ADVERTISEMENT

ಬ್ರ್ಯಾಂಡ್ ದಾವಣಗೆರೆ: ಜವಳಿ ಪಾರ್ಕ್‌ಗೆ ಬೇಕು ಜೀವಾನಿಲ

ಜವಳಿ ಕೈಗಾರಿಕೆ ಆರಂಭಕ್ಕಾಗಿ 72 ಮಂದಿಗೆ ನಿವೇಶನ ಹಂಚಿಕೆ l ಕೆಲವೇ ಘಟಕಗಳ ಕಾರ್ಯಾಚರಣೆ

ಅನಿತಾ ಎಚ್.
Published 22 ಅಕ್ಟೋಬರ್ 2021, 4:11 IST
Last Updated 22 ಅಕ್ಟೋಬರ್ 2021, 4:11 IST
ದಾವಣಗೆರೆ ನಗರಕ್ಕೆ ಸಮೀಪದ ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಜವಳಿ ಪಾರ್ಕ್‌ ನೋಟ. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌
ದಾವಣಗೆರೆ ನಗರಕ್ಕೆ ಸಮೀಪದ ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಜವಳಿ ಪಾರ್ಕ್‌ ನೋಟ. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌   

ದಾವಣಗೆರೆ: ಡಿಸಿಎಂ ಟೌನ್ (ದಾವಣಗೆರೆ ಕಾಟನ್ ಮಿಲ್) ಎಂದರೆ 1970–80ರ ದಶಕದಲ್ಲಿ ದೇಶದಲ್ಲಿಯೇ ಹೆಸರುವಾಸಿ. ಇದರಿಂದಲೇ ದಾವಣಗೆರೆಗೆ ‘ಮ್ಯಾಂಚೆಸ್ಟರ್ ಆಫ್ ಕರ್ನಾಟಕ’ ಎಂಬ ಹೆಸರಿತ್ತು. ಕಾಲಾಂತರದಲ್ಲಿ ನಾನಾ ಕಾರಣಗಳಿಂದಾಗಿ ಕಾಟನ್‌ ಮಿಲ್ ಮುಚ್ಚಿಹೋಯಿತು. ಕಾಟನ್ ಮಿಲ್‌ಗಳ ಗತವೈಭವವನ್ನು ಮರುಸ್ಥಾಪಿಸುವ, ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದಿಂದ ನಗರದಲ್ಲಿ ಜವಳಿ ಪಾರ್ಕ್ ನಿರ್ಮಿಸಲಾಗಿದೆ. ಜೀವಾನಿಲದ ಕೊರತೆಯ ಕಾರಣದಿಂದ ಜವಳಿ ಪಾರ್ಕ್‌ ಅಸ್ತಿತ್ವಕ್ಕೆ ಧಕ್ಕೆ ಎದುರಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ನಗರಕ್ಕೆ ಸಮೀಪದ ಕರೂರು ಗ್ರಾಮದಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲು 2002–2003ರಲ್ಲಿ ರೈತರಿಂದ 142.25 ಎಕರೆ ಭೂಮಿ ವಶಪಡಿಸಿಕೊಂಡಿತು. ಇದರಲ್ಲಿ 64 ಎಕರೆಯನ್ನು ಜವಳಿ ಪಾರ್ಕ್‌ಗಾಗಿ ಮೀಸಲಿರಿಸಿತು. ಗಾರ್ಮೆಂಟ್ಸ್, ವೀವಿಂಗ್, ಜಿನ್ನಿಂಗ್, ಪ್ರೆಸ್ಸಿಂಗ್, ಸ್ಪಿನ್ನಿಂಗ್, ಪ್ರೊಸೆಸಿಂಗ್ ಮುಂತಾದ ಘಟಕಗಳ ಸ್ಥಾಪನೆಗೆ ಒಟ್ಟು 72 ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನಗಳನ್ನು 2008ರಿಂದ ಹಂಚಿಕೆ ಮಾಡಿತು. ನಿವೇಶನ ಪಡೆದ ಎರಡು ವರ್ಷಗಳ ಒಳಗೆ ಉದ್ಯಮ ಸ್ಥಾಪಿಸಬೇಕೆಂಬ ನಿಯಮವಿದೆ. ಆದರೆ, ಇಲ್ಲಿ ಕೆಲವೇ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಒಂದಷ್ಟು ಮಂದಿ ಕಟ್ಟಡವನ್ನು ನಿರ್ಮಿಸಿ, ಯಂತ್ರಗಳನ್ನು ತಂದು ಹಾಕಿ ಉದ್ಯಮವನ್ನೇ ಆರಂಭಿಸಲಿಲ್ಲ. ಮತ್ತೊಂದಷ್ಟು ಮಂದಿ ಉದ್ಯಮ ಆರಂಭಿಸಿ ಕೆಲ ವರ್ಷಗಳ ನಂತರದಲ್ಲಿ ಬಾಗಿಲು ಮುಚ್ಚಿದ್ದಾರೆ. ಫರ್ನಿಚರ್‌ಗಳು, ಪೈಪ್‌ಗಳನ್ನು ದಾಸ್ತಾನು ಮಾಡಲು, ಊದುಬತ್ತಿ ತಯಾರಿಕೆ, ಗ್ಯಾರೇಜ್ ಇತ್ಯಾದಿ ಉದ್ದೇಶಗಳಿಗೆ ಕಟ್ಟಡಗಳನ್ನು ಬಾಡಿಗೆಗೆ ನೀಡಿದ್ದಾರೆ ಎಂದು ಕೆಲ ಜವಳಿ ಉದ್ಯಮಿಗಳು ಆರೋಪಿಸಿದ್ದಾರೆ.

ಜವಳಿ ಉದ್ಯಮಕ್ಕೆ ಪೂರಕವಾದ ಘಟಕಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗದಿರುವುದರಿಂದ ಈಗಾಗಲೇ ಜವಳಿ ಕೈಗಾರಿಕೆಗಳನ್ನು ಆರಂಭಿಸಿರುವವರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಜವಳಿ ಕೈಗಾರಿಕೆಗೆ ದಾರ ಸೇರಿ ಅಗತ್ಯ ಕಚ್ಚಾವಸ್ತುಗಳನ್ನು ಬೆಂಗಳೂರು ಅಥವಾ ಹೊರರಾಜ್ಯಗಳಿಂದ ತರಿಸಬೇಕಿದೆ. ಕೆಲವೇ ಘಟಕಗಳಿರುವ ಕಾರಣ ಬೆಂಗಳೂರು ಮುಂತಾದೆಡೆಗಳಿಂದ ಕೊಳ್ಳುವವರೂ ಇಲ್ಲಿಗೆ ಬರಲು ಆಸಕ್ತಿ ತೋರಿಸುತ್ತಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಜವಳಿ ಪಾರ್ಕ್ ಅಭಿವೃದ್ಧಿಗೆ ಗಮನ ನೀಡಬೇಕು. ಹಲವರು ಜವಳಿ ಉದ್ಯಮ ಸ್ಥಾಪಿಸಲು ಆಸಕ್ತಿ ಹೊಂದಿದ್ದು, ಅಂತಹವರಿಗೆ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ಆಟೊಲೂಮ್ ಅಸೋಸಿಯೇಷನ್ ಕಾರ್ಯದರ್ಶಿ ಡಿ. ಶೇಷಾಚಲ ಆಗ್ರಹಿಸಿದ್ದಾರೆ.

ADVERTISEMENT

ಜವಳಿ ಪಾರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವೇ ಘಟಕಗಳಲ್ಲಿ ಮಾನ್ಯವರ್‌, ಫ್ಯೂಚರ್‌ ಗ್ರೂಪ್‌ ವಿವಿಧ ಬ್ರ್ಯಾಂಡ್‌ನ ಬಟ್ಟೆ ಮತ್ತು ಸಿದ್ಧ ಉಡುಪುಗಳು ತಯಾರಾಗುತ್ತಿವೆ. ಪ್ರಿಂಟಿಂಗ್ ಘಟಕದಲ್ಲಿ ಆಕರ್ಷಕವಾದ ಮಹಿಳೆಯರ ಟಾಪ್‌ಗಳು ತಯಾರಾಗುತ್ತಿವೆ. ಕೊರೊನಾ ಕಾರಣ ಮದುವೆ ಸಮಾರಂಭ, ಎಥ್ನಿಕ್ ಡೇಗೆ ಧರಿಸುವ ಉಡುಪುಗಳ ತಯಾರಿ ಸದ್ಯ ಸ್ಥಗಿತಗೊಂಡಿದೆ. ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿ ಸಮವಸ್ತ್ರ, ಶಾಲಾಮಕ್ಕಳ ಸಮವಸ್ತ್ರ ತಯಾರಿಕೆಯನ್ನು ಹೊರರಾಜ್ಯದವರಿಗೆ ನೀಡುವ ಬದಲು ನಗರದ ಜವಳಿ ಉದ್ಯಮಿಗಳಿಗೆ ನೀಡಬೇಕು. ಇದರಿಂದ ಸ್ಥಗಿತಗೊಂಡಿರುವ ಘಟಕಗಳು ಮತ್ತೆ ಕಾರ್ಯ ಆರಂಭಿಸಲು ಸಹಕಾರಿಯಾಗುತ್ತದೆ ಎಂದು ಮನವಿ ಮಾಡುತ್ತಾರೆ ಬಂಜಾರ ಗಾರ್ಮೆಂಟ್ಸ್‌ ಮಾಲೀಕ ಮಂಜುನಾಥ್‌ ನಾಯ್ಕ.

ಜವಳಿ ಉದ್ಯಮದ ಬೆಳವಣಿಗೆಗೆ ಅಗಾಧ ಅವಕಾಶವಿರುವ ದಾವಣಗೆರೆಯಲ್ಲಿ ಸಿದ್ಧ ಉಡುಪು ಘಟಕಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತಾಗಬೇಕು. ಅಗತ್ಯ ಮೂಲಸೌಕರ್ಯ ಕಲ್ಪಿಸುವ ಮೂಲಕ ಜವಳಿ ಪಾರ್ಕ್‌ ಅಭಿವೃದ್ಧಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕು. ಆಗ ಮಾತ್ರ ದಾವಣಗೆರೆಯ ಬ್ರ್ಯಾಂಡ್ ಮೌಲ್ಯ ಹೆಚ್ಚುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಜವಳಿ ಪಾರ್ಕ್‌ನಲ್ಲಿ ಅನ್ಯ ಉದ್ಯಮಕ್ಕೆ ನಿರಾಕರಣೆ

ಜವಳಿ ಉದ್ಯಮ ಆರಂಭಿಸಿ ಬಂದ್ ಮಾಡಿರುವವರು ನಷ್ಟದ ಕಾರಣ ಮುಂದಿಟ್ಟು ಅನ್ಯ ಉದ್ಯಮ ಅಥವಾ ಸೇವಾ ವಲಯ ಆರಂಭಿಸಲು ಅನುಮತಿ ಕೋರಿದ್ದು, ಇದಕ್ಕೆ ಸಮ್ಮತಿಸಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆ ನಿರಾಕರಿಸಿದೆ. ದಾವಣಗೆರೆಯಲ್ಲಿ ಅನ್ಯ ಉದ್ದೇಶಕ್ಕಾಗಿ ನಿವೇಶನ ಬಳಸಲು ಅನುಮತಿ ನೀಡಿದರೆ ರಾಜ್ಯದ ದೊಡ್ಡಬಳ್ಳಾಪುರ, ಬಳ್ಳಾರಿ ಜವಳಿ ಪಾರ್ಕ್‌ಗಳಿಂದಲೂ ಇಂತಹ ಬೇಡಿಕೆಗಳು ಬರಬಹುದು. ಇದರಿಂದ ಜವಳಿ ಪಾರ್ಕ್ ಸ್ಥಾಪನೆ ಉದ್ದೇಶ ಈಡೇರುವುದಿಲ್ಲ ಎಂದು ಸಭೆ ಅಭಿಪ್ರಾಯಪಟ್ಟಿದೆ. ಅನ್ಯ ಉದ್ದೇಶ ಹೊಂದಿರುವವರಿಗೆ ಹರಿಹರದ ಸಾರಥಿ ಕೈಗಾರಿಕಾ ವಲಯದಲ್ಲಿ ಭೂಮಿ ನೀಡಿ, ಜವಳಿ ಉದ್ಯಮ ಸ್ಥಾಪಿಸಲು ಮುಂದೆ ಬರುವವರಿಗೆ ಉತ್ತೇಜನ ನೀಡುವಂತೆ ಸೂಚಿಸಿದೆ. ಸರ್ಕಾರದ ಈ ಆದೇಶ ಕಡತದಲ್ಲಿ ಮಾತ್ರ ಇದ್ದು, ಸ್ಥಳೀಯವಾಗಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಲ ಜವಳಿ ಉದ್ಯಮಿಗಳು ಆರೋಪಿಸಿದ್ದಾರೆ.

ಅನಿಸಿಕೆಗಳು...

ಸೂರತ್, ಅಹಮದಾಬಾದ್, ಮುಂತಾದೆಡೆಗಳಲ್ಲಿ ಜವಳಿ ಪಾರ್ಕ್ ಅನ್ನು ಬಹಳ ಚೆನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಅದು ಇಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಪರಾಮರ್ಶೆ ನಡೆಸಬೇಕು.

–ಡಿ. ಶೇಷಾಚಲ, ಕಾರ್ಯದರ್ಶಿ,ದಾವಣಗೆರೆ ಆಟೊಲೂಮ್ ಅಸೋಸಿಯೇಷನ್

***

ಜವಳಿ ಪಾರ್ಕ್ ಸೇರಿ ಕೈಗಾರಿಕಾ ಪ್ರದೇಶದಲ್ಲಿ ಬೀದಿ ದೀಪಗಳ ನಿರ್ವಹಣೆಗಾಗಿ ಲಕ್ಷಾಂತರ ರೂಪಾಯಿ ಹಣ ಬಿಡುಗಡೆಯಾಗಿದೆ. ಆದರೆ, ಬೀದಿದೀಪಗಳು ಮಾತ್ರ ಹತ್ತುತ್ತಿಲ್ಲ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು.

–ಮಂಜುನಾಥ್‌ ನಾಯ್ಕ, ಅಧ್ಯಕ್ಷ, ದಾವಣಗೆರೆ ಆಟೊಲೂಮ್ ಅಸೋಸಿಯೇಷನ್

***

ಜವಳಿ ಪಾರ್ಕ್‌ನಲ್ಲಿ ನಿವೇಶನ ಪಡೆದಿರುವವರು ಉದ್ಯಮವನ್ನು ನಡೆಸುತ್ತಿಲ್ಲ. ಅವರಿಂದ ಕಟ್ಟಡವನ್ನು ಬಾಡಿಗೆಗೆ ಪಡೆದು ಜವಳಿಗೆ ಸಂಬಂಧಿಸಿದ ಘಟಕವನ್ನು ನಡೆಸುತ್ತಿದ್ದೇವೆ. ಹೊಸದಾಗಿ ಉದ್ದಿಮೆ ಸ್ಥಾಪಿಸಲು ಬಯಸುವರರಿಗೆ ಅವಕಾಶ ಕಲ್ಪಿಸಬೇಕು.

–ಶ್ರೀನಿವಾಸ್, ಈಶ್ವರಿ ಟೆಕ್ಸ್‌ಟೈಲ್ಸ್‌ ಮಾಲೀಕ,ಕರೂರು ಜವಳಿ ಪಾರ್ಕ್, ದಾವಣಗೆರೆ

***

ಸದ್ಯ ಚಾಲ್ತಿಯಲ್ಲಿರುವ ಘಟಕಗಳಲ್ಲಿ ನೂರಾರು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅವರು ಇಲ್ಲಿಗೆ ಬರಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ನಡೆದುಕೊಂಡು ಬರುತ್ತಿದ್ದಾರೆ. ಕನಿಷ್ಠ ಜಿಲ್ಲಾಧಿಕಾರಿ ಕಚೇರಿಯಿಂದ ಜವಳಿ ಪಾರ್ಕ್ ಒಳಗೆ ಬರಲು ವಾಹನದ ವ್ಯವಸ್ಥೆ ಕಲ್ಪಿಸಬೇಕು.

–ನಿರ್ಮಲಾ ರಾಜ್, ಆದಿತ್ಯ ಗಾರ್ಮೆಂಟ್ಸ್,ಕರೂರು ಜವಳಿ ಪಾರ್ಕ್, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.