ಹುಬ್ಬಳ್ಳಿ: ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಹುಬ್ಬಳ್ಳಿ ಸಿಟಿಬಿಆರ್‌ಟಿಎಸ್, ಹಾವೇರಿ, ಶಿರಸಿ ಮತ್ತು ಬಾಗಲಕೋಟೆ ತಂಡಗಳು ಮಂಗಳವಾರ ಇಲ್ಲಿ ಆರಂಭವಾದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂ.)ವ್ಯಾಪ್ತಿಯ ಅಂತರ ವಿಭಾಗೀಯ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿವೆ.
ಶಿರೂರು ಲೇ ಔಟ್‌ನಲ್ಲಿರುವ ಬಾಣಜಿ ಡಿ. ಕಿಮ್ಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ‘ಎ’ಗುಂಪಿನಲ್ಲಿ ಶಿರಸಿ, ಧಾರವಾಡ, ಅಧಿಕಾರಿಗಳ ತಂಡ, ಎರಡನೇ ಗುಂಪಿನಲ್ಲಿ ಹುಬ್ಬಳ್ಳಿ ಗ್ರಾಮೀಣ, ಬಾಗಲಕೋಟೆ, ಆರ್‌ಡಬ್ಲ್ಯುಎಸ್, ‘ಸಿ’ ಗುಂಪಿನಲ್ಲಿ ಗದಗ, ಹಾವೇರಿ, ಕೇಂದ್ರ ಕಚೇರಿ, ನಾಲ್ಕನೇ ಗುಂಪಿನಲ್ಲಿ ಚಿಕ್ಕೋಡಿ, ಹುಬ್ಬಳ್ಳಿ ಬಿಆರ್‌ಟಿಎಸ್ ನಗರಮತ್ತು ಬೆಳಗಾವಿ ವಿಭಾಗೀಯ ತಂಡಗಳು ಪಾಲ್ಗೊಂಡಿವೆ.
ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯಗಳಲ್ಲಿ ಹಾವೇರಿ–ಶಿರಸಿ, ಬಾಗಲಕೋಟೆ–ಹುಬ್ಬಳ್ಳಿ ನಗರ ಬಿಆರ್‌ಟಿಎಸ್‌ತಂಡಗಳು ಪೈಪೋಟಿ ನಡೆಸಲಿವೆ. ಈ ಪಂದ್ಯಗಳಲ್ಲಿ ಗೆಲುವು ಪಡೆದ ಎರಡು ತಂಡಗಳು ಪ್ರಶಸ್ತಿಗಾಗಿ ಹೋರಾಡಲಿದ್ದು, ತಲಾ 15 ಓವರ್‌ಗಳ ಪಂದ್ಯಗಳು ಜರುಗಲಿವೆ.
ಉದ್ಘಾಟನೆ: ವಾ.ಕ.ರ.ಸಾ.ಸಂ.ಅಧ್ಯಕ್ಷ ವಿ.ಎಸ್.ಪಾಟೀಲ ಬಲೂನು ಹಾರಿ ಬಿಡುವ ಮೂಲಕ ಟೂರ್ನಿಗೆ ಚಾಲನೆ ನೀಡಿ ಮಾತನಾಡಿ ‘ವರ್ಷಪೂರ್ತಿ ಕಷ್ಟಪಟ್ಟು ಕೆಲಸ ಮಾಡುವ ಕಾರ್ಮಿಕರಿಗೆ ಕ್ರೀಡಾಕೂಟ ಇನ್ನಷ್ಟು ಶ್ರಮದಿಂದ ಕೆಲಸ ಮಾಡಲು ಸ್ಫೂರ್ತಿಯಾಗಲಿ’ ಎಂದು ಹಾರೈಸಿದರು.
ವಾ.ಕ.ರ.ಸಾ.ಸಂ. ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ‘ನಮ್ಮ ಇಲಾಖೆಯಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಅವರಿಗೆ ಅವಕಾಶ ನೀಡುವ ಜೊತೆಗೆ ಸಿಬ್ಬಂದಿಗೆ ಫಿಟ್‌ನೆಸ್ ಕಾಯ್ದುಕೊಳ್ಳಲು ಕ್ರೀಡಾಕೂಟ ಅನುಕೂಲವಾಗಲಿದೆ’ ಎಂದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಪಿ.ವೈ. ನಾಯಕ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ಕೇಂದ್ರ ಕ್ರೀಡಾ ಮತ್ತು ಕಲಾ ಸಮಿತಿ ಸದಸ್ಯರಾದ ಪಿ. ಮಂಜುನಾಥ, ಸುನೀಲ ಪತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.