ADVERTISEMENT

ದಾವಣಗೆರೆ | ರಾತ್ರಿ ವೇಳೆ ಬಸ್‌ಗಳೇ ಇಲ್ಲ; ಪರದಾಟ ತಪ್ಪಿಲ್ಲ

ಮಧ್ಯ ಕರ್ನಾಟಕದ ಕೇಂದ್ರ ಸ್ಥಾನದಿಂದ ರಾಜಧಾನಿಗಿಲ್ಲ ಸೂಕ್ತ ಬಸ್‌ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 6:59 IST
Last Updated 21 ಜನವರಿ 2024, 6:59 IST
ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ   

ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಸ್ಥಾನ ದಾವಣಗೆರೆಯಿಂದ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಕೆಲ ನಗರಗಳಿಗೆ ರಾತ್ರಿ ವೇಳೆ ಸಮರ್ಪಕ ಬಸ್‌ ಸೌಲಭ್ಯ ಇಲ್ಲದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ.

ರಾತ್ರಿ 11ರ ಬಳಿಕ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಸಮರ್ಪಕ ಬಸ್‌ ಇಲ್ಲದೇ ಗಂಟೆಗಟ್ಟಲೇ ನಿಲ್ದಾಣದಲ್ಲೇ ಕಾಯುವ ಸ್ಥಿತಿ ಇದೆ. ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ದಾವಣಗೆರೆಯ ವಿಭಾಗೀಯ ಕೇಂದ್ರದಿಂದ ಬೆಂಗಳೂರಿಗೆ ಬಸ್‌ಗಳೇ ಇಲ್ಲ. ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಬೇರೆ ಜಿಲ್ಲೆಗಳಿಂದ ಬರುವ ಬಸ್‌ಗಳನ್ನೇ ಪ್ರಯಾಣಿಕರು ಅವಲಂಬಿಸಬೇಕಿದೆ.

ಹುಬ್ಬಳ್ಳಿ, ಮಂಗಳೂರಿಗೂ ಸಮರ್ಪಕ ಬಸ್‌ ಸೌಲಭ್ಯ ಇಲ್ಲ. ರಾತ್ರಿ 12ರ ನಂತರ ನಿಲ್ದಾಣಕ್ಕೆ ಹೋದವರು ಬಸ್‌ಗಳಿಗಾಗಿಯೇ ಒಂದು, ಇಲ್ಲವೇ ಎರಡು ಗಂಟೆ ಕಾಯುತ್ತಾ ಕುಳಿತುಕೊಳ್ಳಬೇಕು. ಇದರಿಂದ ತುರ್ತು ಸಂದರ್ಭದಲ್ಲಿ ಮಹಾನಗರಗಳನ್ನು ಸಮಯಕ್ಕೆ ಸರಿಯಾಗಿ ತಲುಪಲು ಆಗುತ್ತಿಲ್ಲ. ಹುಬ್ಬಳ್ಳಿ, ಮಂಗಳೂರು, ಧರ್ಮಸ್ಥಳ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಇನ್ನಿತರ ನಗರಗಳಿಗೆ ಪ್ರಯಾಣ ಬೆಳೆಸುವವರು ಹರಿಹರಕ್ಕೆ ಹೋಗಿ ಅಲ್ಲಿಂದ ಬೇರೆ ಬಸ್‌ಗಳನ್ನು ಏರಬೇಕು. ರಾತ್ರಿ 12ರ ನಂತರ ದಾವಣಗೆರೆಯಿಂದ ಹರಿಹರಕ್ಕೆ ಹೋಗಬೇಕೆಂದರೂ ಬಸ್‌ಗಾಗಿ ಕನಿಷ್ಠ 1 ಗಂಟೆ ಕಾಯಬೇಕು ಎಂದು ಪ್ರಯಾಣಿಕರು ದೂರುತ್ತಾರೆ.

ADVERTISEMENT

ಬೆಂಗಳೂರಿಗೆ ಸರಿಯಾದ ಸಮಯಕ್ಕೆ ಬಸ್‌ ಸಿಗದ್ದಕ್ಕೆ ಆಕ್ರೋಶಗೊಂಡಿದ್ದ ಪ್ರಯಾಣಿಕರು ಈಚೆಗೆ ಚಾಲಕರು, ನಿರ್ವಾಹಕರು ಹಾಗೂ ಡಿಪೊ ವ್ಯವಸ್ಥಾಪಕರೊಂದಿಗೆ ವಾಗ್ವಾದ ನಡೆಸಿದ್ದರು. ‘ಶಕ್ತಿ’ ಯೋಜನೆ ಜಾರಿಯಾದಾಗಿನಿಂದಲೂ ಬಸ್‌ಗಳ ಕೊರತೆ ಹೆಚ್ಚಿದೆ. 

‘ಬಸ್‌ ಸಿಕ್ಕರೂ ಸೀಟು ಸಿಗುವುದಿಲ್ಲ. ದೂರದ ಬೆಂಗಳೂರಿಗೆ 5–6 ಗಂಟೆ ನಿಂತು ಪ್ರಯಾಣ ಮಾಡಲು ಆಗುತ್ತದೆಯೇ. ರಾಜಹಂಸ, ಐರಾವತದಂತಹ ದುಬಾರಿ ದರದ ಬಸ್‌ಗಳಲ್ಲಿ ಬಡವರು ಪ್ರಯಾಣಿಸಲು ಸಾಧ್ಯವೇ. ಬಸ್‌ ಇಲ್ಲದೇ ಇರುವುದರಿಂದ ರಾತ್ರಿ ಸಮಯದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರ ಪರದಾಟ ಹೇಳತೀರದು’ ಎಂದು ಪ್ರಯಾಣಿಕರೊಬ್ಬರು ಕಿಡಿಕಾರಿದರು. 

‘ರಾತ್ರಿ 11.30ರ ನಂತರ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿರುತ್ತದೆ. ರಾತ್ರಿ 1 ಇಲ್ಲವೇ 2 ಗಂಟೆಯ ನಂತರ ಬಸ್‌ ನಿಲ್ದಾಣಕ್ಕೆ ಹೋದರೆ ಬೆಳಗಿನ ಜಾವ 5ರವರೆಗೆ ಬಸ್‌ಗಳಿಗಾಗಿ ಕಾಯಬೇಕು. ಕನಿಷ್ಠ ಗಂಟೆಗೊಂದು ಬಸ್‌ ಸೌಲಭ್ಯ ಕಲ್ಪಿಸಿದರೂ ಅನುಕೂಲವಾಗಲಿದೆ’ ಎಂದು ನಿಯಮಿತವಾಗಿ ಬೆಂಗಳೂರಿಗೆ ಪ್ರಯಾಣಿಸುವ ಆನಂದ್ ರಾವ್‌ ಹೇಳಿದರು.

‘ಬೆಳಗಿನ ಜಾವ 4.30ಕ್ಕೆ ಎಲೆಕ್ಟ್ರಿಕ್‌ ಬಸ್‌ ಬರುತ್ತದೆ. ಅದರಲ್ಲಿ ಪ್ರಯಾಣಿಸಬೇಕೆಂದರೆ ದುಪ್ಪಟ್ಟು ದರ ನೀಡಬೇಕು. ಸಾಮಾನ್ಯರಿಂದ ಅದು ಸಾಧ್ಯವಿಲ್ಲ. ಹುಬ್ಬಳ್ಳಿ, ಬೆಳಗಾವಿಯಿಂದ ಬರುವ ಕೆಲ ಬಸ್‌ಗಳೂ ಎಂಟ್ರಿ ಮಾಡಿಸಿಕೊಂಡು ಹಾಗೆಯೇ ಹೋಗುತ್ತವೆ’ ಎಂದು ಪ್ರಯಾಣಿಕ ಪ್ರವೀಣ್‌ ಕುಲಕರ್ಣಿ ತಿಳಿಸಿದರು.

‘ಮಧ್ಯ ಕರ್ನಾಟಕದ ಕೇಂದ್ರ ಸ್ಥಾನ ದಾವಣಗೆರೆಯಿಂದಲೇ ರಾಜಧಾನಿಗೆ ಬಸ್‌ ಇಲ್ಲದಿರುವುದು ವಿಪರ್ಯಾಸ. ಹೆಚ್ಚಿನ ಬಸ್‌ಗಳನ್ನು ಓಡಿಸಿದರೆ ಅನುಕೂಲವಾಗಲಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಪ್ರದೀಪ್‌ ಮನವಿ ಮಾಡಿದರು.

ದಾವಣಗೆರೆಯಿಂದ–ಬೆಂಗಳೂರಿಗೆ ಹೋಗಲು ಕೆಎಸ್‌ಆರ್‌ಟಿಸಿ ಬಸ್‌ಗಳು ಸಿಗದ್ದಕ್ಕೆ ಆಕ್ರೋಶಗೊಂಡಿದ್ದ ಪ್ರಯಾಣಿಕರು ಈಚೆಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದರು (ಸಂಗ್ರಹ ಚಿತ್ರ)

‘ಹೆಚ್ಚಿನ ಬಸ್‌ ನೀಡಿದರೆ ಓಡಿಸಲು ಕ್ರಮ’ ‘ದಾವಣಗೆರೆಯಿಂದ ರಾತ್ರಿ 11.45ರ ನಂತರ ನಮ್ಮ ವಿಭಾಗೀಯ ಕೇಂದ್ರದಿಂದ ಬೇರೆ ನಗರಗಳಿಗೆ ಬಸ್‌ ವ್ಯವಸ್ಥೆ ಇಲ್ಲ. ಆದರೆ ಬೆಳಗಾವಿ ಹುಬ್ಬಳ್ಳಿ ಸೇರಿದಂತೆ ಬೇರೆ ವಿಭಾಗೀಯ ಕೇಂದ್ರದಿಂದ ಬಸ್‌ಗಳು ಬರುತ್ತವೆ. ಇಂತಹ 32 ಬಸ್‌ಗಳು ದಾವಣಗೆರೆ ಮಾರ್ಗದಿಂದ ಬೆಂಗಳೂರಿಗೆ ಸಂಚರಿಸುತ್ತವೆ. ಬೆಳಿಗ್ಗೆ 5ರ ನಂತರ ನಮ್ಮ ವಿಭಾಗದಿಂದ ಬಸ್‌ ವ್ಯವಸ್ಥೆ ಇದೆ. ಹೆಚ್ಚಿನ ಬಸ್‌ಗಳನ್ನು ಒದಗಿಸಿದರೆ ಗಂಟೆಗೊಂದು ಬಸ್‌ ಓಡಿಸಲು ನಮ್ಮ ಅಭ್ಯಂತರವೇನೂ ಇಲ್ಲ’ ಎಂದು ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಈ. ಶ್ರೀನಿವಾಸಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬೇಡಿಕೆಗೆ ಅನುಗುಣವಾಗಿ ಬಸ್‌ಗಳನ್ನು ಒದಗಿಸುವಂತೆ ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದೇವೆ. ನಿಗಮದಿಂದ ಹೆಚ್ಚಿನ ಬಸ್‌ ನೀಡಿದರೆ ರಾತ್ರಿ ವೇಳೆ ಓಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು. 

ನಿಲ್ದಾಣಕ್ಕೆ ಬಾರದ ಬಸ್‌ಗಳು ‘ರಾತ್ರಿ ವೇಳೆ ಕೆಲವೊಂದು ಬಸ್‌ಗಳು ನಿಲ್ದಾಣಕ್ಕೆ ಬರುವುದೇ ಇಲ್ಲ. ಪಿ.ಬಿ. ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತವೆ. ಹುಬ್ಬಳ್ಳಿ ಸೇರಿ ಇತರೆಡೆ ಹೋಗುವ ಬಸ್‌ಗಳದ್ದೂ ಇದೇ ಸ್ಥಿತಿ. ಬಸ್‌ ನಿಲ್ದಾಣಕ್ಕೆ ಬರದೇ ಹಾಗೇ ಹರಿಹರ ಮಾರ್ಗವಾಗಿ ಹೋಗುತ್ತವೆ’ ಎಂದು ಪ್ರಯಾಣಿಕರು ಕಿಡಿಕಾರುತ್ತಾರೆ. ‘ದಾವಣಗೆರೆ ಮಾರ್ಗದಲ್ಲಿ ಹೋಗುವ ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುತ್ತವೆ. ಇಲ್ಲಿ ನಿಲುಗಡೆ ಇಲ್ಲದ ಬಸ್‌ಗಳು ಹಾಗೆಯೇ ಹೋಗುತ್ತವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿಲ್ದಾಣದ ನಿರ್ವಾಹಕರೊಬ್ಬರು ಸಮಜಾಯಿಸಿ ನೀಡಿದರು. ರಾತ್ರಿ ಹೊತ್ತು ಮಹಿಳಾ ಪ್ರಯಾಣಿಕರು ಹೆಚ್ಚು ಶಕ್ತಿ ಯೋಜನೆ ಬಳಿಕ ಪುಣ್ಯಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಿಗೆ ಹೋಗುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು ಇದರಿಂದ ಬಸ್‌ಗಳು ಭರ್ತಿಯಾಗಿದ್ದರೆ ಚಾಲಕರು ನಿಲ್ದಾಣಕ್ಕೆ ಬರುವುದೇ ಇಲ್ಲ. ಇನ್ನೂ ಗುಳೆ ಹೋಗುವವರೂ ಇರುತ್ತಾರೆ. ಹೆಚ್ಚಿನ ಬಸ್‌ ಓಡಿಸಿದರೆ ಅನುಕೂಲವಾಗಲಿದೆ ಎಂದು ಧರ್ಮಸ್ಥಳಕ್ಕೆ ಹೊರಟಿದ್ದ ಜಗಳೂರಿನ ಗೌರಮ್ಮ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.