ADVERTISEMENT

ಪಿಯುಸಿ, ಎಸ್ಸೆಸ್ಸೆಲ್ಸಿ: ಅಣ್ಣ–ತಂಗಿಯ ಸಾಧನೆಗೆ ಅಡ್ಡಿಯಾಗದ ಅಂಧತ್ವ

ಬೆರಗು ಮೂಡಿಸಿದ ಕಿರಣ್‌– ದೀಪಾ

ಬಾಲಕೃಷ್ಣ ಪಿ.ಎಚ್‌
Published 21 ಜೂನ್ 2022, 4:39 IST
Last Updated 21 ಜೂನ್ 2022, 4:39 IST
ಜಿ.ಟಿ. ಕಿರಣ್‌ ಮತ್ತು ಜಿ.ಟಿ. ದೀಪಾ
ಜಿ.ಟಿ. ಕಿರಣ್‌ ಮತ್ತು ಜಿ.ಟಿ. ದೀಪಾ   

ದಾವಣಗೆರೆ: ‘ಹುಟ್ಟಿನಿಂದಲೇ ಹೊರಗಣ್ಣು ಕಾಣದಿದ್ದರೂ, ಒಳಗಣ್ಣಿಗೆ ಕತ್ತಲೆ ಕವಿದಿಲ್ಲ’ ಎಂಬುದನ್ನು ಈ ಅಣ್ಣ–ತಂಗಿ ಸಾಧಿಸಿ ತೋರಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಣ್ಣ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಂಗಿ ಶೇ 95ಕ್ಕಿಂತ ಅಧಿಕ ಅಂಕಗಳಿಸಿ ಬೆರಗು ಮೂಡಿಸಿದ್ದಾರೆ.

ಜಿಲ್ಲೆಯ ಜಗಳೂರು ತಾಲ್ಲೂಕಿನ ದೊಣೆಹಳ್ಳಿಯ ತಿಪ್ಪೇಸ್ವಾಮಿ ಮತ್ತು ಪವಿತ್ರಾ ದಂಪತಿಯ ಅಂಧ ಮಕ್ಕಳಾದಜಿ.ಟಿ. ಕಿರಣ್‌ ಮತ್ತು ಜಿ.ಟಿ. ದೀಪಾ ಈ ಸಾಧನೆ ಮಾಡಿದವರು.

ದಾವಣಗೆರೆಯ ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಜಿ.ಟಿ. ಕಿರಣ್‌ ಈ ಬಾರಿಯ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 573 (ಶೇ 95.5) ಅಂಕ ಗಳಿಸಿದ್ದು, ದಾವಣಗೆರೆ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿನಿಯಾಗಿರುವ ಜಿ.ಟಿ. ದೀಪಾ ಇತ್ತೀಚೆಗೆ ಪ್ರಕಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ 601 (ಶೇ 96.16) ಅಂಕ ಗಳಿಸಿದ್ದಾರೆ.

ADVERTISEMENT

‘ತಂದೆ, ತಾಯಿಯ ಕಾಳಜಿ, ಶಿಕ್ಷಕರ ಪ್ರೋತ್ಸಾಹ ಮತ್ತು ಸ್ನೇಹಿತರ ಸಹಕಾರದಿಂದ ಇಷ್ಟು ಅಂಕ ಗಳಿಸಲು ಸಾಧ್ಯವಾಗಿದೆ. ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ಓದುತ್ತಿರುವ ಕುಸುಮಾ ಎಂಬ ವಿದ್ಯಾರ್ಥಿನಿ ನನಗೆ ಪರೀಕ್ಷೆ ಬರೆಯಲು ಸಹಕರಿಸಿದರು. ನಾನು ಹೇಳಿದ ಉತ್ತರಗಳನ್ನು ಬರೆಯಲು ಅವರು ಸಹಾಯ ಮಾಡಿದ್ದರು. ನನ್ನ ಸ್ನೇಹಿತರು ಯಾವಾಗಲೂ ಪಠ್ಯದ ಬಗ್ಗೆ ಚರ್ಚಿಸುತ್ತಿದ್ದರು. ಎಲ್ಲ ಪಾಠವನ್ನು ಚೆನ್ನಾಗಿ ಕೇಳಿಸಿಕೊಳ್ಳುತ್ತಿದ್ದೆ. ರಾತ್ರಿ ಮಾತ್ರ ಓದುತ್ತಿದ್ದೆ’ ಎಂದು ಕಿರಣ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮುಂದೆ ಬಿ.ಎ. ಓದಬೇಕು. ಬಳಿಕ ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಿ ಐಎಎಸ್‌ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕು. ಜೀವನದ ಸವಾಲುಗಳನ್ನು ಗೆಲ್ಲಬೇಕು’ ಎಂದು ಅವರು ತಮ್ಮ ಕನಸುಗಳನ್ನು ಬಿಚ್ಚಿಟ್ಟರು.

‘ಅಪ್ಪ, ಅಮ್ಮ, ಶಿಕ್ಷಕರು ಮಾತ್ರವಲ್ಲದೆ, ಅಣ್ಣನ ಪ್ರೋತ್ಸಾಹದಿಂದ ನನಗೆ ಶೇ 96ರಷ್ಟು ಅಂಕ ಪಡೆಯಲು ಸಾಧ್ಯವಾಗಿದೆ. ಪಾಠದ ಜತೆಗೆ ಹಿಂದೂಸ್ತಾನಿ ಸಂಗೀತವನ್ನೂ ಅಭ್ಯಸಿಸುತ್ತಿದ್ದೇನೆ. ಶೇ 87 ಅಂಕ ಪಡೆದು ಜೂನಿಯರ್‌ ಪಾಸ್‌ ಮಾಡಿದ್ದೇನೆ. ಪಿಯುಸಿ ಬಳಿಕ ಬಿ.ಎ. ಪದವಿ ಪಡೆಯಬೇಕು. ಜತೆಗೆ ಸಂಗೀತದಲ್ಲಿ ಸಾಧನೆ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದೇನೆ’ ಎಂದು ಸೋದರಿ ದೀಪಾ ತಿಳಿಸಿದರು.

‘ಮಕ್ಕಳು ಮೊದಲು ಬೆಳಗಾವಿಯ ಶಾಲೆಯಲ್ಲಿ ಓದುತ್ತಿದ್ದರು. ನಂತರ ಅವರಿಗಾಗಿಯೇ ದಾವಣಗೆರೆಯಲ್ಲಿ ಮನೆ ಮಾಡಿ, ಅಂಧ ಮಕ್ಕಳ ಶಾಲೆಗೆ ಸೇರಿಸಿದೆವು. ಇಲ್ಲಿ ಬ್ರೈಲ್‌ ಲಿಪಿಯ ಸಹಾಯದೊಂದಿಗೆ ಅಭ್ಯಾಸ ಮಾಡಿದ್ದಾರೆ. ಕಿರಣ್‌ ಕಠಿಣ ಪರಿಶ್ರಮಿ. ಪಾಠ ಅರ್ಥ ಆಗುವಲ್ಲಿ ಗೊಂದಲ ಮೂಡಿದಾಗ ಶಿಕ್ಷಕರು ಪರಿಹರಿಸುತ್ತಿದ್ದರು. ಸ್ನೇಹಿತರ ಜತೆಗೂ ಚರ್ಚಿಸುತ್ತಿದ್ದ. ತಂಗಿಗೂ ಹೇಳಿಕೊಡುತ್ತಿದ್ದ. ದೀಪಾ ಕೂಡ ಅಣ್ಣನ ದಾರಿಯಲ್ಲೇ ಸಾಗುತ್ತಿದ್ದಾಳೆ. ಅವರಿಬ್ಬರೂ ಬಯಸಿದ್ದನ್ನು ಸಾಧಿಸಲು ಪ್ರೋತ್ಸಾಹ ನೀಡುತ್ತೇವೆ’ ಎಂದು ಭರಮಸಮುದ್ರದಲ್ಲಿ ಶಿಕ್ಷಕರಾಗಿರುವ ತಂದೆ ತಿಪ್ಪೇಸ್ವಾಮಿ, ಗೃಹಿಣಿಯಾಗಿರುವ ತಾಯಿ ಪವಿತ್ರಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.