ಬಸವಾಪಟ್ಟಣ: ಈ ಬಾರಿ ನಿರಂತರವಾಗಿ ಸುರಿದ ಮಳೆಯಿಂದ ಟೊಮೆಟೊ ಫಸಲಿಗೆ ಕೊಳೆ ರೋಗ ತಗುಲಿದ್ದು, ಇಳುವರಿ ಕಡಿಮೆಯಾಗಿರುವುದರಿಂದ ರೈತರು ಆತಂಕಗೊಂಡಿದ್ದಾರೆ.
ಒಂದು ಎಕರೆಯಲ್ಲಿ ಟೊಮೆಟೊ ಬೆಳೆಯಲು ಕನಿಷ್ಠ ₹ 1 ಲಕ್ಷ ವೆಚ್ಚವಾಗುತ್ತದೆ. ದಿನನಿತ್ಯದ ಈ ತರಕಾರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಸಾಕಷ್ಟು ಬಂಡವಾಳ ತೊಡಗಿಸಿ ಬೆಳೆದಿದ್ದೆವು. ಆದರೆ, ಸತತ ಸುರಿಯುತ್ತಿರುವ ಮಳೆಯಿಂದ ಕೊಳೆರೋಗ ತಗುಲಿ ಬೆಳೆ ನಾಶವಾಗುತ್ತಿದೆ. ಉತ್ಪಾದನೆ ಕಡಿಮೆಯಾಗಿ ಪೂರೈಕೆಯೂ ಇಲ್ಲದೇ 25 ಕೆ.ಜಿ. ತೂಗುವ ಒಂದು ಕ್ರೇಟ್ ಟೊಮೆಟೊ ಬೆಲೆ ಈಗ ₹ 800 ರಿಂದ ₹ 1000ಕ್ಕೆ ಏರಿಕೆಯಾಗಿದೆ ಎಂದು ಇಲ್ಲಿನ ಟೊಮೆಟೊ ಬೆಳೆಗಾರ ಜಫ್ರುಲ್ಲಾ ಸಾಹೇಬ್ ತಿಳಿಸಿದರು.
ಟೊಮೆಟೊ ಮೂರು ತಿಂಗಳ ಬೆಳೆಯಾಗಿದ್ದು, ನರ್ಸರಿಗಳಿಂದ ಸಸಿಗಳನ್ನು ತಂದು ನಾಟಿ ಮಾಡಿದ್ದೆವು. ಗೊಬ್ಬರ ಹಾಕಿ, ಔಷಧ ಸಿಂಪಡಿಸಿ ಚೆನ್ನಾಗಿ ಆರೈಕೆ ಮಾಡಿದ್ದೆವು. ಆದರೆ, ಮಳೆಯು ಉತ್ತಮ ಆದಾಯದ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಇನಾಯತ್ ಉಲ್ಲಾ ಬೇಸರ ವ್ಯಕ್ತಪಡಿಸಿದರು.
‘ನಮಗೆ ಸ್ವಂತ ಜಮೀನಿಲ್ಲ. ಜಮೀನು ಗುತ್ತಿಗೆ ಪಡೆದು ಇಡೀ ವರ್ಷ ನಿರಂತರವಾಗಿ ಟೊಮೆಟೊ ಬೆಳೆಯುತ್ತೇವೆ. ಆದರೆ, ಮಳೆಗೆ ಬೆಳೆ ಆಹುತಿಯಾಗಿದೆ’ ಎಂದು ರೈತ ಪಿ.ನೂರ್ ಅಹಮ್ಮದ್ ತಿಳಿಸಿದರು.
ಟೊಮೆಟೊ ಕೆ.ಜಿ.ಗೆ ₹ 50 ರಿಂದ ₹ 60ಕ್ಕೆ ಮಾರಾಟವಾಗುತ್ತಿದೆ. ಕೊಳೆ ರೋಗದಿಂದ ಫಸಲು ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಕೆ.ಜಿ. ಬೆಲೆ ₹ 100ರವರೆಗೂ ಏರುವ ಸಾಧ್ಯತೆ ಇದೆ’ ಎಂದು ತರಕಾರಿ ವ್ಯಾಪಾರಿ ಶೌಕತ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.