಣಗೆರೆಯಲ್ಲಿಯೂ ಒಂದೇ ಕುಟುಂಬದ ರಾಜಕೀಯ ನಡೆಯುತ್ತಿದೆ. ಸರ್ಕಾರ ಮತ್ತು ಪಕ್ಷದ ಹಿಡಿತವನ್ನು ಆ ಕುಟುಂಬ ಇಟ್ಟುಕೊಂಡು ಭ್ರಷ್ಟಾಚಾರ ಮಾಡಿದೆ. ಈ ಕುಟುಂಬ ರಾಜಕಾರಣಕ್ಕೂ ಅಂತ್ಯ ಹಾಡಬೇಕು. ಈಗಾಗಲೇ ಜಿಲ್ಲೆಯ 8ರಲ್ಲಿ 6 ಶಾಸಕರು ಬಿಜೆಪಿಯವರು ಇದ್ದಾರೆ. ಹರಿಹರ ಮತ್ತು ದಾವಣಗೆರೆ ದಕ್ಷಿಣದಲ್ಲಿ ಸ್ವಲ್ಪ ಅಂತರದಿಂದ ಸೋತಿದ್ದೇವೆ. ಅಲ್ಲಿ ಇರುವ ನ್ಯೂನತೆಯನ್ನು ಸರಿಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಬಿಜೆಪಿಯಲ್ಲಿ ಸರ್ಕಾರ ಮತ್ತು ಸಂಘಟನೆ ಒಟ್ಟಾಗಿ ಹೋಗುತ್ತಿದೆ. ಯಾವುದೇ ಗೊಂದಲ ಇಲ್ಲ’ ಎಂದ ಅವರು, ‘ಬಿಜೆಪಿ ಹೋರಾಟದಿಂದ ಬಂದ ಪಕ್ಷ. ಆದರೆ ಈಚೆಗೆ ಹೋರಾಟವನ್ನೇ ಮರೆತ್ತಿದ್ದೇವೆ. ಮತ್ತೆ ಹೋರಾಟದ ರಾಜಕೀಯ ಮಾಡಬೇಕು’ ಎಂದರು.
ದಕ್ಷಿಣ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಆನಂದರಾವ್ ಸಿಂಧೆ ಪದಗ್ರಹಣ ಸ್ವೀಕರಿಸಿದರು. ಪಾಲಿಕೆಯ ವಿಜೇತರಿಗೆ ಮತ್ತು ಪರಾಜಿತರನ್ನು ಸನ್ಮಾನಿಸಲಾಯಿತು.
ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿದ್ದ ರಾಜನಹಳ್ಳಿ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್.ಎ. ರವೀಂದ್ರನಾಥ್, ಪಕ್ಷದ ಜಿಲ್ಲಾ ಚುನಾವಣಾಧಿಕಾರಿ ದತ್ತಾತ್ರಿ, ಸಹ ಚುನಾವಣಾಧಿಕಾರಿ ಎನ್.ಇ. ಜೀವನಮೂರ್ತಿ, ಪಕ್ಷದ ಮುಖಂಡರಾದ ರಮೇಶ ನಾಯ್ಕ್, ಧನಂಜಯ ಕಡ್ಲೇಬಾಳ್, ಮಂಜುನಾಥ, ಪಿ.ಸಿ. ಶ್ರೀನಿವಾಸ ಭಟ್, ಹೇಮಂತ್ ಕುಮಾರ್, ಹನುಮಂತರಾಯಪ್ಪ, ಎಚ್.ಎನ್.ಶಿವಕುಮಾರ್, ಸಂಗಣ್ಣ ಗೌಡ, ವೈ. ಮಲ್ಲೇಶ್, ಸತೀಶ್ ಅವರೂ ಇದ್ದರು.
ನಮ್ಮವರಿಂದಲೇ ಬೆನ್ನಿಗೆ ಚೂರಿ
ನಮ್ಮವರೇ ಬೆನ್ನಿಗೆ ಚೂರಿ ಹಾಕಿದ್ದರಿಂದ ಪಾಲಿಕೆ ಚುನಾವಣೆಯಲ್ಲಿ ಒಂದೆರಡು ಸೀಟುಗಳು ಕಡಿಮೆಯಾದವು. ಯಾರು ಚೂರಿ ಹಾಕಿದ್ದಾರೆ ಎಂಬುದು ಗೊತ್ತು. ಅವರ್ಯಾರೂ ಇಂದು ಸಭೆಗೆ ಬಂದಿಲ್ಲ. ಅವರ ಬಗ್ಗೆ ಮಾತನಾಡುವುದಿಲ್ಲ. ಕಡಿಮೆಯಾದ ಒಂದೆರಡು ಸೀಟುಗಳ ಕೊರತೆಯನ್ನು ಕಾರ್ಯಕರ್ತರು, ಜಿಲ್ಲಾ ಮುಖಂಡರು, ರಾಜ್ಯ ನಾಯಕರು ಸೇರಿ ನಿಭಾಯಿಸುತ್ತಾರೆ. ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.
ಸೋತವರು ನಿರಾಶರಾಗಬೇಡಿ. ನಾನು ನಾಲ್ಕು ಬಾರಿ ಸೋತಿದ್ದೇನೆ. ಕೇರಳದಲ್ಲಿ ನಮ್ಮ ಪಕ್ಷದವರೊಬ್ಬರು 9 ಬಾರಿ ಸೋತಿದ್ದರು. 10ನೇ ಬಾರಿ ಗೆದ್ದಿದ್ದರು. ಹಾಗಾಗಿ ನನಗೂ ಇನ್ನು 5 ಅವಕಾಶಗಳಿವೆ. ನಿಮಗೂ ಮುಂದೆ ಅವಕಾಶ ಇದೆ ಎಂದರು.
‘1990ರಲ್ಲಿ ಶಂಕರನಾರಾಯಣ ಅವರೊಬ್ಬರೇ ನಗರಸಭೆಯ ಸದಸ್ಯರಾಗಿದ್ದರು. ಆಗ ನಡೆದಿದ್ದ ಅಡ್ವಾಣಿ ರಥಯಾತ್ರೆಯ ಸಂದರ್ಭದಲ್ಲಿ 8 ಮಂದಿ ಗುಂಡೇಟಿಗೆ ಬಲಿಯಾಗಿದ್ದರು. 74 ಮಂದಿ ಗುಂಡೇಟು ತಿಂದಿದ್ದರು. ಅದರಲ್ಲಿ ನಾನೂ ಒಬ್ಬ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.