ADVERTISEMENT

2024ರ ಜನವರಿ ವೇಳೆಗೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ: ಪೇಜಾವರ ಸ್ವಾಮೀಜಿ

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 5:12 IST
Last Updated 13 ಡಿಸೆಂಬರ್ 2022, 5:12 IST
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ   

ದಾವಣಗೆರೆ: ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, 2024ರ ಜನವರಿಯಲ್ಲಿ ಮಕರ ಸಂಕ್ರಾಂತಿ ನಂತರ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೇವೇರಲಿದೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಮಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಂಬಗಳ ಅಳವಡಿಕೆ ಹಾಗೂ ಗೋಡೆ ಕಟ್ಟುವ ಕಾಮಗಾರಿ ಪ್ರಗತಿಯಲ್ಲಿದೆ. 2023ರ ಅಂತ್ಯಕ್ಕೆ ಎಲ್ಲ ಕಾಮಗಾರಿಗಳು ಮುಕ್ತಾಯವಾಗಲಿವೆ’ ಎಂದರು.

‘ಹಿರಿಯ ಗುರುಗಳ ನೆರಳಿನಲ್ಲೇ ಬೆಳೆದ ನಾವು ಪರಿಶಿಷ್ಟ ಜಾತಿಯವರ ಕೇರಿಗಳಿಗೆ ಭೇಟಿ ನೀಡುವ ಸಾಮಾಜಿಕ ಕೆಲಸವನ್ನು ಮುಂದುವರೆಸಿದ್ದೇವೆ. ಆದರೆ ಆ ಬಗ್ಗೆ ಹೆಚ್ಚು ಪ್ರಚಾರ ಆಗುತ್ತಿಲ್ಲ. ತೋರಿಕೆಗೆ ದಲಿತರ ಕೇರಿಗೆ ಭೇಟಿ ನೀಡುವುದೇ ಆಗಬಾರದು. ಪಾದಪೂಜೆಗೆ ಯಾರು ಕರೆದರೂ ಹೋಗುತ್ತೇವೆ. ಪಾದಪೂಜೆ ಅವರವರಿಗೆ ಬಿಟ್ಟಿದ್ದು, ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ’ ಎಂದು ಅವರು ತಿಳಿಸಿದರು.

ADVERTISEMENT

‘ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ಆವರಣದಲ್ಲಿ ಅನ್ಯಮತೀಯರು ವ್ಯಾಪಾರ- ವಹಿವಾಟು ನಡೆಸುವಂತಿಲ್ಲ ಎಂಬುದು ಸರ್ಕಾರದ ನಿಯಮವಾಗಿದೆ. ಅದನ್ನು ಅನುಷ್ಠಾನಗೊಳಿಸುವುದರಲ್ಲಿ ತಪ್ಪೇನಿಲ್ಲ. ಆದರೆ, ಅಂತಹ ಪರಿಸ್ಥಿತಿ ತಂದುಕೊಂಡಿದ್ದು ಯಾರು ಎಂಬುದರ ಬಗ್ಗೆಯೂ ಚರ್ಚೆಯಾಗಬೇಕು. ಅದೇ ರೀತಿ ಲವ್ ಜಿಹಾದ್, ಮತಾಂತರ ತಡೆಗೂ ಕಾನೂನು ಇದೆ. ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕಾದದ್ದು ಸರ್ಕಾರದ ಕೆಲಸ. ಸಮಾಜಕ್ಕೆ ಯಾವುದೇ ರೀತಿಯ ಹಾನಿ ಆಗಬಾರದು. ಯಾವುದೇ ಸಮಾಜಕ್ಕೆ ಅನ್ಯಾಯವಾದರೆ ಸಹಿಸಿಕೊಂಡಿರಬೇಕು ಎಂಬುದೂ ಸರಿಯಲ್ಲ’ ಎಂದು ಅವರು ಹೇಳಿದರು.

‘ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಸ್ವಂತ ಲಾಭ ನೋಡುತ್ತಾರೆ. ಇದಕ್ಕೆ ರಾಜಕಾರಣಿಗಳು, ಮಠಾಧೀಶರು, ಪತ್ರಕರ್ತರೂ ಹೊರತಲ್ಲ. ಅಪರಾಧದ ಹಿನ್ನೆಲೆಯುಳ್ಳವರನ್ನು ಆಯ್ಕೆ ಮಾಡುವುದು ಜನರ ದೌರ್ಬಲ್ಯ. ಇದಕ್ಕಾಗಿ ಅನ್ಯರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಸಮಾಜ ಜಾಗೃತವಾಗುವುದೇ ಎಲ್ಲ ಸಮಸ್ಯೆಗಳಿಗೆ ಪರಿಹಾರ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.