ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರುವರಿ 17ರಂದು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲಿದ್ದು, ಜಿಲ್ಲೆಯಲ್ಲಿನ ದುಡಿಯುವ ಮಹಿಳೆಯರ ನಿರೀಕ್ಷೆಗಳು ಗರಿಗೆದರಿವೆ.
ಬೀಡಿ ಕಟ್ಟುವುದು, ಕಟ್ಟಡ ನಿರ್ಮಾಣ, ಮಂಡಕ್ಕಿ ಭಟ್ಟಿ, ಗಾರ್ಮೆಂಟ್ಸ್, ಮನೆಗೆಲಸ, ಆಶಾ, ಅಂಗನವಾಡಿ, ಆರೋಗ್ಯ ಇನ್ನಿತರ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರ ಸ್ಥಿತಿ ಶೋಚನೀಯವಾಗಿದ್ದು, ಕೆಲಸಕ್ಕೆ ತಕ್ಕ ವೇತನ ಮತ್ತು ಉದ್ಯೋಗ ಖಾತರಿ ಜತೆಗೆ ಅಗತ್ಯ ಸೌಲಭ್ಯ ಒದಗಿಸುವಂತೆ ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
‘ದಾವಣಗೆರೆಯಲ್ಲಿ ಅಂದಾಜು 15ರಿಂದ 20,000ದಷ್ಟು ಬೀಡಿ ಕಾರ್ಮಿಕರಿದ್ದಾರೆ. ಆದರೆ, ಕಾರ್ಮಿಕ ಇಲಾಖೆಯಲ್ಲಿ ಅವರ ಸಂಖ್ಯೆಯ ನಿಖರ ಮಾಹಿತಿ ಇಲ್ಲ. ಬೀಡಿ ಕಟ್ಟುವ
ಮಹಿಳೆಯರಲ್ಲಿ ಶೇ 99ರಷ್ಟು ಅಲ್ಪಸಂಖ್ಯಾತ ರಾಗಿದ್ದು, ಸರ್ಕಾರ ಈ ಕಾರ್ಮಿಕರಿಗೆ ಗುರುತಿನ ಚೀಟಿ, ಬೀಡಿ ಡಿಸ್ಪೆನ್ಸರಿ, ಜೀವನಧಾರಿತ ವೇತನ,
ಭವಿಷ್ಯನಿಧಿ, ಬೋನಸ್ ಇತರೆ ಸೌಲಭ್ಯಗಳನ್ನು ನೀಡುತ್ತಿಲ್ಲ. ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಬೇಕು. ವಸತಿ, ಕೊಳೆಗೇರಿಗಳಲ್ಲಿನ ಮನೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು’ ಎಂಬುದು ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷರಾದ ಜಬೀನಾ ಖಾನಂ ಅವರ ಒತ್ತಾಯ.
‘ಜಿಲ್ಲೆಯಲ್ಲಿರುವ 800 ಮಂಡಕ್ಕಿ ಭಟ್ಟಿಗಳಲ್ಲಿ 10,000ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಮಂಡಕ್ಕಿ ಉರಿಯಬೇಕೆಂದರೆ ಅದಕ್ಕೆ ಮುಖ್ಯವಾಗಿ ಉಪ್ಪು ಹಚ್ಚಬೇಕು ಈ ಕೆಲಸ ಮಾಡುವವರು ಮಹಿಳೆಯರೇ ಆಗಿದ್ದಾರೆ. 8ರಿಂದ 9 ಗಂಟೆ ದೂಳಿನಲ್ಲಿ ಕೆಲಸ ಮಾಡುವ ಮಹಿಳೆಯರ ಬದುಕು ಹಸನಾಗಿಲ್ಲ. ಅಸಂಘಟಿತರಾಗಿರುವ ಇವರಿಗೂ ಗುರುತಿನ ಚೀಟಿ ಕೊಡುವ ಜೊತೆಗೆ ಸಾಮಾಜಿಕ ಭದ್ರತೆ ಒದಗಿಸಲು ಯೋಜನೆ’ ರೂಪಿಸಬೇಕೆಂಬುದು ಅವರ ಮನವಿ.
‘ರಾಜ್ಯ ಸರ್ಕಾರವು 9 ಜಿಲ್ಲೆಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಸಲುವಾಗಿ ಜಿಲ್ಲಾ ಆಸ್ಪತ್ರೆಯನ್ನು ಖಾಸಗಿಯವರಿಗೆ ಹಸ್ತಾಂತರಿಸಲು ನಿರ್ಧರಿಸಿದೆ. ಇದರಲ್ಲಿ ದಾವಣಗೆರೆಯ ಜಿಲ್ಲಾ ಚಿಗಟೇರಿ ಆಸ್ಪತ್ರೆಯೂ ಸೇರಿದ್ದು, ಖಾಸಗಿಯವರಿಗೆ ಹಸ್ತಾಂತರಿಸುವ ನಿರ್ಧಾರವನ್ನು ಕೈಬಿಡಬೇಕು. ಬಡವರು, ದುಡಿಯುವ ಮಹಿಳೆಯರಿಗೆ ಆಸರೆಯಾಗಿರುವ ಚಿಗಟೇರಿ ಆಸ್ಪತ್ರೆಗೆ ಹೆಚ್ಚು ಅನುದಾನ ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿಪಡಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಅನುದಾವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು’ ಎಂಬುದೂ ಅವರ ಆಗ್ರಹ.
ಕನಿಷ್ಠ ವೇತನ ಖಾತರಿಪಡಿಸಿ: ‘ಆಶಾ, ಅಂಗನವಾಡಿ, ಐಸಿಡಿಎಸ್ ಮುಂತಾದ ಯೋಜನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಕನಿಷ್ಠ ₹ 25,000 ವೇತನ ಖಾತರಿ ಪಡಿಸಬೇಕು’ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕೆ. ಭಾರತಿ ಒತ್ತಾಯಿಸಿದ್ದಾರೆ.
‘ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ, ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಸ್ತುತ 5 ಕೆ.ಜಿ. ಅಕ್ಕಿ ನೀಡುತ್ತಿದ್ದು, ಮೊದಲಿನಂತೆ 10 ಕೆ.ಜಿ. ವಿತರಿಸಬೇಕು. ಇತರೆ ಅವಶ್ಯ ಪದಾರ್ಥಗಳಾದ ಬೇಳೆ, ಸಕ್ಕರೆ, ಉಪ್ಪು ಮತ್ತು ಎಣ್ಣೆಯನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಬಲಪಡಿಸಬೇಕು. ಮಕ್ಕಳು ಮತ್ತು ಮಹಿಳೆಯರಲ್ಲಿನ ಅಪೌಷ್ಟಿಕತೆ ನಿವಾರಿಸಲು ಕ್ರಮ ಕೈಗೊಳ್ಳುವ ಜತೆಗೆ, ವಿದ್ಯಾರ್ಥಿನಿಯರಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಕಾಲೇಜು ಹಂತದವರೆಗೂ ಬಿಸಿಯೂಟ ಯೋಜನೆಯನ್ನು ವಿಸ್ತರಿಸಬೇಕು. ವಿಧವಾ, ವೃದ್ಧಾಪ್ಯ, ಅಂಗವಿಕಲರ ಮಾಸಾಶನ ಹೆಚ್ಚಿಸಬೇಕು’ ಎನ್ನುವ ಬೇಡಿಕೆಗಳು ಅವರದ್ದಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.