ADVERTISEMENT

ದೇಹ, ಮನಸ್ಸು ಸೂಟಿಗೆ ತರಬೇತಿ ಅಗತ್ಯ : ರಂಗತಜ್ಞ ಎಂ.ಜಿ. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 9:06 IST
Last Updated 2 ಜನವರಿ 2020, 9:06 IST
ದಾವಣಗೆರೆಯಲ್ಲಿ ಆಯೋಜಿಸಿದ್ದ ರಂಗ ತರಬೇತಿ ಕಾರ್ಯಾಗಾರವನ್ನು ರಂಗತಜ್ಞ ಡಾ ಎಂ.ಜಿ. ಈಶ್ವರಪ್ಪ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಆಯೋಜಿಸಿದ್ದ ರಂಗ ತರಬೇತಿ ಕಾರ್ಯಾಗಾರವನ್ನು ರಂಗತಜ್ಞ ಡಾ ಎಂ.ಜಿ. ಈಶ್ವರಪ್ಪ ಉದ್ಘಾಟಿಸಿದರು   

ದಾವಣಗೆರೆ: ರಂಗಕಲೆಯಲ್ಲಿ ಪರಿಣಿತರಾಗಬೇಕಿದ್ದರೆ, ಪಕ್ವತೆ ಗಳಿಸಬೇಕಿದ್ದರೆ ದೇಹ ಮತ್ತು ಮನಸ್ಸು ಸೂಟಿ (ಚುರುಕು) ಆಗಿರಬೇಕು. ಅದಕ್ಕೆ ತರಬೇತಿ ಅಗತ್ಯ ಎಂದು ರಂಗತಜ್ಞ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.

ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗಾಗಿ ಕರ್ನಾಟಕ ನಾಟಕ ಅಕಾಡೆಮಿ ಹಮ್ಮಿಕೊಂಡಿರುವ ರಂಗ ತರಬೇತಿಯನ್ನು ಕುವೆಂಪುನಗರ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ವೃತ್ತಿ ರಂಗಭೂಮಿಯವರು ದೇಹ ಮತ್ತು ಮಾತನ್ನು ಸೂಟಿಯಾಗಿ ಇಟ್ಟುಕೊಳ್ಳುತ್ತಾರೆ. ಬೆಳಿಗ್ಗೆ ಎದ್ದು ದೈಹಿಕ ವ್ಯಾಯಾಮ ಮಾಡಿಕೊಳ್ಳಬೇಕು. ಧ್ವನಿ ಏರಿಳಿತನವನ್ನು ಕಲಿಯಬೇಕು. ಮೈಕ್‌ ಇಲ್ಲದೆಯೇ ಮೊದಲ ಸಾಲಿನಲ್ಲಿರುವವರಿಗೆ ತಲುಪಿದಷ್ಟೇ ಪರಿಣಾಮಕಾರಿಯಾಗಿ ಕೊನೇ ಸಾಲಿನವರಿಗೂ ಧ್ವನಿ ತಲುಪಬೇಕು ಎಂದು ಸಲಹೆ ನೀಡಿದರು.

ADVERTISEMENT

ಯಾವುದೇ ಪ್ರಕಾರದಲ್ಲಿ ಕೆಲಸ ಮಾಡಬೇಕಿದ್ದರೆ ಸಣ್ಣ ಸಿದ್ಧತೆ, ತರಬೇತಿ ಇರಬೇಕು. ಹಿಂದೆ ನಾವು ಮಾಡಿದ್ದೇ ನಾಟಕವಾಗಿತ್ತು. ಆದರೆ ಈಗ ಗಂಭೀರ ಪ್ರೇಕ್ಷಕರು ನಮ್ಮ ಮುಂದಿದ್ದಾರೆ. ಈಗ ಟಿ.ವಿ. ನೋಡುತ್ತಾರೆ. ಸಂಪರ್ಕ ಸಾಧ್ಯತೆ ಹೆಚ್ಚಾಗಿರುವುದರಿಂದ ಜಗತ್ತು ಸುತ್ತುತ್ತಾರೆ. ಜಗತ್ತು ಸುತ್ತದವರೂ ಕೈಯಲ್ಲಿರುವ ಮೊಬೈಲಲ್ಲೇ ಜಗತ್ತನ್ನು ನೋಡುತ್ತಿರುತ್ತಾರೆ. ಅವರನ್ನು ಆಕರ್ಷಿಸುವುದು ಸುಲಭವಲ್ಲ. ಗಟ್ಟಿತನ ಇಲ್ಲದೇ ಇದ್ದರೆ ನಿಮ್ಮನ್ನು ಬೇಗನೇ ಹಗುರವಾಗಿ ಪರಿಗಣಿಸುತ್ತಾರೆ ಎಂದು ಎಚ್ಚರಿಸಿದರು.

ಹಾವಾಡಿಗ ಹೇಗೆ ಜನರನ್ನು ಆಕರ್ಷಿಸುತ್ತಾನೋ ಅಂಥ ಆಕರ್ಷಣೆ ನಟನಿಗೂ ಇರಬೇಕು. ಉತ್ತಮ ತರಬೇತಿ ಜತೆಗೆ ನಾಟಕಗಳನ್ನು, ನಾಟಕಕಾರರನ್ನು, ನಿರ್ದೇಶಕರನ್ನು ತಿಳಿದುಕೊಂಡರೆ, ಉತ್ತಮ ಓದು ಇದ್ದರೆ, ಸ್ವ ಅನುಭವ ಅದಕ್ಕೆ ಸೇರಿದರೆ ಉತ್ತಮ ನಟ, ಉತ್ತಮ ನೇಪತ್ಯ ರಂಗಕರ್ಮಿ, ಉತ್ತಮ ನಿರ್ದೇಶಕ, ಉತ್ತಮ ಬೆಳಕಿನ ವಿನ್ಯಾಸಕಾರ, ಉತ್ತಮ ಪ್ರಸಾದನಕಾರ ಆಗಬಲ್ಲಿರಿ ಎಂದರು.

ಸಾಹಿತ್ಯ, ಸಂಗೀತ, ನೃತ್ಯ, ಕಲೆ, ಪ್ರಸಾದನ ಎಲ್ಲವೂ ಪ್ರತ್ಯೇಕ ಪ್ರಕಾರಗಳು. ಅವೆಲ್ಲ ಸೇರಿ ರಂಗಕಲೆಯಾಗುತ್ತದೆ. ರಂಗಕಲೆ ಮನರಂಜನೆಗೆ ಸೀಮಿತವಲ್ಲ. ಅದು ಸಮಸಮಾಜದ, ಸುಖಿ ಸಮಾಜದ ಕನಸನ್ನು ಬಿತ್ತುತ್ತದೆ. ಪರಿವರ್ತನೆಯ ರಂಗವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ. ಆರ್‌. ಭೀಮಸೇನ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸಂಪನ್ನ ಮುತಾಲಿಕ್‌ ಅತಿಥಿಯಾಗಿದ್ದರು. ಅಕಾಡೆಮಿ ಸದಸ್ಯ ಯಶವಂತ ಸರದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದ ನಿರ್ದೇಶಕ ಪ್ರದೀಪ್‌ ಆರ್‌. ಮುಧೋಳ ಇದ್ದರು. ಸಂಪನ್ಮೂಲ ವ್ಯಕ್ತಿ ಎಸ್‌.ಎಸ್‌. ಸಿದ್ಧರಾಜು ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.