ದಾವಣಗೆರೆ: ಜೀವನ ಹಾಗೂ ನೈತಿಕ ಮೌಲ್ಯ ಹೊಂದಿದ ಹಳೆಗನ್ನಡ ಸಾಹಿತ್ಯವನ್ನು ಮುಂದಿನ ತಲೆಮಾರಿಗೆ ದಾಟಿಸುವ ಅಗತ್ಯವಿದೆ. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕಾರ್ಯವನ್ನು ಕೈಗೆತ್ತಿಕೊಂಡರೆ ಅನುಕೂಲ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕುಮಾರಚಲ್ಯ ಅಭಿಪ್ರಾಯಪಟ್ಟರು.
ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ, ಸಂವಹನ ಪ್ರಕಾಶನ, ಮಳಲ್ಕೆರೆ ಗುರುಮೂರ್ತಿ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಳಲ್ಕೆರೆ ಗುರುಮೂರ್ತಿ ಅವರು ವ್ಯಾಖ್ಯಾನಿಸಿರುವ ‘ಸೋಮೇಶ್ವರ ಶತಕ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
‘ಹಳೆಗನ್ನಡ ಸಾಹಿತ್ಯ ಮೂಲೆಗುಂಪಾಗಿದೆ. ಮಧ್ಯಕಾಲೀನ ಕನ್ನಡ ಸಾಹಿತ್ಯವೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವಚನಗಳನ್ನು ಅರ್ಥ ಮಾಡಿಕೊಳ್ಳದ ದುರಂತದ ಕಾಲಘಟ್ಟದಲ್ಲಿದ್ದೇವೆ. ಹಳೆಗನ್ನಡ ಸಾಹಿತ್ಯದ ಬಗ್ಗೆ ಮಾತನಾಡುವವರನ್ನು ಪಂಡಿತರನ್ನಾಗಿ ಬಿಂಬಿಸಿ ದೂರ ಇಡಲಾಗಿದೆ. ಈ ಸಾಹಿತ್ಯದಲ್ಲಿ ಏನು ಲೋಪವಿದೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ವ್ಯಾಕರಣ, ಛಂದಸ್ಸು ಸಹಿತ ಹಳೆಗನ್ನಡ ಓದಿ ಬೋಧನೆ ಮಾಡುವ ಪ್ರಾಧ್ಯಾಪಕರ ಸಂಖ್ಯೆ ಕಡಿಮೆಯಾಗಿದೆ. ಲಯ, ಪ್ರಾಸ, ಅರ್ಧ ವಿರಾಮ ಹಾಗೂ ಪೂರ್ಣ ವಿರಾಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ಪ್ರಾಧ್ಯಾಪಕರಾಗಿದ್ದಾರೆ. ಪಂಪನ ಕಾವ್ಯ ಓದಲು ಸಾಧ್ಯ ಆಗದ ಸ್ಥಿತಿ ತಲುಪಿದ್ದು ವಿಪರ್ಯಾಸ. ಹಳೆಗನ್ನಡದ ಮೂಲ ಕಾವ್ಯ, ಪಠ್ಯಗಳನ್ನು ಪ್ರಾಧ್ಯಾಪಕರು ಸರಿಯಾದ ಕ್ರಮದಲ್ಲಿ ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.
‘ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದ ಕನ್ನಡ ಸಾಹಿತ್ಯಕ್ಕೆ ಪುರಸ್ಕಾರ ಸಿಗುತ್ತಿಲ್ಲ. ಸಾಹಿತ್ಯ ಓದುವ ಗಾಂಭೀರ್ಯ, ಶಿಸ್ತು, ಬದ್ಧತೆ ಕಾಣುತ್ತಿಲ್ಲ. ಓದುಗರಿಗೂ ಭಾಮಿನಿ ಷಟ್ಪದಿಯ ಕಾವ್ಯ ಬೇಕಾಗಿಲ್ಲ. ಕಾವ್ಯ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದ್ದು ಓದುಗರ ದೌರ್ಬಲ್ಯ ಕೂಡ ಹೌದು. ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ, ಬಂಡಾಯದ ಹೆಸರಿನಲ್ಲಿ ಕನ್ನಡ ಸಾಹಿತ್ಯ ವಿಭಜನೆ ಮಾಡಿದ್ದು ಸರಿಯಲ್ಲ’ ಎಂದು ಹೇಳಿದರು.
‘ಪ್ರತಿಭೆ ಮತ್ತು ಪಾಂಡಿತ್ಯದ ಸಂಗಮವೇ ಕಾವ್ಯ ವಾಚನ. ಶಬ್ದಾರ್ಥ ಸಹಿತ ಕಾವ್ಯ ವ್ಯಾಖ್ಯಾನ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು. ಹಳೆಗನ್ನಡ ಹಾಗೂ ಮಧ್ಯಕಾಲೀನ ಸಾಹಿತ್ಯ ಅರ್ಥ ಮಾಡಿಕೊಳ್ಳಲು ಸೂಕ್ಷ್ಮ ಗುಂಪು ಬೇಕಾಗಿದೆ. ಕನ್ನಡದಲ್ಲಿ ಯುವ ವಿದ್ವಾಂಸರು ಹುಟ್ಟಬೇಕು. ಶಿಕ್ಷಣ ಕ್ಷೇತ್ರ ಕೂಡ ಭ್ರಷ್ಟವಾಗಿರುವ ಕಾಲದಲ್ಲಿ ಅಪ್ಪಟ ಪ್ರಾಧ್ಯಾಪಕರನ್ನು ಹುಡುಕುವುದು ಕಷ್ಟವಲ್ಲವೇ’ ಎಂದು ಪ್ರಶ್ನಿಸಿದರು.
ನಿವೃತ್ತ ಪ್ರಾಧ್ಯಾಪಕ ಸಿ.ವಿ.ಪಾಟೀಲ್, ಸಹಾಯಕ ಪ್ರಾಧ್ಯಾಪಕ ಹಾ.ಮ.ನಾಗಾರ್ಜುನ, ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ, ತಾಲ್ಲೂಕು ಘಟಕದ ಅಧ್ಯಕ್ಷೆ ಸುಮತಿ ಜಯಪ್ಪ ಮಳಲ್ಕೆರೆ ಗುರುಮೂರ್ತಿ ಇದ್ದರು. ಅಮೂಲ್ಯ ಎಸ್.ಕಟ್ಟಿ ಅವರ ಗಮಕ ವಾಚನಕ್ಕೆ ಜಗನ್ನಾಥರಾವ್ ವ್ಯಾಖ್ಯಾನ ನೀಡಿದರು.
ಗುರುಮೂರ್ತಿ ನಾಲ್ಕು ಸಾವಿರಕ್ಕೂ ಹೆಚ್ಚು ತ್ರಿಪದಿ ಬರೆದಿದ್ದಾರೆ. ಭಾಮಿನಿ ಷಟ್ಪದಿ ಅವರಿಗೆ ಸಿದ್ಧಿಸಿದ್ದು 200ಕ್ಕೂ ಹೆಚ್ಚು ಪದ್ಯ ರಚಿಸಿದ್ದಾರೆ. ಇನ್ನಷ್ಟು ಕಾವ್ಯ ಹೊರಬಂದು ಕನ್ನಡ ಸಾಹಿತ್ಯದ ಮಡಿಲು ತುಂಬಲಿ.ನಾಗರಾಜ ಸಿರಿಗೆರೆ ಪ್ರಾಧ್ಯಾಪಕ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.