ADVERTISEMENT

ಹೊನ್ನಾಳಿ: ಮಾರುಕಟ್ಟೆಯಲ್ಲಿ ಕರಬೂಜ ಘಮ, ಕೋಟ್ಯಂತರ ರೂಪಾಯಿ ವಹಿವಾಟು

ಎನ್.ಕೆ.ಆಂಜನೇಯ
Published 26 ಫೆಬ್ರುವರಿ 2024, 5:39 IST
Last Updated 26 ಫೆಬ್ರುವರಿ 2024, 5:39 IST
ಹೊನ್ನಾಳಿಯ ತುಂಗಭದ್ರಾ ಸೇತುವೆ ಸಮೀಪದಲ್ಲಿ ಕರಬೂಜ ಹಣ್ಣು ಮಾರಾಟಕ್ಕೆ ಇಟ್ಟಿರುವ ರೈತರು
ಹೊನ್ನಾಳಿಯ ತುಂಗಭದ್ರಾ ಸೇತುವೆ ಸಮೀಪದಲ್ಲಿ ಕರಬೂಜ ಹಣ್ಣು ಮಾರಾಟಕ್ಕೆ ಇಟ್ಟಿರುವ ರೈತರು   

ಹೊನ್ನಾಳಿ: ಪ್ರತಿ ವರ್ಷ ಬೇಸಿಗೆ ಆರಂಭದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಕರಬೂಜ, ಈ ಬಾರಿ ತನ್ನ ಘಮ ಹರಡಲು ಶುರು ಮಾಡಿದೆ.

ಬಣ್ಣ ಹಾಗೂ ಸುವಾಸನೆಯ ಮೂಲಕವೇ ಗ್ರಾಹಕರನ್ನು ಸೆಳೆಯುವ ಹಣ್ಣುಗಳು ಎರಡು ತಿಂಗಳ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸುತ್ತವೆ. ಈ ಹಣ್ಣುಗಳಿಲ್ಲದೇ ಮಹಾ ಶಿವರಾತ್ರಿ ಹಬ್ಬವೇ ಅಪೂರ್ಣ ಎನ್ನುತ್ತಾರೆ ಜನ. 

₹2 ಕೋಟಿಗೂ ಅಧಿಕ ವಹಿವಾಟು: ಫೆಬ್ರುವರಿಯಿಂದ ಮಾರ್ಚ್ ತಿಂಗಳ ಅಂತ್ಯದವರೆಗೆ ಮಾರುಕಟ್ಟೆಯಲ್ಲಿ ಕರಬೂಜ ವಹಿವಾಟು ಹೆಚ್ಚಾಗಿರುತ್ತದೆ. ಪ್ರತಿ ವರ್ಷ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಉತ್ತಮ ಆದಾಯ ತಂದುಕೊಡುತ್ತದೆ. ಸಗಟು ದರದಲ್ಲಿ, ದಿನಕ್ಕೆ ₹8 ರಿಂದ ₹10 ಲಕ್ಷದವರೆಗೂ ಮಾರುಕಟ್ಟೆ ಪಾಲು ಹೊಂದಿರುವ ಈ ಹಣ್ಣು, ಹೆಚ್ಚು ಕಡಿಮೆ ಕೇವಲ ಎರಡು ತಿಂಗಳಲ್ಲಿ ₹2 ಕೋಟಿಗೂ ವಹಿವಾಟು ನಡೆಸುತ್ತದೆ ಎನ್ನುತ್ತಾರೆ ದಲ್ಲಾಳಿಗಳು. 

ADVERTISEMENT

ಹೊಳೆಮಾದಾಪುರದಲ್ಲಿ ಹೆಚ್ಚು: ತಾಲ್ಲೂಕಿನ ಹೊಳೆಮಾದಾಪುರ, ಬೇಲಿಮಲ್ಲೂರು ಮತ್ತು ಹೊನ್ನಾಳಿಯ ತುಂಗಭದ್ರಾ ನದಿಯುದ್ದಕ್ಕೂ ಈ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಹಣ್ಣಿನ ಬೆಳೆಗೆ ಇಬ್ಬನಿ ಹಾಗೂ ಶೀತ ಗುಣ ಹೊಂದಿರುವ ನೆಲ ಸೂಕ್ತವಾದುದು. ತಾಲ್ಲೂಕಿನ ದೇವನಾಯಕನಹಳ್ಳಿ, ಬೇಲಿಮಲ್ಲೂರು ಮತ್ತು ಇತರೆ ಕಡೆಗಳಲ್ಲಿ ನೂರಾರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈ ಹಣ್ಣುಗಳನ್ನು ರೈತರು ಬೆಳೆಯುತ್ತಾರೆ.

ಈ ಬೆಳೆಗೆ ಅಧಿಕ ನೀರು ಹಾಯಿಸುವ ಅಗತ್ಯವಿಲ್ಲ. ಕೇವಲ ಸಗಣಿ ಗೊಬ್ಬರ ಬಳಸಿ ಫಸಲು ತೆಗೆಯಬಹುದು ಎನ್ನುತ್ತಾರೆ ರೈತರಾದ ನೀಲಪ್ಪ, ನಾಗರಾಜ್ ಹಾಗೂ ವಿಶ್ವನಾಥ್.

3 ತಿಂಗಳ ಬೆಳೆ: ಪ್ರತಿ ಡಿಸೆಂಬರ್ ತಿಂಗಳಲ್ಲಿ ಬೀಜ ಬಿತ್ತನೆಗಾಗಿ ಭೂಮಿ ಹದ ಮಾಡಿಕೊಳ್ಳಲಾಗುತ್ತದೆ. ಸಲಾಕೆಯಲ್ಲಿ ಗುಣಿ ಮಾಡಿ, ಸಗಣಿ ಗೊಬ್ಬರ ಹಾಕಲಾಗುತ್ತದೆ. 20 ದಿನ ಬಿಟ್ಟು ನೆನೆಸಿ ಇಟ್ಟ ಬೀಜಗಳನ್ನು ಒಣಬಟ್ಟೆಯಿಂದ ಒರೆಸಿ ಅರಳೆಲೆಯಲ್ಲಿ ಬಟ್ಟೆ ಸುತ್ತಿ ಕಟ್ಟಲಾಗುತ್ತದೆ. 2 ದಿನಕ್ಕೆ ಬೀಜ ಮೊಳಕೆ ಬರುತ್ತವೆ. ಆಮೇಲೆ ಮಡಿ ಮಾಡಿ, ಬೀಜ ಊರಲಾಗುತ್ತದೆ. 8 ದಿನ ಕಳೆಯುವಷ್ಟರಲ್ಲಿ ಎರಡು ಎಲೆಗಳು ಚಿಗುರೊಡೆಯುತ್ತದೆ. ಆಗ ಗುಣಿಗಳಿಗೆ ಗೊಬ್ಬರ ಸಹಿತ ಸಸಿಯನ್ನು ಹಚ್ಚಲಾಗುತ್ತದೆ ಎಂದು ರೈತರೊಬ್ಬರು ಮಾಹಿತಿ ನೀಡಿದರು. 

ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ, ದಾವಣಗೆರೆ, ಹಾವೇರಿ, ರಾಣೆಬೆನ್ನೂರು, ಸವಣೂರು, ಶಿರಾಳಕೊಪ್ಪ, ಬಂಕಾಪುರ, ಕಡೂರು, ಬೀರೂರು, ತರೀಕೆರೆ ಭಾಗಗಳಿಂದ ಇಲ್ಲಿನ ಮಾರುಕಟ್ಟೆಗೆ ಬರುವ ರಾಶಿ ರಾಶಿ ಹಣ್ಣುಗಳ ಖರೀದಿಗೆ ದಲ್ಲಾಳಿಗಳು ಬರುತ್ತಾರೆ. ರಾತ್ರಿ 1 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಯುತ್ತದೆ.

ಹೊನ್ನಾಳಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಕರಬೂಜ ಹಣ್ಣು ಮಾರಾಟದಲ್ಲಿ ತೊಡಗಿರುವ ಅಲ್ಲಾಭಕ್ಷ್

‘ಬೇಸಿಗೆಯ ಮಿತ್ರ’

ಸುಡುವ ಬೇಸಿಗೆಯಲ್ಲಿ ಹಣ್ಣಿನ ಜ್ಯೂಸ್‌ಗೆ ಬೇಡಿಕೆ ಹೆಚ್ಚು. ಕರಬೂಜದಿಂದ ತಯಾರಿಸಿದ ಜ್ಯೂಸ್ ದೇಹಕ್ಕೆ ತಂಪು ನೀಡುತ್ತದೆ. ಕರಬೂಜ ಹಣ್ಣುಗಳಿಂದ ಜ್ಯೂಸ್ ತಯಾರಿಸುವ ವಿಧಾನ ಒಂದೆಡೆಯಾದರೆ ಈ ಹಣ್ಣಿನಿಂದ ತಯಾರಿಸಿದ ಸೀಕರಣೆಯು ಹೋಳಿಗೆ ಪ್ರಿಯರು ನಾಲಗೆ ಚಪ್ಪರಿಸುವಂತೆ ಮಾಡುತ್ತದೆ. ಅದ್ಭುತ ರುಚಿ ಹೊಂದಿರುವ ಕರಬೂಜ ಹಣ್ಣನ್ನು ಮಧುಮೇಹಿಗಳಿಂದ ಹಿಡಿದು ಬಸುರಿ ಬಾಣಂತಿಯರು ಯಾವುದೇ ಆತಂಕವಿಲ್ಲದೇ ಸೇವಿಸಬಹುದು ಎನ್ನುತ್ತಾರೆ ಬೇಲಿಮಲ್ಲೂರಿನ ರೈತರು. ದೇಹದ ಉಷ್ಣಾಂಶ ನಿಯಂತ್ರಿಸುವ ಈ ಹಣ್ಣುಗಳು ಮೂತ್ರಪಿಂಡವನ್ನು ಸ್ವಚ್ಛ ಮಾಡುವ ಕೆಲಸವನ್ನು ಮಾಡುತ್ತವೆ ಎನ್ನುತ್ತಾರೆ ವೈದ್ಯರು. 

3 ತಿಂಗಳಿಗೆ ಫಲಕ್ಕೆ ಬರುವ ಕರಬೂಜ ಹಣ್ಣುಗಳಿಗೆ ಅವುಗಳ ಗಾತ್ರದ ಆಧಾರದಲ್ಲಿ ದರ ನಿಗದಿ ಮಾಡಲಾಗುತ್ತದೆ. ಪ್ರತಿ ದಿನ ಬೆಳಗಿನ ಜಾವ 1 ಗಂಟೆ ಹೊತ್ತಿಗೆ ರೈತರು ಮಾರುಕಟ್ಟೆಗೆ ತರಲು ಆರಂಭಿಸುತ್ತಾರೆ.
–ಅಲ್ಲಾಭಕ್ಷ್, ಹಣ್ಣಿನ ವ್ಯಾಪಾರಿ
ರೈತರು ಬರಗಾಲದಲ್ಲೂ ಕರಬೂಜ ಫಸಲನ್ನು ಮಾರುಕಟ್ಟೆಗೆ ತಂದಿರುವುದು ಈ ಹಣ್ಣಿಗಿರುವ ಮಹತ್ವವನ್ನು ಸಾರುತ್ತದೆ. ರೈತರು ಅಲ್ಪಾವಧಿಯಲ್ಲಿಯೇ ಒಳ್ಳೆಯ ಲಾಭ ಗಳಿಸುತ್ತಾರೆ
–ನಜೀರ್, ಹಣ್ಣಿನ ವ್ಯಾಪಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.